'ಜೋ ಬಚಾಯ್...' ವಿವಾದ: ಪಾಕಿಸ್ತಾನಿ ವೆಬ್ ಸಿರೀಸ್ ನಿರ್ಬಂಧಿಸಿ; ನೆಟ್‌ಫ್ಲಿಕ್ಸ್‌ಗೆ ಕೇಂದ್ರ ಸರ್ಕಾರ ಸೂಚನೆ
ಭಾರತದಲ್ಲಿ ಪಾಕಿಸ್ತಾನಿ ಕಂಟೆಂಟ್ ಲಭ್ಯವಾಗದಂತೆ ನೋಡಿಕೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್‌ಫ್ಲಿಕ್ಸ್‌ಗೆ ಸೂಚನೆ ನೀಡಿದೆ.
ನವದೆಹಲಿ: ನೆಟ್‌ಫ್ಲಿಕ್ಸ್‌ನ ಪಾಕಿಸ್ತಾನಿ ಮೂಲದ ಮೊದಲ ವೆಬ್ ಸಿರೀಸ್ 'ಜೋ ಬಚಾಯ್ ಹೈ ಸಂಗ್ ಸಮೈತ್ ಲೋ'(Jo Bachay Hain Sang Samait Lo) ಬಿಡುಗಡೆಗೂ ಮುನ್ನವೇ ಭಾರತದಲ್ಲಿ ವಿವಾದವನ್ನು ಹುಟ್ಟುಹಾಕಿದೆ.
ಖ್ಯಾತ ನಟರಾದ ಫವಾದ್ ಖಾನ್, ಮಹಿರಾ ಖಾನ್ ಮತ್ತು ಸನಮ್ ಸಯೀದ್ ಅವರನ್ನು ಮತ್ತೆ ಒಂದೆಡೆ ತರುತ್ತಿರುವ ಈ ವೆಬ್ ಸಿರೀಸ್ ಅನ್ನು ಭಾರತದಲ್ಲಿ ನಿಷೇಧಿಸುವಂತೆ ಕೋರಿ, ಚಲನಚಿತ್ರ ಕಾರ್ಮಿಕರ ಸಂಘಟನೆಯಾದ 'ಆಲ್ ಇಂಡಿಯನ್ ಸಿನೆಮಾ ವರ್ಕರ್ಸ್ ಅಸೋಸಿಯೇಷನ್' (AICWA) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಪಾಕಿಸ್ತಾನಿ ಕಂಟೆಂಟ್ ಅನ್ನು ಭಾರತದಲ್ಲಿ ನಿರ್ಬಂಧಿಸುವಂತೆ ನೆಟ್‌ಫ್ಲಿಕ್ಸ್‌ಗೆ ಸೂಚನೆ ನೀಡಿದೆ.
ಭಾರತದಲ್ಲಿ ಪಾಕಿಸ್ತಾನಿ ಕಂಟೆಂಟ್ ಲಭ್ಯವಾಗದಂತೆ ನೋಡಿಕೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ನೆಟ್‌ಫ್ಲಿಕ್ಸ್‌ಗೆ ಸೂಚನೆ ನೀಡಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಪಾಕ್ ವೆಬ್ ಸಿರೀಸ್ ನಿಷೇಧಿಸಿ: ಪ್ರಧಾನಿ ಮೋದಿಗೆ ಭಾರತೀಯ ಸಿನೆಮಾ ಕಾರ್ಮಿಕರ ಸಂಘಟನೆ ಪತ್ರ!
ಭಾರತದಲ್ಲಿ ಪಾಕ್ ವೆಬ್ ಸರಣಿಯ ಬಿಡುಗಡೆಯ ಕುರಿತು ಸಚಿವಾಲಯವು ಹಲವಾರು ದೂರುಗಳು ಮತ್ತು ಪ್ರಾತಿನಿಧ್ಯಗಳನ್ನು ಸ್ವೀಕರಿಸಿದ ನಂತರ ಈ ನಿರ್ದೇಶನ ನೀಡಿದೆ.
ನೆಟ್ಫ್ಲಿಕ್ಸ್ ಪಾಕಿಸ್ತಾನದ ಸಿರೀಸ್ ಟ್ರೈಲರ್ ಅನ್ನು ಮಂಗಳವಾರ ರಿಲೀಸ್ ಮಾಡಿದೆ. ಆದರೆ, ಡಿಸೆಂಬರ್ 4 ರಂದು ಬಿಡುಗಡೆಯಾಗಲಿರುವ ಈ ಸರಣಿಯು ಭಾರತದಲ್ಲೂ ಲಭ್ಯವಿರುತ್ತದೆಯೇ ಅಥವಾ ಕೇವಲ ಪಾಕಿಸ್ತಾನ ಮತ್ತು ಇತರ ದೇಶಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ.
"ಪುಲ್ವಾಮಾ ದಾಳಿಯ ನಂತರ, ಭಾರತೀಯ ಚಲನಚಿತ್ರೋದ್ಯಮದಲ್ಲಿ ಪಾಕಿಸ್ತಾನಿ ಕಲಾವಿದರು ಕೆಲಸ ಮಾಡುವುದನ್ನು AICWA ನಿಷೇಧಿಸಿತ್ತು. ಪಹಲ್ಗಾಮ್ ದಾಳಿಯ ನಂತರ, ಭಾರತ ಸರ್ಕಾರವೂ ಕೂಡ ಪಾಕಿಸ್ತಾನಿ ಕಲಾವಿದರು ಮತ್ತು ವಿಷಯಗಳ (content) ಮೇಲೆ ನಿರ್ಬಂಧಗಳನ್ನು ವಿಧಿಸಿದೆ."