ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ 'ಸುಪ್ರೀಂ' ಸಮ್ಮತಿ
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ಈ ವಿಷಯ ಪ್ರಸ್ತಾಪಿಸಲಾಯಿತು. ಈ ವೇಳೆ ತಮಿಳು ನಾಡು ಸರ್ಕಾರ ನಿಗದಿತ ಸ್ಥಳದಲ್ಲಿ ದೀಪ ಬೆಳಗಿಸಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿತು.
ಮಧುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ದೀಪದ ಕಂಬದ ಮೇಲೆ ಸಾಂಪ್ರದಾಯಿಕ ಕಾರ್ತಿಕ ದೀಪ ಬೆಳಗಿಸಲು ಅನುಮತಿ ನೀಡಿದ್ದ ಸುಪ್ರೀಂ ಕೋರ್ಟ್‌ನ ಆದೇಶ ಪಾಲಿಸುವಲ್ಲಿ ವಿಫಲವಾದ ತಮಿಳುನಾಡು ಸರ್ಕಾರ ವಿರುದ್ಧ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಇಂದು ಬುಧವಾರ ತಿಳಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ಈ ವಿಷಯ ಪ್ರಸ್ತಾಪಿಸಲಾಯಿತು. ಈ ವೇಳೆ ತಮಿಳು ನಾಡು ಸರ್ಕಾರ ನಿಗದಿತ ಸ್ಥಳದಲ್ಲಿ ದೀಪ ಬೆಳಗಿಸಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿತು.
ಈ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳ ವಿವರಗಳನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತಿದೆ ಎಂದು ತಮಿಳು ನಾಡು ಸರ್ಕಾರ ಪರ ವಕೀಲರು ತಿಳಿಸಿದರು. ವರದಿಯನ್ನು ದಾಖಲೆಗೆ ತೆಗೆದುಕೊಳ್ಳುವಂತೆ ಪೀಠವನ್ನು ಕೋರಿದರು.
ದೀಪತ್ತೂಣ್‌ನಲ್ಲಿ ದೀಪ ಬೆಳಗಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗುರುಕೃಷ್ಣ ಕುಮಾರ್, ನಡೆದಿರುವ ಬೆಳವಣಿಗೆಗಳು ಅತ್ಯಂತ ದುರದೃಷ್ಟಕರ ಎಂದು ಹೇಳಿದರು. ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸಿಲ್ಲ ಎಂದು ಆರೋಪಿಸಿದರು.
ನಿಷೇಧಾಜ್ಞೆಗಳು ಜಾರಿಯಲ್ಲಿವೆ ಮತ್ತು ವಿವಾದಿತ ಸ್ಥಳದಲ್ಲಿ ದೀಪ ಬೆಳಗಿಸಲು ಸಾಂಪ್ರದಾಯಿಕ ಆಚರಣೆಗಳು ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿತ್ತು ಎಂದು ವಾದಿಸಿದರು.
ತಂತ್ರಗಾರಿಕೆ ಮತ್ತು ವಿವಿಧ ಉಪಾಯಗಳ ಮೂಲಕ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ ಅವರು, ಜ್ಯೋತಿಯನ್ನು ದೀಪತ್ತೂಣ್‌ಗೆ ಕೊಂಡೊಯ್ದು ಅಲ್ಲಿ ದೀಪ ಬೆಳಗಿಸಬೇಕಿತ್ತು ಎಂದು ಹೇಳಿದರು.
ಮೊನ್ನೆ ನವೆಂಬರ್ 20ರಂದು ಸುಪ್ರೀಂ ಕೋರ್ಟ್, ಅರುಳ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಅಧಿಕೃತಗೊಳಿಸಲಾದ ಸೀಮಿತ ಸಂಖ್ಯೆಯ ತಂಡಕ್ಕೆ ಸರ್ಕಾರಿ ಅಧಿಕಾರಿಗಳೊಂದಿಗೆ ಸೇರಿ ನವೆಂಬರ್ 24ರಂದು ದೀಪತ್ತೂಣ್‌ನಲ್ಲಿ ಕಾರ್ತಿಗೈ ಕ್ರಮವಾಗಿ ದೀಪ ಬೆಳಗಿಸಲು ಅನುಮತಿ ನೀಡಿತ್ತು.
ವ್ಯವಸ್ಥೆಗಳ ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ಮಧುರೈ ಜಿಲ್ಲಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದ ಪೀಠ, ಕಾರ್ಯಕ್ರಮ ನಡೆದ ಮೂರು ದಿನಗಳೊಳಗೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅಲ್ಲದೆ, ಈ ಮಧ್ಯಂತರ ಅನುಮತಿಯು ವಿವಾದಿತ ಸ್ಥಳದ ಮೇಲಿನ ಸಾಂಪ್ರದಾಯಿಕ ಹಕ್ಕುಗಳ ಕುರಿತು ಅಂತಿಮ ತೀರ್ಮಾನವೆಂದು ಪರಿಗಣಿಸಬಾರದು ಎಂದೂ ಸ್ಪಷ್ಟಪಡಿಸಿತ್ತು.