ಚಿನ್ನ ಸದ್ಯಕ್ಕೆ ಖರೀದಿಸಬೇಡಿ, ಯೋಜನೆಯನ್ನು ಮುಂದೂಡಿ ಎಂದು ಪ್ರಧಾನಿ ಮೋದಿ ಈ ಹಿಂದೆ ದೇಶದ ಜನತೆಗೆ ಕರೆ ನೀಡಿದ್ದರು. ಅವರು ನೀಡಿದ್ದ ಸಲಹೆಯಿಂದ ವ್ಯಾಪಾರಿಗಳು ನಷ್ಟದಿಂದ ಪಾರಾಗಿದ್ದಾರೆ ಎಂದು ಭಾನುವಾರ ಬಿಜೆಪಿ ಹೇಳಿದೆ. ಮೋದಿಯವರ ಮನವಿಯನ್ನು 'ಡೆತ್ ವಾರಂಟ್' ಎಂದು ಬಣ್ಣಿಸಿ, ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಪಕ್ಷವು ವ್ಯಾಪಾರಿಗಳಲ್ಲಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ (CTI) ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ಚಿನ್ನ ಖರೀದಿಸದಂತೆ ಈ ಹಿಂದೆ ನೀಡಿದ್ದ ಸಲಹೆಗಾಗಿ ಧನ್ಯವಾದ ಅರ್ಪಿಸಿದ ಬೆನ್ನಲ್ಲೇ ಬಿಜೆಪಿ ಈ ಪ್ರತಿಕ್ರಿಯೆ ನೀಡಿದೆ.
ಚಿನ್ನದ ಬೆಲೆ ಪ್ರತಿ ಕೆ.ಜಿ.ಗೆ 1.90 ಕೋಟಿ ರೂಪಾಯಿಯಿಂದ 1.25 ಕೋಟಿ ರೂಪಾಯಿಗೆ ಇಳಿಕೆಯಾಗಿದ್ದು, ಇದರಿಂದ ಲಕ್ಷಾಂತರ ಆಭರಣ ವ್ಯಾಪಾರಿಗಳು, ವರ್ತಕರು ಮತ್ತು ಹೂಡಿಕೆದಾರರು ಭಾರಿ ನಷ್ಟದಿಂದ ಪಾರಾಗಿದ್ದಾರೆ ಎಂದು ಪ್ರಧಾನಿ ನೀಡಿದ್ದ ಸಲಹೆ ನೆರವಾಗಿದೆ ಎಂದು ಚೇಂಬರ್ ಹೇಳಿದೆ. ಅಲ್ಲದೆ, ಚಿನ್ನದ ಬೆಲೆ ಇಳಿಕೆಯಿಂದ ಪ್ರಸ್ತುತ ಮದುವೆ ಸೀಸನ್‌ನಲ್ಲಿ ಅನೇಕ ಭಾರತೀಯರಿಗೆ ಸ್ವಲ್ಪ ನೆಮ್ಮದಿ ದೊರೆತಿದೆ ಎಂದೂ ತಿಳಿಸಿದೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಪ್ರಧಾನಿ ಮೋದಿ ಅವರು ಚಿನ್ನ ಖರೀದಿಸುವುದನ್ನು ಮುಂದೂಡುವಂತೆ ದೇಶದ ಜನರಿಗೆ ಮನವಿ ಮಾಡಿದಾಗ ಕಾಂಗ್ರೆಸ್ ಅದನ್ನು 'ಡೆತ್ ವಾರಂಟ್' ಎಂದು ಕರೆದಿತ್ತು ಎಂದು ಟೀಕಿಸಿದ್ದಾರೆ.
ಜಾಗತಿಕವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರ ಸಲಹೆ ಪಾಲಿಸಿದ ವ್ಯಾಪಾರಿಗಳು ಪ್ರತಿ ಕೆ.ಜಿ. ಚಿನ್ನದ ಮೇಲೆ 65 ಲಕ್ಷ ರೂಪಾಯಿ ನಷ್ಟವಾಗುವುದನ್ನು ತಪ್ಪಿಸಿಕೊಂಡಿದ್ದಾರೆ. ವ್ಯಾಪಾರಿಗಳ ಸಂಘಟನೆಗಳು ಇಂದು ಪ್ರಧಾನಿಯವರಿಗೆ ಧನ್ಯವಾದ ಸಲ್ಲಿಸಿವೆ ಎಂದು ಅವರು ಹೇಳಿದ್ದಾರೆ.
ವ್ಯಾಪಾರಿಗಳನ್ನು ದಾರಿ ತಪ್ಪಿಸಿ, ಅವರಲ್ಲಿ ಆತಂಕ ಸೃಷ್ಟಿಸಿದ್ದಕ್ಕಾಗಿ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ವಕ್ತಾರ ಆಗ್ರಹಿಸಿದ್ದಾರೆ.
ಭಾರತದ ಬಹುಸಂಖ್ಯಾತ ಜನರು ಬಡತನದಲ್ಲಿದ್ದಾಗ ಐಷಾರಾಮಿ ಜೀವನ ನಡೆಸಿದ್ದ ಗಾಂಧಿ-ವಾದ್ರಾ ಕುಟುಂಬವು ಪ್ರಧಾನಿ ಮೋದಿಯವರಿಂದ ಆರ್ಥಿಕ ನಿರ್ವಹಣೆ ಮತ್ತು ಸರಳ ಜೀವನದ ಬಗ್ಗೆ ಪಾಠ ಕಲಿಯಬೇಕು ಎಂದೂ ಪ್ರದೀಪ್ ಭಂಡಾರಿ ಟೀಕಿಸಿದ್ದಾರೆ.