ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

UP Elections: 'ನಮ್ಮ ಗುರಿ ಯೋಗಿ ಆದಿತ್ಯಾನಾಥ್, ಮೋದಿ', 'ಅಹಂಕಾರ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿ': SP ನಾಯಕನಿಗೆ ಮಲ್ಲಿಕಾರ್ಜುನ ಖರ್ಗೆ ಫುಲ್ ಕ್ಲಾಸ್‌-Video

ಇಮ್ರಾನ್ ಮಸೂದ್ ಅವರ ಹೆಸರನ್ನೂ ಪ್ರಸ್ತಾಪಿಸಿದರು. 'ಮಾತಿಗಿಂತ ಕೆಲಸ ಮುಖ್ಯ. ಅಹಂಕಾರ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು' ಎಂದು ಪಕ್ಷದ ನಾಯಕರಿಗೆ ಖರ್ಗೆ ಸೂಚಿಸಿದ್ದಾರೆ.

ಎಸ್ ಪಿ ನಾಯಕ ಮಸೂದ್ ಗೆ ಮಲ್ಲಿಕಾರ್ಜುನ್ ಖರ್ಗೆ ಕ್ಲಾಸ್
Srinivasa Murthy VN
Updated On : 26 Nov 2026, 5:02 pm

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ನಡುವೆ ಕ್ಷೇತ್ರ ಹಂಚಿಕೆ ವಿಚಾರವಾಗಿ ಭಿನ್ನಾಭಿಪ್ರಾಯ ತೀವ್ರಗೊಂಡಿರುವ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಸಂಸದ ಇಮ್ರಾನ್ ಮಸೂದ್‌ಗೆ ಪರೋಕ್ಷವಾಗಿ ಕಿವಿಮಾತು ಹೇಳಿದ್ದಾರೆ.

ಲಖನೌನಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಖರ್ಗೆ, ಪಕ್ಷದ ಹಲವು ನಾಯಕರನ್ನು ಹೆಸರಿಸಿ ಉಲ್ಲೇಖಿಸಿದರು. ಈ ವೇಳೆ ಇಮ್ರಾನ್ ಮಸೂದ್ ಅವರ ಹೆಸರನ್ನೂ ಪ್ರಸ್ತಾಪಿಸಿದರು. 'ಮಾತಿಗಿಂತ ಕೆಲಸ ಮುಖ್ಯ. ಅಹಂಕಾರ ಬಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕು' ಎಂದು ಪಕ್ಷದ ನಾಯಕರಿಗೆ ಖರ್ಗೆ ಸೂಚಿಸಿದ್ದಾರೆ.

"ಇಮ್ರಾನ್ ಮಸೂದ್ ಅವರನ್ನು ನಾನು ಆಗಾಗ ಟಿವಿಯಲ್ಲಿ ನೋಡುತ್ತಿರುತ್ತೇನೆ. ಅವರು ತುಂಬಾ ಉತ್ಸಾಹದಿಂದ ಮಾತನಾಡುತ್ತಾರೆ. ಆದರೆ, ನಾವು ಮಾತಿಗಿಂತ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಒಟ್ಟಾಗಿ ಹೆಚ್ಚು ಕೆಲಸ ಮಾಡಿದಷ್ಟು ನಮ್ಮ ಪ್ರಗತಿಯೂ ಹೆಚ್ಚಾಗುತ್ತದೆ" ಎಂದು ಖರ್ಗೆ ಹೇಳಿದರು.

Advertisement

Advertisement

"ಮಸೂದ್ ಸಂಸತ್ತಿನಲ್ಲಿದ್ದಾರೆ. ಅಲ್ಲಿ ಅವರು ಪಕ್ಷದ ಪರವಾಗಿ ನಿರಂತರವಾಗಿ ಹೋರಾಡುತ್ತಿದ್ದಾರೆ. ಪಕ್ಷದ ನಿಲುವುಗಳನ್ನು ಸಮರ್ಥವಾಗಿ ಮಂಡಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಮೆಚ್ಚುಗೆಯ ಮಾತುಗಳನ್ನೂ ಆಡಿದರು.

Also Read

ಉತ್ತರ ಪ್ರದೇಶ ಚುನಾವಣೆ: ಬಿಎಸ್‌ಪಿ ಜೊತೆ ಮೈತ್ರಿಗೆ ಕಾಂಗ್ರೆಸ್ ಸಜ್ಜು; ಮಾಯಾವತಿಗೆ ಇಮ್ರಾನ್ ಮಸೂದ್ ಸಂದೇಶ!

ನಮ್ಮ ಗುರಿ ಯೋಗಿ ಆದಿತ್ಯಾನಾಥ್, ಮೋದಿ

ಬಳಿಕ ಮತ್ತೆ ಮಸೂದ್ ಕುಳಿತಿದ್ದ ಕಡೆ ತಿರುಗಿ ಮಾತನಾಡಿದ ಖರ್ಗೆ, "ನಮ್ಮ ಗುರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುದಾಗಿದೆ. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿರಬೇಕು. ಮುಂದೆ ಸಾಗಬೇಕು. ನಮ್ಮಲ್ಲಿರುವ ಅಹಂಕಾರವನ್ನು ಬಿಟ್ಟುಬಿಡಬೇಕು" ಎಂದು ಹೇಳಿದರು.

'ನಾವು ಮೈತ್ರಿ ಪಕ್ಷವೋ, ಸಮಾಜವಾದಿ ಪಕ್ಷದ ಸೇವಕರೋ?'

ಇದಕ್ಕೂ ಮುನ್ನ ಮಾತನಾಡಿದ್ದ ಇಮ್ರಾನ್ ಮಸೂದ್, ಸಮಾಜವಾದಿ ಪಕ್ಷದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. "ಕಾಂಗ್ರೆಸ್ ಸಮಾಜವಾದಿ ಪಕ್ಷದ ಮೈತ್ರಿ ಪಾಲುದಾರನೋ ಅಥವಾ ಅದರ ಸೇವಕನೋ? ನಾವು ಯಾರಿಗಿಂತಲೂ ಕಡಿಮೆಯಿಲ್ಲ. ಈ ವಿಷಯವನ್ನು ಕಾಂಗ್ರೆಸ್ ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದ್ದರು.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 100ಕ್ಕೂ ಹೆಚ್ಚು ಸ್ಥಾನಗಳನ್ನು ಕೇಳಿದೆ. ಆದರೆ, ಸಮಾಜವಾದಿ ಪಕ್ಷ ಕೇವಲ 26 ಸ್ಥಾನಗಳನ್ನು ನೀಡಲು ಮುಂದಾಗಿರುವುದರಿಂದ ಕ್ಷೇತ್ರ ಹಂಚಿಕೆ ಮಾತುಕತೆ ಬಿಕ್ಕಟ್ಟಿಗೆ ಸಿಲುಕಿದೆ. ಕಾಂಗ್ರೆಸ್‌ನ ಸಮನ್ವಯ ಸಮಿತಿಯ ಸದಸ್ಯರಾಗಿರುವ ಮಸೂದ್ ಕೂಡ ಈ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ.

ಮಂಗಳವಾರ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಐವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ ಬಳಿಕ ಮಸೂದ್ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ. ಘೋಷಿತ ಐವರಲ್ಲಿ ನಾಲ್ವರು ಹಾಲಿ ಶಾಸಕರಾಗಿದ್ದು, ಅವರ ಕ್ಷೇತ್ರಗಳು ಮಸೂದ್ ಅವರ ಪ್ರಭಾವದ ಪ್ರದೇಶದಲ್ಲಿವೆ ಎನ್ನಲಾಗಿದೆ.

"ನಾವು ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಆದರೆ, ಈಗ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದೆ. ಆ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಿ ಎಂದು ನಾವು ಕೇಳಿದ್ದೇವೆಯೇ? ಮೈತ್ರಿ ಪಕ್ಷಗಳೆಂದರೆ ಪರಸ್ಪರ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಆದರೆ, ಇಲ್ಲಿ ಬೇರೆಯದೇ ನಡೆಯುತ್ತಿದೆ" ಎಂದು ಮಸೂದ್ ಅಸಮಾಧಾನ ಹೊರಹಾಕಿದ್ದಾರೆ.

ಅಖಿಲೇಶ್ ಯಾದವ್ ಹೇಳಿಕೆಗೆ ಆಕ್ಷೇಪ

ಅಖಿಲೇಶ್ ಯಾದವ್ ಅವರು ಎಕ್ಸ್‌ನಲ್ಲಿ ಪ್ರಕಟಿಸಿದ್ದ ಪೋಸ್ಟ್ ಕೂಡ ವಿವಾದಕ್ಕೆ ಕಾರಣವಾಗಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪಕ್ಷದ ಗುರುತಿಗಿಂತ ಪಿಡಿಎ (PDA) ಅಭ್ಯರ್ಥಿಗಳೆಂದು ಪರಿಗಣಿಸಬೇಕು ಎಂದು ಅವರು ಹೇಳಿದ್ದರು.

ಪಿಡಿಎ ಎಂದರೆ ಹಿಂದುಳಿದ ವರ್ಗಗಳು (ಪಿಚ್ಡಾ), ದಲಿತರು ಮತ್ತು ಅಲ್ಪಸಂಖ್ಯಾತರನ್ನೊಳಗೊಂಡ ಸಾಮಾಜಿಕ ಮೈತ್ರಿಕೂಟ. 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಈ ಸಮೀಕರಣ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನೆರವಾಗಿತ್ತು. ಬಿಜೆಪಿಗೆ ಸ್ವಂತ ಬಲದಲ್ಲಿ ಬಹುಮತ ಪಡೆಯುವುದನ್ನು ತಡೆಯುವಲ್ಲಿಯೂ ಪ್ರಮುಖ ಪಾತ್ರ ವಹಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮಸೂದ್, "ಮೈತ್ರಿ ಎಂದರೆ ಜಂಟಿ ಪತ್ರಿಕಾಗೋಷ್ಠಿಗಳು, ಜಂಟಿ ನಿರ್ಧಾರಗಳು ಇರಬೇಕು. ಎಲ್ಲವೂ ಒಟ್ಟಾಗಿ ನಡೆಯಬೇಕು. ಆದರೆ, ಇಲ್ಲಿ ಬೇರೆ ರೀತಿಯಲ್ಲಿ ನಡೆಯುತ್ತಿದ್ದರೆ ಅದರ ಬಗ್ಗೆ ನನಗೆ ತಿಳಿದಿಲ್ಲ" ಎಂದಿದ್ದಾರೆ.

2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ 107 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈಗ ಅಖಿಲೇಶ್ ಯಾದವ್ ಇನ್ನೂ ಮುಖ್ಯಮಂತ್ರಿಯೇ ಆಗಿಲ್ಲ. ಹೀಗಿರುವಾಗ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳನ್ನು ನೀಡುತ್ತಿರುವುದು ಏಕೆ ಎಂಬ ಪ್ರಶ್ನೆಯನ್ನೂ ಮಸೂದ್ ಎತ್ತಿದ್ದಾರೆ.

Also Read

ಜೆಡಿಯು ಶಾಸಕ ಅನಂತ್ ಸಿಂಗ್ ಪುತ್ರಿ ಮದುವೆಯಲ್ಲಿ ಜನಸಾಗರ; 5 ಲಕ್ಷ ಜನಕ್ಕೆ 150 ಬಗೆಯ ತಿಂಡಿ! 10km ಟ್ರಾಫಿಕ್ ಜಾಮ್‌ಗೆ ಕುದುರೆ ರೇಸ್ ಮುಂದೂಡಿಕೆ

ಬಿಜೆಪಿ ಟೀಕೆ

ಇನ್ನು ಕಾಂಗ್ರೆಸ್‌ನ 'ಸಂವಿಧಾನ ಉಳಿಸಿ' ಪಾದಯಾತ್ರೆಗೆ ಅನುಮತಿ ನಿರಾಕರಿಸಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಆಯೋಜಿಸಿದ್ದ ಸಮಾವೇಶಕ್ಕೆ ಅನುಮತಿ ನೀಡಿರುವುದನ್ನೂ ಮಸೂದ್ ಪ್ರಶ್ನಿಸಿದ್ದಾರೆ.

ಓವೈಸಿ ಮತ್ತು ಚಂದ್ರಶೇಖರ್ ಆಜಾದ್ ಅವರು ದಲಿತ-ಮುಸ್ಲಿಂ ಮತಗಳ ಮೈತ್ರಿಕೂಟ ರೂಪಿಸುವ ಮೂಲಕ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ಪಿಡಿಎ ಮತಬ್ಯಾಂಕ್‌ಗೆ ಪೈಪೋಟಿ ನೀಡುತ್ತಿದ್ದಾರೆ. ಈ ನಾಯಕರು ವಿರೋಧ ಪಕ್ಷಗಳ ಮತಗಳನ್ನು ವಿಭಜಿಸಿ ಬಿಜೆಪಿಗೆ ನೆರವಾಗುತ್ತಿದ್ದಾರೆ ಎಂಬುದು ಮಸೂದ್ ಅವರ ಆರೋಪವಾಗಿದೆ.

ಈ ಮಧ್ಯೆ, ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಪಂಕಜ್ ಚೌಧರಿ ಕೂಡ ಕಾಂಗ್ರೆಸ್-ಸಮಾಜವಾದಿ ಪಕ್ಷದ ಮೈತ್ರಿಯನ್ನು ಟೀಕಿಸಿದ್ದಾರೆ. ಚುನಾವಣೆಗೂ ಮುನ್ನವೇ ಈ ಮೈತ್ರಿ ಐಸಿಯು ತಲುಪಿದೆ ಎಂದು ವ್ಯಂಗ್ಯವಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement