ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನಮಾಜ್ ಮಾಡೋದನ್ನ ತಡೆಯೋದು ಪಾಪ: ನಿಜವಾದ ಮುಸ್ಲಿಂ ಯಾರು? ನಿರ್ಧರಿಸೋದು ಅಲ್ಲಾಹು ಮಾತ್ರ: ಹೈಕೋರ್ಟ್

ಯಾರು ನಿಜವಾದ ಮುಸ್ಲಿಂ ಅಂತ ನಿರ್ಧರಿಸುವ ಅಧಿಕಾರ ಅಲ್ಲಾಹನಿಗೆ ಮಾತ್ರವೇ ಹೊರತು, ಸಾಮಾನ್ಯ ಮನುಷ್ಯರಿಗಿಲ್ಲ. ಒಬ್ಬ ಮುಸ್ಲಿಂ ವ್ಯಕ್ತಿಯನ್ನು ನಮಾಜ್ ಮಾಡದಂತೆ ತಡೆಯುವುದು ಸ್ವತಃ ಒಂದು ಪಾಪ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸಂಗ್ರಹ ಚಿತ್ರ
Vishwanath S
Updated On : 26 Nov 2026, 8:07 pm

ಚೆನ್ನೈ: ಯಾರು ನಿಜವಾದ ಮುಸ್ಲಿಂ ಅಂತ ನಿರ್ಧರಿಸುವ ಅಧಿಕಾರ ಅಲ್ಲಾಹನಿಗೆ ಮಾತ್ರವೇ ಹೊರತು, ಸಾಮಾನ್ಯ ಮನುಷ್ಯರಿಗಿಲ್ಲ. ಒಬ್ಬ ಮುಸ್ಲಿಂ ವ್ಯಕ್ತಿಯನ್ನು ನಮಾಜ್ ಮಾಡದಂತೆ ತಡೆಯುವುದು ಸ್ವತಃ ಒಂದು ಪಾಪ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಯಾವುದೇ ಮಸೀದಿಯಲ್ಲಿ ನಮಾಜ್ ಮಾಡದಂತೆ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಇತರ ಮುಸ್ಲಿಮರು ತಡೆಯುವಂತಿಲ್ಲ. ಆ ವ್ಯಕ್ತಿ ಬಿಜೆಪಿ ಅಥವಾ ಬೇರೆ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿದ್ದರೂ ಸರಿ, ಅವರನ್ನು ತಡೆಯಲು ಯಾರಿಗೂ ಹಕ್ಕಿಲ್ಲ ಎಂದು ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣ ತಿಳಿಸಿದರು.

ಸೇಲಂನ ಮಸೀದಿಯೊಂದರಲ್ಲಿ ತಮಗೆ ನಮಾಜ್ ಮಾಡಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿ ಸೈಯದ್ ಇಬ್ರಾಹಿಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಲ್ಲಿ ಐಯುಎಂಎಲ್ (IUML) ಪದಾಧಿಕಾರಿ ಸೈಯದ್ ಮೂಸಾ ಅವರ ವಿರುದ್ಧ ಆರೋಪ ಮಾಡಲಾಗಿತ್ತು. ಮಸೀದಿಯೊಳಗೆ ಪ್ರವೇಶಿಸುವ ಮುನ್ನ ಮುಸ್ಲಿಮರು ತಮ್ಮ ರಾಜಕೀಯ ಅಥವಾ ಇತರ ಯಾವುದೇ ಬಾಂಧವ್ಯಗಳನ್ನು ಮಸೀದಿಯ ಹೊರಗೇ ಬಿಟ್ಟು ಬರಬೇಕು ಎಂದು ನ್ಯಾಯಮೂರ್ತಿಗಳು ಹೇಳಿದರು.

Also Read

ಅನಾಮಧೇಯ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ ದಾಖಲೆಯ 121 ಕೆಜಿ ಚಿನ್ನ ಕಾಣಿಕೆ!

ಮಸೀದಿಯೊಳಗೆ ಪ್ರಾರ್ಥನೆಯ ನೇತೃತ್ವ ವಹಿಸುವ 'ಇಮಾಮ್' ಗೆ ಮಾತ್ರ ಪ್ರಮುಖ ಸ್ಥಾನವಿರುತ್ತದೆ. ಉಳಿದ ಎಲ್ಲಾ ಮುಸ್ಲಿಮರು, ತಮ್ಮ ಸಾಮಾಜಿಕ ಅಥವಾ ಆರ್ಥಿಕ ಸ್ಥಾನಮಾನಗಳನ್ನು ಲೆಕ್ಕಿಸದೆ, ಭುಜಕ್ಕೆ ಭುಜ ತಾಗಿಸಿಕೊಂಡು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದ್ದರಿಂದ, ಇಂತಹ ಪವಿತ್ರ ಸ್ಥಳದಲ್ಲಿ ರಾಜಕೀಯ ಒಡನಾಟಗಳಿಗೆ ಯಾವುದೇ ಮಹತ್ವವಿರಬಾರದು. ಒಬ್ಬ ವ್ಯಕ್ತಿ ಮಸೀದಿ ನಿರ್ಮಾಣಕ್ಕೆ ದೇಣಿಗೆ ನೀಡಿದ ಮಾತ್ರಕ್ಕೆ, ಆ ಮಸೀದಿ ತನಗೆ ಸೇರಿದ್ದು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದರು.

Advertisement

Advertisement

ಮಸೀದಿಗಳು ನಿಜವಾದ ಒಡೆಯ ಅಲ್ಲಾಹನೇ ಆಗಿರುತ್ತಾನೆ. ಮನುಷ್ಯರು ಕೇವಲ ನಿರ್ವಾಹಕರು ಮಾತ್ರ. ಅರ್ಜಿದಾರರು ಮುಸ್ಲಿಂ ಎಂದು ಸರ್ವಶಕ್ತನಾದ ಅಲ್ಲಾಹನೇ ನಿರ್ಧರಿಸಿರುವಾಗ, ಅದನ್ನು ಅಲ್ಲಗಳೆಯುವ ಅಥವಾ ಬೇರೆ ರೀತಿಯಲ್ಲಿ ತೀರ್ಮಾನಿಸುವ ಅಧಿಕಾರ ಮನುಷ್ಯರಿಗಿಲ್ಲ ಎಂದು ಅವರು ಹೇಳಿದರು.

ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಪ್ರಾರ್ಥನೆ ಮಾಡದಂತೆ ತಡೆಯುವುದು ಸ್ವತಃ ಒಂದು ಪಾಪ ಎಂದು ಅವರು ಹೇಳಿದರು. ಆದರೆ, ತಾನು ಮೌಲ್ವಿ ಅಥವಾ ಆಲಿಮ್ (ಧಾರ್ಮಿಕ ವಿದ್ವಾಂಸ) ಅಲ್ಲದಿರುವುದರಿಂದ ಮತ್ತು ಈ ವಿಷಯದ ಆಳಕ್ಕೆ ಹೋಗುವಷ್ಟು ಅರ್ಹತೆ ಇಲ್ಲದಿರುವುದರಿಂದ, ತಮಗೆ ತಿಳಿದಿರುವುದಕ್ಕಿಂತ ಹೆಚ್ಚಿನ ಧಾರ್ಮಿಕ ವಿಷಯಗಳ ಬಗ್ಗೆ ಚರ್ಚಿಸಲು ಹೋಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement