ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಉತ್ತರ ಪ್ರದೇಶ ಚುನಾವಣೆ: ಬಿಎಸ್‌ಪಿ ಜೊತೆ ಮೈತ್ರಿಗೆ ಕಾಂಗ್ರೆಸ್ ಸಜ್ಜು; ಮಾಯಾವತಿಗೆ ಇಮ್ರಾನ್ ಮಸೂದ್ ಸಂದೇಶ!

ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಬಿಎಸ್‌ಪಿ ಜೊತೆಗಿನ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿಲ್ಲ. ಆದರೆ, ಎರಡೂ ಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಾಯಾವತಿ ಅವರೇ ಮುಂದಾಳತ್ವ ವಹಿಸಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇಮ್ರಾನ್ ಮಸೂದ್, ಮಾಯಾವತಿ
Nagaraja AB
Updated On : 26 Nov 2026, 1:33 pm

ಲಖನೌ: ಸಮಾಜವಾದಿ ಪಕ್ಷದ (SP)ಜೊತೆಗಿನ ಸೀಟು ಹಂಚಿಕೆ ಮಾತುಕತೆ ಬಿಕ್ಕಟ್ಟು ಉಂಟಾಗಿರುವಂತೆಯೇ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜ (BSP) ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಿರುವುದಾಗಿ ಸುಳಿವು ನೀಡಿದೆ.

ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಬಿಎಸ್‌ಪಿ ಜೊತೆಗಿನ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿಲ್ಲ. ಆದರೆ, ಎರಡೂ ಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಮಾಯಾವತಿ ಅವರೇ ಮುಂದಾಳತ್ವ ವಹಿಸಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈವರೆಗೆ ಕಾಂಗ್ರೆಸ್ ಮತ್ತು ಬಿಎಸ್‌ಪಿ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಅವರು ತಿಳಿಸಿದ್ದಾರೆ.

"ನಾವು ಇನ್ನೂ ಯಾವುದೇ ಚರ್ಚೆಯನ್ನೇ ನಡೆಸಿಲ್ಲ. ಜಾತ್ಯತೀತತೆಯ ತತ್ವವನ್ನು ಎತ್ತಿಹಿಡಿಯಲು ಬಯಸುವ ಸಮಾನ ಮನಸ್ಕರೆಲ್ಲರೂ ಒಂದಾಗಬೇಕು ಎಂದು ನಾನು ಯಾವಾಗಲೂ ಹೇಳುತ್ತಾ ಬಂದಿದ್ದೇನೆ. ಆದರೆ, ಇದಕ್ಕಾಗಿ ಬೆಹೆನ್‌ಜಿ (ಮಾಯಾವತಿ) ಅವರೇ ಮುಂದೆ ಬರಬೇಕಾಗುತ್ತದೆ. ಆದರೆ ಅವರು ಹಾಗೆ ಮಾಡುತ್ತಿಲ್ಲವಲ್ಲ? ಎಂದು ಸಹರಾನ್‌ಪುರ ಸಂಸದರು ಹೇಳಿದರು.

Advertisement

Advertisement

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಸೀಟು ಹಂಚಿಕೆ ಮಾತುಕತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಸೂದ್, ಮಾತುಕತೆಯ ವೇಳೆ 26 ಸ್ಥಾನಗಳನ್ನು ಕೇಳಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದರು. ಕಾಂಗ್ರೆಸ್ ಅಷ್ಟು ಸ್ಥಾನಗಳನ್ನು ಕೇಳಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನಾವು ಮೈತ್ರಿಕೂಟದೊಳಗೆ ಚರ್ಚೆ ನಡೆಸುತ್ತಿದ್ದೇವು. ದೆಹಲಿಯಲ್ಲಿ ಸಭೆಗಳು ನಡೆದಿದ್ದವು ಆದರೆ ನಾವು 26 ಸ್ಥಾನಗಳನ್ನು ಕೇಳಿಯೇ ಇಲ್ಲ. ನಾವೇನು ​​ಭಿಕ್ಷುಕರಲ್ಲ!" ಎಂದು ಮಸೂದ್ 'ಎಎನ್‌ಐ' (ANI) ಸುದ್ದಿ ಸಂಸ್ಥೆಗೆ ತಿಳಿಸಿದರು.

ಸದ್ಯಕ್ಕೆ, ಬಿಎಸ್‌ಪಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ. ಎಸ್‌ಪಿ-ಕಾಂಗ್ರೆಸ್ ಮೈತ್ರಿಯ ಹೊರತಾಗಿ, ಎಐಎಂಐಎಂ (AIMIM) ಮುಖ್ಯಸ್ಥ ಅಸದುದ್ದೀನ್ ಓವೈಸಿ ಮತ್ತು ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ನಾಯಕ ಚಂದ್ರಶೇಖರ್ ಆಜಾದ್ ಕೂಡ ಚುನಾವಣಾ ಕಣದಲ್ಲಿ ಕೈಜೋಡಿಸಿದ್ದಾರೆ.

ಸ್ಥಾನ ಹಂಚಿಕೆಯ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಸಮಾಜವಾದಿ ಪಕ್ಷ (SP) ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರು ತಮ್ಮ ಮಾತುಕತೆಗಳು ಸೌಹಾರ್ದಯುತವಾಗಿದ್ದವು ಎಂದು ಹೇಳಿಕೊಂಡಿದ್ದಾರೆ. ಮೈತ್ರಿಕೂಟದ ಕುರಿತಾದ ಅಂತಿಮ ಘೋಷಣೆಯು ಮುಂದಿನ ಕೆಲವು ದಿನಗಳಲ್ಲಿ ಹೊರಬೀಳುವ ನಿರೀಕ್ಷೆಯಿದೆ.

Also Read

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ನಿಲುವು ಸಡಿಲಗೊಳಿಸಿದ ಕಾಂಗ್ರೆಸ್; 75-80 ಸ್ಥಾನಗಳಿಗೆ ಸಮ್ಮತಿ?

ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಮಾತನಾಡಿ, ಎರಡೂ ಪಕ್ಷಗಳು ತಮ್ಮ ನಿಲುವುಗಳ ಬಗ್ಗೆ ಚರ್ಚಿಸಿವೆ ಮತ್ತು ಒಪ್ಪಂದವನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ ಎಂದು ತಿಳಿಸಿದರು. ನಾವು ಪರಸ್ಪರರ ಅಭಿಪ್ರಾಯಗಳನ್ನು ಆಲಿಸಿದ್ದೇವೆ. ಶೀಘ್ರದಲ್ಲೇ ಈ ಮೈತ್ರಿಯನ್ನು ಅಂತಿಮಗೊಳಿಸಿ ನಿಮಗೆ ತಿಳಿಸುತ್ತೇವೆ. ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಮುಂದಿನ ಸಭೆಯು ನಾಳೆ ನಡೆಯಲಿದೆ ಎಂದು ಯಾದವ್ ಹೇಳಿದರು.

ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಕೂಡ ಸಕಾರಾತ್ಮಕವಾಗಿ ಮಾತನಾಡಿದ್ದು, ಎರಡೂ ಪಕ್ಷಗಳಿಗೆ ಪರಸ್ಪರ ನಂಬಿಕೆಯಿದೆ ಮತ್ತು ಅವು ಒಟ್ಟಾಗಿ ಎಲ್ಲವನ್ನೂ ನಿರ್ವಹಿಸುತ್ತವೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement