ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO), ಭವಿಷ್ಯ ನಿಧಿ (PF) ಖಾತೆಗಳಲ್ಲಿ ಕಡ್ಡಾಯವಾಗಿ ಉಳಿಸಿಕೊಳ್ಳಬೇಕಾದ ಕನಿಷ್ಠ ಮೊತ್ತವನ್ನು (minimum balance) 25% ರಿಂದ 10% ಕ್ಕೆ ಇಳಿಸುವ ಪ್ರಸ್ತಾವನೆಗೆ ಕೇಂದ್ರ ಅನುಮೋದನೆ ನೀಡಿದೆ. ಇದರಿಂದಾಗಿ, PF ಚಂದಾದಾರರು ತಮ್ಮ ನಿವೃತ್ತಿ ಉಳಿತಾಯವನ್ನು ಪಡೆಯುವ ವಿಷಯದಲ್ಲಿ ಹೆಚ್ಚಿನ flexibility ಹೊಂದಲಿದ್ದಾರೆ.
ಈ ಬದಲಾವಣೆಯು ಸದಸ್ಯರು ತಮ್ಮ ಅರ್ಹ ಪಿಎಫ್ ಉಳಿತಾಯದ 90% ವರೆಗೆ ಭಾಗಶಃ ಹಿಂಪಡೆಯುವಿಕೆಯ ಮೂಲಕ ಹಿಂಪಡೆಯಲು ಅನುವು ಮಾಡಿಕೊಡುತ್ತದೆ, ಇದು ಅನ್ವಯವಾಗುವ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ನಿವೃತ್ತಿ ಉಳಿತಾಯವನ್ನು ಹೆಚ್ಚು ಸುಲಭವಾಗಿಸುವ ಗುರಿಯನ್ನು ಹೊಂದಿರುವ ಬದಲಾವಣೆಗಳ ಸರಣಿಯನ್ನು CBT ಅನುಮೋದಿಸಿದೆ, ಇದರಲ್ಲಿ ಪಿಂಚಣಿದಾರರಿಗೆ ವ್ಯವಸ್ಥಿತ ಹಿಂಪಡೆಯುವಿಕೆ ಸೌಲಭ್ಯ ಮತ್ತು ಉದ್ಯೋಗ ಕಳೆದುಕೊಂಡ ನಂತರ ಅಂತಿಮ PF ಪರಿಹಾರವನ್ನು ಬಯಸುವ ಉದ್ಯೋಗಿಗಳಿಗೆ ಕಡಿಮೆ ಕಾಯುವ ಅವಧಿ ಸೇರಿವೆ.
ಪ್ರಮುಖ ಬದಲಾವಣೆಗಳ ಬಗ್ಗೆ ಮಾಹಿತಿ
EPFO ಕನಿಷ್ಠ PF ಬ್ಯಾಲೆನ್ಸ್ ನಿಯಮ: ಸದಸ್ಯರು ಉಳಿತಾಯದ 90% ವರೆಗೆ ಹಿಂಪಡೆಯಬಹುದು
ಹೆಚ್ಚಿನ ನಗದು ಲಭ್ಯತೆ: ನಿಮ್ಮ ಖಾತೆಯಲ್ಲಿ 25% ಬದಲಿಗೆ ಕನಿಷ್ಠ 10% ರಷ್ಟು ಮೊತ್ತವನ್ನು ಮಾತ್ರ ಉಳಿಸಿಕೊಳ್ಳಬೇಕಾಗುತ್ತದೆ. ಇದು ಹೆಚ್ಚಿನ ಬಡ್ಡಿಯ ಸಾಲ ಪಡೆಯದೆಯೇ ತುರ್ತು ವೆಚ್ಚಗಳಿಗಾಗಿ ಹೆಚ್ಚಿನ ಹಣವನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಸ್ವಯಂಚಾಲಿತ ಪಾವತಿಯಲ್ಲ: 90% ಎಂಬುದು ಕನಿಷ್ಠ ಬ್ಯಾಲೆನ್ಸ್ ನಿಯಮದ ಅಡಿಯಲ್ಲಿರುವ ಗರಿಷ್ಠ ಮಿತಿಯಾಗಿದೆ. ಭಾಗಶಃ ಹಿಂಪಡೆಯುವಿಕೆಯು ನಿರ್ದಿಷ್ಟ ಅರ್ಹತಾ ಮಾನದಂಡಗಳು ಮತ್ತು ಅನುಮತಿಸಲಾದ ಉದ್ದೇಶಗಳನ್ನು ಅವಲಂಬಿಸಿರುತ್ತದೆ.
ಅಧಿಸೂಚನೆಗಾಗಿ ಕಾಯಲಾಗುತ್ತಿದೆ: ಈ ನಿಯಮ ಬದಲಾವಣೆಗೆ ಸಿಬಿಟಿ (CBT) ಅನುಮೋದನೆ ನೀಡಿದ್ದು, ಜಾರಿಗೆ ಬರುವ ಮೊದಲು ಅಧಿಕೃತ ಅಧಿಸೂಚನೆ ಹೊರಬೀಳಬೇಕಿದೆ.
ಇತರ ಪ್ರಮುಖ ನಿರ್ಧಾರಗಳು: ಉದ್ಯೋಗ ಕಳೆದುಕೊಂಡ ನಂತರ ಅವಧಿಪೂರ್ವ ಅಂತಿಮ ಪಿಎಫ್ ಇತ್ಯರ್ಥಕ್ಕಾಗಿ ಕಾಯುವ ಅವಧಿಯನ್ನು ಮಂಡಳಿಯು 12 ತಿಂಗಳಿನಿಂದ 2 ತಿಂಗಳಿಗೆ ಇಳಿಸಿದೆ (ಪಿಂಚಣಿ ಹಿಂಪಡೆಯುವಿಕೆ 36 ತಿಂಗಳುಗಳೇ ಇರಲಿದೆ) ಮತ್ತು ನಿವೃತ್ತ ಸದಸ್ಯರಿಗೆ ನಿಯಮಿತ ಪಾವತಿಗಳನ್ನು ಪಡೆಯಲು ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆಯನ್ನು (SWP) ಸಹ ಅನುಮೋದಿಸಿದೆ.
ಸಂಸದ ತೇಜಸ್ವಿ ಸೂರ್ಯ ಮಾಹಿತಿ
ಬೆಂಗಳೂರಿನ ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ ಕಾರ್ಮಿಕರು ಪಿಎಫ್ ಹಣ ಹಿಂಪಡೆಯುವ ವಿಚಾರದಲ್ಲಿ ಎದುರಿಸುತ್ತಿದ್ದ ತೊಡಕುಗಳನ್ನು ಸಂಸದ ತೇಜಸ್ವಿ ಸೂರ್ಯ ಅವರು ಕೇಂದ್ರ ಸರ್ಕಾರದ ಗಮನಕ್ಕೆ ತಂದ ಪರಿಣಾಮವಾಗಿ, ಇಪಿಎಫ್ಒ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಇಂದು ಮೂರು ಪ್ರಮುಖ ಸುಧಾರಣೆಗಳಿಗೆ ಅನುಮೋದನೆ ನೀಡಿದೆ.
ಕಾರ್ಮಿಕರ ಭವಿಷ್ಯ ನಿಧಿ ಖಾತೆಯಲ್ಲಿನ ಹಣವನ್ನು ಅಗತ್ಯ ಸಂದರ್ಭಗಳಲ್ಲಿ ಹಿಂಪಡೆಯಲು ವಿಧಿಸಲಾಗಿದ್ದ ನಿರ್ಬಂಧಗಳು ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ ಕಾರ್ಮಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದವು. ವಿಶೇಷವಾಗಿ, ಭಾಗಶಃ ಹಣ ಹಿಂಪಡೆಯುವ ಸಂದರ್ಭದಲ್ಲಿ ಶೇ.25ರಷ್ಟು ಮೊತ್ತವನ್ನು ಕನಿಷ್ಠ 12 ತಿಂಗಳ ಕಾಲ ಖಾತೆಯಲ್ಲಿಯೇ ಉಳಿಸಬೇಕೆಂಬ ನಿಯಮವು ಕಾರ್ಮಿಕರಿಗೆ ತೊಂದರೆಯಾಗಿತ್ತು.
ದಿನನಿತ್ಯದ ದುಡಿಮೆಯ ಮೂಲಕ ತಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಿದ್ದ ಹಣವನ್ನು ತುರ್ತು ಅಗತ್ಯಗಳ ಸಂದರ್ಭದಲ್ಲಿ ಬಳಸಿಕೊಳ್ಳಲು ಸಾಧ್ಯವಾಗದಿರುವುದು ಸಾವಿರಾರು ಕಾರ್ಮಿಕರ, ಅದರಲ್ಲೂ ಹೆಚ್ಚಿನ ಸಂಖ್ಯೆಯ ಮಹಿಳಾ ಉದ್ಯೋಗಿಗಳ ಆರ್ಥಿಕ ಸಂಕಷ್ಟವನ್ನು ಹೆಚ್ಚಿಸಿತ್ತು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸೆಪ್ಟೆಂಬರ್ 20ರಂದು ಸುಮಾರು 50 ಗಾರ್ಮೆಂಟ್ಸ್ ಕಾರ್ಮಿಕರು ಸಂಸದ ತೇಜಸ್ವಿ ಸೂರ್ಯ ಅವರನ್ನು ಸಂಪರ್ಕಿಸಿ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದರು. ಕಾರ್ಮಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು, ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಶ್ರೀ ಎಂ. ಸತೀಶ್ ರೆಡ್ಡಿ ಅವರೊಂದಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಶ್ರೀ ಮನ್ಸುಖ್ ಮಾಂಡವೀಯ ಅವರನ್ನು ಸಂಪರ್ಕಿಸಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರು.
ಇದರ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ 22ರಂದು ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್ ರೆಡ್ಡಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಗಾರ್ಮೆಂಟ್ಸ್ ಕಾರ್ಮಿಕರ 20 ಸದಸ್ಯರ ನಿಯೋಗವು ಕೇಂದ್ರ ಸಚಿವರನ್ನು ಭೇಟಿ ಮಾಡಿತು. ಕಾರ್ಮಿಕರ ಪ್ರತಿನಿಧಿಗಳು ತಮ್ಮ ಅನುಭವಗಳು, ಪಿಎಫ್ ಹಣ ಹಿಂಪಡೆಯುವಾಗ ಎದುರಾಗುತ್ತಿದ್ದ ಅಡೆತಡೆಗಳು ಹಾಗೂ ಇತರ ಸಮಸ್ಯೆಗಳನ್ನು ಸಚಿವರ ಮುಂದೆ ನೇರವಾಗಿ ಪ್ರಸ್ತಾಪಿಸಿದ್ದರು.
ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಆಡಳಿತಾತ್ಮಕ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದೇ ಜನಪರ ಸರ್ಕಾರದ ನಿಜವಾದ ಬದ್ಧತೆ. ಜನರಿಂದ ಬಂದ ಅಹವಾಲುಗಳನ್ನು ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು, ಅವುಗಳನ್ನು ನೀತಿ ನಿರ್ಧಾರಗಳಾಗಿ ಪರಿವರ್ತಿಸುವ ಕಾರ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಾಡುತ್ತಿದೆ. ಬೊಮ್ಮನಹಳ್ಳಿಯ ಕಾರ್ಮಿಕರ ಬೇಡಿಕೆ ಇಂದು ದೇಶದ ಲಕ್ಷಾಂತರ ಉದ್ಯೋಗಿಗಳಿಗೆ ಅನುಕೂಲವಾಗುವ ಸುಧಾರಣೆಯಾಗಿ ರೂಪುಗೊಂಡಿರುವುದು ಇದಕ್ಕೆ ಸಾಕ್ಷಿ" ಎಂದು ಸಂಸದರು ತಿಳಿಸಿದ್ದಾರೆ.
ಈ ಸುಧಾರಣೆಗಳು ಬೆಂಗಳೂರಿನ ಗಾರ್ಮೆಂಟ್ಸ್ ಕಾರ್ಮಿಕರಿಗೆ ತಕ್ಷಣದ ಪರಿಹಾರ ಒದಗಿಸುವುದರ ಜೊತೆಗೆ ದೇಶದಾದ್ಯಂತ ಇರುವ ಇಪಿಎಫ್ಒ ಸದಸ್ಯರಿಗೂ ಪ್ರಯೋಜನಕಾರಿಯಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಮಿಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅವರ ಹಿತಾಸಕ್ತಿಗೆ ಪೂರಕವಾದ ನಿರ್ಧಾರ ಕೈಗೊಂಡಿರುವ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಮನ್ಸುಖ್ ಮಾಂಡವೀಯ ಅವರಿಗೆ ಸಂಸದ ತೇಜಸ್ವಿ ಸೂರ್ಯ ಧನ್ಯವಾದ ತಿಳಿಸಿದ್ದಾರೆ.