ಕುಲ್ಗಾಮ್: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಪ್ರಮುಖ ಉಗ್ರ ಲತೀಫ್ ಭಟ್ ನನ್ನು ಭಾರತೀಯ ಸೇನೆ ಬುಧವಾರ ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಗ್ರ ಲತೀಫ್ ಭಟ್ ಹತನಾಗಿದ್ದಾನೆ.
ನವೆಂಬರ್ 11ರಂದು ಅಖ್ರಾನ್ ಪ್ರದೇಶದಲ್ಲಿ ಸಿಆರ್‌ಪಿಎಫ್ (CRPF) ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ ಈತ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಕಾರ್ಯಾಚರಣೆಯ ವೇಳೆ ಉಗ್ರನ ಮೃತದೇಹ ಮತ್ತು ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹದ ಗುರುತು ಪತ್ತೆ ಪ್ರಕ್ರಿಯೆ ನಡೆಯುತ್ತಿತ್ತು.
ಆದರೆ ಪಿಟಿಐ ವರದಿಯನ್ನು ಉಲ್ಲೇಖಿಸಿರುವ ಟೈಮ್ಸ್ ಆಫ್ ಇಂಡಿಯಾ, ಲತೀಫ್ ಭಟ್ ಹತನಾಗಿರುವುದನ್ನು ದೃಢಪಡಿಸಿದೆ ಎಂದು ವರದಿ ಮಾಡಿದೆ.
15 ಲಕ್ಷ ರೂ ಬಹುಮಾನ ಘೋಷಿಸಲಾಗಿದ್ದ ಉಗ್ರಗಾಮಿ
ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳಿಗೆ ಬೇಕಾಗಿದ್ದ ಪ್ರಮುಖ ಉಗ್ರನಾಗಿದ್ದ. ಆತನ ಸುಳಿವು ನೀಡಿದವರಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ನವೆಂಬರ್ 11ರಂದು ಕುಲ್ಗಾಮ್‌ನ ಅಖ್ರಾನ್ ಗ್ರಾಮದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಲತೀಫ್ ಭಟ್ ಭಾಗಿಯಾಗಿದ್ದಾನೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಈ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.
ಈ ವಾರದ ಆರಂಭದಲ್ಲಿ ಲತೀಫ್ ಭಟ್‌ನ ಸಹಚರ ಉಮರ್ ನಿಸಾರ್ ದಾರ್ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದ. ಈತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿತ್ತು. ಸೋಮವಾರ ನಡೆದ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡಿದ್ದ ಲತೀಫ್‌ನನ್ನು ಬುಧವಾರ ಮತ್ತೆ ಭದ್ರತಾ ಪಡೆಗಳು ಸುತ್ತುವರಿದಿದ್ದವು.
ಶರಣಾಗಲು ಮನವೊಲಿಸಿದರೂ ಗುಂಡಿನ ದಾಳಿ!
ಕಾರ್ಯಾಚರಣೆ ವೇಳೆ ಲತೀಫ್ ಭಟ್ ಮಸೀದಿಯೊಂದರಲ್ಲಿ ಅಡಗಿಕೊಂಡಿದ್ದ. ಭದ್ರತಾ ಪಡೆಗಳು ಶರಣಾಗುವಂತೆ ಹಲವು ಬಾರಿ ಮನವಿ ಮಾಡಿದರೂ ಆತ ಒಪ್ಪಲಿಲ್ಲ. ಬದಲಾಗಿ ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಎನ್‌ಕೌಂಟರ್ ಆರಂಭವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಡಿಯೋ ಕಾಲ್ ಮೂಲಕ ಶರಣಾಗಲು ಮನವಿ
ಬುಧವಾರ ನಸುಕಿನ ಜಾವ ಸುಮಾರು 2.45ಕ್ಕೆ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ ಆರಂಭವಾಯಿತು. ಇದಕ್ಕೂ ಮುನ್ನ ಪೊಲೀಸರು ವಿಡಿಯೋ ಕಾಲ್ ಮೂಲಕ ಲತೀಫ್ ಭಟ್‌ನೊಂದಿಗೆ ಮಾತನಾಡಿ ಶರಣಾಗುವಂತೆ ಮನವಿ ಮಾಡಿದ್ದರು.
"ನಾವು ನಿಮ್ಮೊಂದಿಗಿದ್ದೇವೆ" ಎಂದು ಅಧಿಕಾರಿಯೊಬ್ಬರು ಆತನಿಗೆ ಹೇಳಿದ್ದರು. ಆದರೆ, ಶರಣಾಗಲು ನಿರಾಕರಿಸಿದ ಲತೀಫ್, "ನಾನು ಅಲ್ಲಾಹ್‌ನನ್ನು ಭೇಟಿಯಾಗಬೇಕು. ನನಗೆ ತುಂಬಾ ಸಂತೋಷವಾಗಿದೆ" ಎಂದು ಉತ್ತರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಲ್ಗಾಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅನಾಯತ್ ಅಲಿ ಮಾತನಾಡಿ, ಲತೀಫ್‌ನನ್ನು ಶರಣಾಗುವಂತೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
"ನಾನೇ ಆತನೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದೆ. ಸಾಕಷ್ಟು ಹೊತ್ತು ಸಂಭಾಷಣೆ ನಡೆಸಿದ್ದೆವು. ನಿನ್ನ ಜೀವನ ಇನ್ನೂ ಮುಂದಿದೆ, ನೀನು ತುಂಬಾ ಚಿಕ್ಕ ವಯಸ್ಸಿನವನು ಎಂದು ಹೇಳಿ ಮನವೊಲಿಸಲು ಪ್ರಯತ್ನಿಸಿದೆವು. ಆದರೆ, ಆತ ನಮ್ಮ ಮಾತು ಕೇಳಲಿಲ್ಲ" ಎಂದು ತಿಳಿಸಿದ್ದಾರೆ.
ಮಸೀದಿಯ ಹೊರಗಡೆಯಿಂದಲೂ ಧ್ವನಿವರ್ಧಕಗಳ ಮೂಲಕ ಶರಣಾಗುವಂತೆ ಮನವಿ ಮಾಡಲಾಗಿತ್ತು. ಆದರೆ, ಬುಧವಾರ ಬೆಳಗಿನ ಜಾವ 2.45ರ ಸುಮಾರಿಗೆ ಆತ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಎನ್‌ಕೌಂಟರ್ ಆರಂಭವಾಯಿತು.
ಮಸೀದಿಯೊಳಗಿನಿಂದ ಗುಂಡಿನ ದಾಳಿ ನಡೆಯುತ್ತಿದ್ದ ಕಾರಣ ಭದ್ರತಾ ಪಡೆಗಳು ಕಾರ್ಯಾಚರಣೆ ವೇಳೆ ಅತ್ಯಂತ ಸಂಯಮದಿಂದ ವರ್ತಿಸಿದವು ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.