ಹಿಸಾರ್: ಸೇನಾ ತರಬೇತಿ ನಡೆಯುತ್ತಿದ್ದ ವೇಳೆ ಟ್ಯಾಂಕ್ ಹರಿದು ಇಬ್ಬರು ಯೋಧರು ಮೃತಪಟ್ಟಿರುವ ದಾರುಣ ಘಟನೆ ಹರಿಯಾಣದ ಹಿಸಾರ್ ಜಿಲ್ಲೆಯ ಭೋಜರಾಜ್ ಗ್ರಾಮದಲ್ಲಿ ನಡೆದಿದೆ.
ಶನಿವಾರ ಈ ಘಟನೆ ನಡೆದಿದ್ದು, ಭಾನುವಾರ ಪೊಲೀಸರು ಮಾಹಿತಿ ನೀಡಿದ್ದಾರೆ. ತರಬೇತಿ ವೇಳೆ ಟ್ಯಾಂಕ್‌ನಿಂದ ಎದ್ದ ಧೂಳಿನಿಂದ ಚಾಲಕನಿಗೆ ಮುಂದೆ ಇದ್ದ ಯೋಧರು ಕಾಣಿಸದೆ ಈ ಅವಘಡ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಾಯಕ್ ಮನೀಶ್ ಕುಮಾರ್ ಮತ್ತು ಬದಾಯೂನ್ ಜಿಲ್ಲೆಯ ನಾಯಕ್ ಅಂಕುಶ್ ಕುಮಾರ್ ಮೃತಪಟ್ಟ ಯೋಧರು. ತರಬೇತಿ ವೇಳೆ ಇಬ್ಬರೂ ಟ್ಯಾಂಕ್‌ನ ಮುಂಭಾಗದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಟ್ಯಾಂಕ್ ಹರಿದ ಪರಿಣಾಮ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹಿಸಾರ್‌ನ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ನೀಡುವ ಮುನ್ನವೇ ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿದುಬರಬೇಕಿದೆ.