ಜೈರಾಮ್ ರಮೇಶ್ 
ದೇಶ

'ಕಂಗಲಾದ ಪ್ರಧಾನಿ' ಆರ್ಥಿಕ ಪರಿಸ್ಥಿತಿಗೆ ಇತರರನ್ನು ದೂಷಿಸುವ ಬದಲು ಸರ್ಕಾರದ ನೀತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು- ಕಾಂಗ್ರೆಸ್

ತಾವು ಶೀಘ್ರದಲ್ಲೇ 'ನಿರ್ಗಮಿತ ಪ್ರಧಾನಿ' (ಅಧಿಕಾರ ಕಳೆದುಕೊಳ್ಳಲಿರುವ ಪ್ರಧಾನಿ) ಆಗಲಿದ್ದೇವೆ ಎಂಬ ಅರಿವು ಅವರಿಗೆ ಬಂದಿದೆ ಎಂದು ಕಾಂಗ್ರೆಸ್ ಹೇಳಿದೆ.

ನವದೆಹಲಿ: ತಮ್ಮ ಸರ್ಕಾರದ ಆರ್ಥಿಕ ವೈಫಲ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ಕೈಗಾರಿಕೋದ್ಯಮಿಗಳ ಮೇಲೆ ವಾಗ್ದಾಳಿ ನಡೆಸುತ್ತಿದ್ದು, ಸಂಪೂರ್ಣವಾಗಿ 'ಕಂಗಾಲಾಗಿದ್ದಾರೆ' ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ತಾವು ಶೀಘ್ರದಲ್ಲೇ 'ನಿರ್ಗಮಿತ ಪ್ರಧಾನಿ' (ಅಧಿಕಾರ ಕಳೆದುಕೊಳ್ಳಲಿರುವ ಪ್ರಧಾನಿ) ಆಗಲಿದ್ದೇವೆ ಎಂಬ ಅರಿವು ಅವರಿಗೆ ಬಂದಿದೆ ಎಂದು ಕಾಂಗ್ರೆಸ್ ಹೇಳಿದೆ.

ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮೋದಿ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, ದೇಶದ ಆರ್ಥಿಕ ಸವಾಲುಗಳಿಗೆ ಸಂಪತ್ತು ಸೃಷ್ಟಿಸುವವರನ್ನು (ಉದ್ಯಮಿಗಳನ್ನು) ದೂಷಿಸುವ ಬದಲು, ಪ್ರಧಾನಿಯವರು ತಮ್ಮ ಸರ್ಕಾರದ ನೀತಿಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್, ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳಾಗಿದ್ದರೂ, ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲ, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಿಲ್ಲ ಮತ್ತು ಖಾಸಗಿ ಹೂಡಿಕೆ ಇನ್ನೂ ಮಂದಗತಿಯಲ್ಲಿದೆ ಎಂದು ಟೀಕಿಸಿದರು.

"ಪ್ರಧಾನಿಯವರೇ, ಕೇವಲ ಭಾಷಣಗಳನ್ನು ಮಾಡುವುದರಿಂದ ಅಥವಾ ಕೈಗಾರಿಕೋದ್ಯಮಿಗಳಿಗೆ ಸಲಹೆಗಳನ್ನು ನೀಡುವುದರಿಂದ ಆರ್ಥಿಕತೆಯನ್ನು ನಡೆಸಲು ಸಾಧ್ಯವಿಲ್ಲ. ಇದಕ್ಕೆ ಸಮರ್ಥ ನೀತಿಗಳು, ನಂಬಿಕೆಯ ವಾತಾವರಣ ಮತ್ತು ಜವಾಬ್ದಾರಿಯುತ ಸರ್ಕಾರ ಬೇಕು. ದೇಶದ ಕೈಗಾರಿಕಾ ವಲಯವು ಇನ್ನೂ ಉತ್ತಮವಾದ ನಡೆ ಮತ್ತು ನೀತಿಗಳನ್ನು ನಿರೀಕ್ಷಿಸುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ನ 2024ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಾದ 'ನ್ಯಾಯ ಪತ್ರ'ವನ್ನು ಉಲ್ಲೇಖಿಸಿದ ರಮೇಶ್, ತಮ್ಮ ಪಕ್ಷವು ಆಗಲೇ ಆದಾಯದ ಸ್ಥಗಿತ, ಉದ್ಯೋಗ ಸೃಷ್ಟಿಯಲ್ಲಿನ ಕೊರತೆ, ಖಾಸಗಿ ಹೂಡಿಕೆಯಲ್ಲಿನ ಇಳಿಕೆ ಮತ್ತು ಹೆಚ್ಚುತ್ತಿರುವ ಅಸಮಾನತೆಯ ಬಗ್ಗೆ ಎಚ್ಚರಿಸಿತ್ತು ಎಂದು ನೆನಪಿಸಿದರು. ಆ ಸಮಯದಲ್ಲಿ ಮೋದಿ ಅವರು ಈ ಪ್ರಣಾಳಿಕೆಯನ್ನು "ನಗರ ನಕ್ಸಲ್ ಚಿಂತನೆ" ಎಂದು ತಳ್ಳಿಹಾಕಿದ್ದರು ಮತ್ತು ಕಾಂಗ್ರೆಸ್ ಸಂಪತ್ತು ಸೃಷ್ಟಿಸುವವರನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದ್ದರು ಎಂದು ರಮೇಶ್ ಹೇಳಿದರು.

"ನಿನ್ನೆ, ಪ್ರಧಾನ ಮಂತ್ರಿಯವರು FICCI ಕಾರ್ಯಕ್ರಮವೊಂದರಲ್ಲಿ ಉದ್ಯಮಿಗಳನ್ನುದ್ದೇಶಿಸಿ ಮಾತನಾಡಿದ್ದರು. ಅವರು ಮಾತನಾಡಿದ ರೀತಿಯನ್ನು ನೋಡಿದರೆ, ಅವರು ವಿಚಲಿತರಾಗಿದ್ದಾರೆ, ಹತಾಶರಾಗಿದ್ದಾರೆ, ನಿರಾಶರಾಗಿದ್ದಾರೆ, ಕಳವಳಗೊಂಡಿದ್ದಾರೆ ಮತ್ತು ಬೇಸರಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಅವರು ಸಂಪತ್ತನ್ನು ಸೃಷ್ಟಿಸುವವರ ಮೇಲೆಯೇ ವಾಗ್ದಾಳಿ ನಡೆಸಿದರು. ನಾವು ನಮ್ಮ ಪ್ರಣಾಳಿಕೆಯಲ್ಲಿ ಏನು ಹೇಳಿದ್ದೆವೋ, ಅದನ್ನೇ ಅವರು ಪುನರುಚ್ಚರಿಸಿದರು," ಎಂದು ರಮೇಶ್ ಹೇಳಿದರು.

ಸರ್ಕಾರವು ತೆರಿಗೆ ವಿನಾಯಿತಿಗಳನ್ನು ನೀಡಿದ್ದರೂ, ಅದಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿ ಮತ್ತು ವೇತನ ಹೆಚ್ಚಳವಾಗದಿರುವ ಬಗ್ಗೆ ಮೋದಿ ಅವರು ಉದ್ಯಮ ನಾಯಕರನ್ನು ಪ್ರಶ್ನಿಸಿದ್ದನ್ನು ಉಲ್ಲೇಖಿಸಿದ ರಮೇಶ್, ಕಾಂಗ್ರೆಸ್ ಪಕ್ಷವು ಇದೇ ರೀತಿಯ ವಾದಗಳನ್ನು ಮಂಡಿಸಿದಾಗ ಟೀಕೆಗೆ ಗುರಿಯಾಗಿತ್ತು. ಆದರೆ ಈಗ ಪ್ರಧಾನ ಮಂತ್ರಿಯವರೇ ಅದೇ ವಾದಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಅವರು ಶೀಘ್ರದಲ್ಲೇ ಅಧಿಕಾರದಿಂದ ನಿರ್ಗಮಿಸುವ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂಬುದು ಅವರಿಗೆ ಅರಿವಾದಂತಿದೆ. ಹೀಗಾಗಿ, ತಮ್ಮ 'ಜೋಳಿಗೆ' ಕಟ್ಟಿಕೊಂಡು ಹೊರಡುವ ಮುನ್ನ, ಇತರರನ್ನು ದೂಷಿಸುತ್ತಿದ್ದಾರೆ. ಆದರೆ ವಾಸ್ತವವೇನೆಂದರೆ, ಆರ್ಥಿಕ ವೈಫಲ್ಯಗಳಿಗೆ ಅವರ ನೀತಿಗಳೇ ಕಾರಣ ಎಂದು ಅವರು ವಾಗ್ದಾಳಿ ನಡೆಸಿದರು.

ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಒತ್ತಡ ಹೇರುವ ಮತ್ತು ಬೆದರಿಕೆ ಹಾಕುವ ಮೂಲಕ ಸರ್ಕಾರವು ಉದ್ಯಮ ವಲಯದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಆರ್ಥಿಕ ಶಕ್ತಿಯು ಕೆಲವೇ ಕೆಲವು ದೊಡ್ಡ ಉದ್ಯಮ ಸಮೂಹಗಳ ಕೈಯಲ್ಲಿ ಕೇಂದ್ರೀಕೃತವಾಗಿದ್ದು, ಇದು ಸ್ಪರ್ಧಾತ್ಮಕತೆಯನ್ನು ಕುಗ್ಗಿಸಿ, ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಸರ್ಕಾರದ ನೀತಿಗಳು ಹೂಡಿಕೆದಾರರ ವಿಶ್ವಾಸವನ್ನು ಕುಂದಿಸಿವೆ ಮತ್ತು ಆಯ್ದ ಕೆಲವು ಉದ್ಯಮ ಸಮೂಹಗಳು ನಿಯಂತ್ರಕ ಸಂಸ್ಥೆಗಳ ಮೇಲೆ ಪ್ರಭಾವ ಬೀರುವಂತೆ ಮಾಡಿವೆ ಎಂದೂ ಅವರು ಆರೋಪಿಸಿದರು.

ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆಯು (trade deficit) ಹೆಚ್ಚಾಗುತ್ತಿರುವುದನ್ನು ಪ್ರಸ್ತಾಪಿಸಿದ ರಮೇಶ್, ಇದು ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಉದ್ಯಮಗಳ (SME) ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಮತ್ತು ಅವುಗಳಲ್ಲಿ ಹಲವು ಉದ್ಯಮಗಳು ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ ಎಂದು ಹೇಳಿದರು. ನೋಟು ಅಮಾನ್ಯೀಕರಣ (demonetisation) ಮತ್ತು ಸರಕು ಮತ್ತು ಸೇವಾ ತೆರಿಗೆಯ (GST) ಜಾರಿಯು ಸಣ್ಣ ಉದ್ಯಮಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ಅವರು ದೂರಿದರು.

"ನೀವು ಚಪ್ಪಾಳೆ ತಟ್ಟುವುದಿಲ್ಲ ಎಂಬುದು ನನಗೆ ಗೊತ್ತು. ಅದು ನನಗೆ ಚೆನ್ನಾಗಿ ತಿಳಿದಿದೆ, ಏಕೆಂದರೆ ನಿಮ್ಮ ಅಪೇಕ್ಷೆಗಳು ಎಷ್ಟು ದೊಡ್ಡದಾಗಿವೆ ಎಂದರೆ, ನಿಮಗೆ ಎಷ್ಟೇ ನೀಡಿದರೂ ಅದು ಸಾಲದು. 12 ಲಕ್ಷ ರೂಪಾಯಿಗಳವರೆಗೆ ಆದಾಯ ಗಳಿಸುವ ವ್ಯಕ್ತಿಗಳಿಗೆ ನೀಡಲಾದ ಆದಾಯ ತೆರಿಗೆ ವಿನಾಯಿತಿಯನ್ನು ಪ್ರಸ್ತಾಪಿಸಿದ ಅವರು, ಉದ್ಯೋಗಿಗಳ ವೇತನವನ್ನು ಹೆಚ್ಚಿಸಿದ್ದೀರಾ ಅಥವಾ ಉದ್ಯೋಗಿಗಳ ಸಂಖ್ಯೆಯನ್ನು ವಿಸ್ತರಿಸಿದ್ದೀರಾ? ಇಲ್ಲ! ಯಾವಾಗಲೂ 'ಮೋದಿ ಜೀ, ನೀವೇ ಮಾಡಿ; ಮುಂದೆ ಏನಾಗುತ್ತದೋ ನೋಡೋಣ' ಎಂಬ ಧೋರಣೆಯೇ ಇರುತ್ತದೆ. ಹೀಗೆಯೇ ಎಲ್ಲವೂ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ನಮ್ಮಲ್ಲಿ ನೀರಿದ್ದರೆ ಖಂಡಿತ ತಮಿಳುನಾಡಿಗೆ ಕೊಡ್ತೇವೆ, ಈ ವರ್ಷ ಕುಡಿಯುವ ನೀರಿಗೇ ತತ್ವಾರವಾಗಿದೆ ’: ಸಿಎಂ ಡಿ ಕೆ ಶಿವಕುಮಾರ್; Video

ಕಾವೇರಿ ಕದನದಲ್ಲಿ ಮಹಾ ತಿರುವು! ಸುಪ್ರೀಂನಲ್ಲಿ ವಿಜಯ್ ಸರ್ಕಾರದ ಅರ್ಜಿ ವಜಾ ಬೆನ್ನಲ್ಲೇ ಕರ್ನಾಟಕಕ್ಕೆ ಶಾಕ್: ತಮಿಳುನಾಡಿಗೆ ನಿತ್ಯ 2,000 ಕ್ಯೂಸೆಕ್ ನೀರು ಬಿಡಲು CWRC ಶಿಫಾರಸು

ಪಂಜಾಬ್ ಚುನಾವಣೆಗೂ ಮುನ್ನ 'ಕೈ'ಗೆ ಮರ್ಮಾಘಾತ: ಪ್ರಣಾಳಿಕೆ ರಚನೆಯ ಮುಖಂಡನೇ ಬಿಜೆಪಿಗೆ ಸೇರ್ಪಡೆ

2 ತಿಂಗಳಾದರೂ ರೈತರಿಗೆ ತಲುಪದ ಬರ ಪರಿಹಾರ; ಅಧಿಕಾರಿಗಳಿಗೆ DCM ಪರಮೇಶ್ವರ್ ತರಾಟೆ, ತಕ್ಷಣ ನೆರವು ನೀಡಲು ಸೂಚನೆ..!

ಮಂಗಳೂರು: ಹಿಂದೂ ಯುವಕನ ಜೊತೆ ಲವ್; ಮೆಡಿಕಲ್ ಕಾಲೇಜು ಆವರಣದಲ್ಲೇ ಮುಸ್ಲಿಂ ವಿದ್ಯಾರ್ಥಿನಿ ಕಿಡ್ನಾಪ್; Video