ತಿರುಪತಿ ತಿಮ್ಮಪ್ಪನಿಗೆ 121 ಕೆ.ಜಿ. ಚಿನ್ನ ಕೊಟ್ಟ ವರ್ಧಮಾನ್ ಜೈನ್ ಯಾರು? ಚೆನ್ನೈ ಮೂಲದ ಉದ್ಯಮಿಯ ಲೋಕೋಪಕಾರಿ ಕಾರ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನಾಭರಣಗಳನ್ನು ಸಮರ್ಪಿಸಿರುವ ಉದ್ಯಮಿ ವರ್ಧಮಾನ್ ಜೈನ್ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಚೆನ್ನೈ: ವಿಶ್ವದ ಅತ್ಯಂತ ಶ್ರೀಮಂತ ದೇಗುಲ ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಎನ್ನುವವರು ಪತ್ನಿ ರಾಧಿಕಾ ಜೈನ್ ಮತ್ತು ಮಕ್ಕಳೊಂದಿಗೆ ಆಗಮಿಸಿ 207.6 ಕೋಟಿ ರೂ. ಮೌಲ್ಯದ 121 ಕೆ.ಜಿ ಚಿನ್ನವನ್ನು ದಾನವಾಗಿ ಸಮರ್ಪಿಸಿದ್ದಾರೆ.
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನಾಭರಣಗಳನ್ನು ಸಮರ್ಪಿಸಿರುವ ಉದ್ಯಮಿ ವರ್ಧಮಾನ್ ಜೈನ್ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಉದ್ಯಮಿಯಾಗಿ ಮಾತ್ರವಲ್ಲದೆ, ಆರೋಗ್ಯ ಸೇವಾ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು, ‘ಆಕ್ಸೆಸ್ ಹೆಲ್ತ್‌ಕೇರ್’ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷರಾಗಿದ್ದಾರೆ.
ವರ್ಧಮಾನ್ ಅವರು ಕೇವಲ ಉದ್ಯಮಿಯಾಗಿ ಗುರುತಿಸಿಕೊಂಡಿಲ್ಲ. ಸಮಾಜ ಸೇವೆಯಲ್ಲೂ ಇವರ ಹೆಸರು ಮುಂಚೂಣಿಯಲ್ಲಿದೆ. ವೈದ್ಯಕೀಯ ಸೇವೆ, ಉದ್ಯೋಗ ಸೃಷ್ಟಿ, ಶಿಕ್ಷಣ ಸೇರಿದಂತೆ ಇತರೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜೈನ್ ಚೆನ್ನೈನ ಪ್ರತಿಷ್ಠಿತ Loyola College ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಅಮೆರಿಕದ ಟೆಕ್ಸಾಸ್ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪಡೆದಿದ್ದಾರೆ. ಶಿಕ್ಷಣದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಿಕೊಂಡು ಹೊಸ ಉದ್ಯಮ ಕಟ್ಟುವ ಕನಸು ಕಂಡು ವೃತ್ತಿ ಶುರು ಮಾಡಿದರು ಎಂದು ವರದಿಯಾಗಿದೆ.
ವರ್ಧಮಾನ್ ಜೈನ್ ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಡೆಲ್ ಸಂಸ್ಥೆಯೊಂದಿಗೆ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಡೆಲ್ ಸರ್ವಿಸಸ್‌ನ ಜಾಗತಿಕ ಬಿಪಿಒ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಆರೋಗ್ಯ ಸೇವೆ, ವಿಮೆ, ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳ 100ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸುವ ಕಾರ್ಯಾಚರಣೆಗಳನ್ನು ಮುನ್ನಡೆಸಿದ್ದರು. ಸುಮಾರು 9,000 ಸಿಬ್ಬಂದಿಯ ಜಾಗತಿಕ ಕಾರ್ಯಾಚರಣೆಗಳ ನಿರ್ವಹಣೆಯ ಅನುಭವ ಅವರಿಗಿದೆ.
ಇದಕ್ಕೂ ಮೊದಲು ಅವರು ವಿಷನ್ ಹೆಲ್ತ್‌ಸೋರ್ಸ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿದ್ದರು. 2003ರಲ್ಲಿ ಈ ಸಂಸ್ಥೆಯನ್ನು ಪೆರೋಟ್ ಸಿಸ್ಟಮ್ಸ್ ಸ್ವಾಧೀನಪಡಿಸಿಕೊಂಡಿತ್ತು. ಬಳಿಕ ಡೆಲ್ ಸರ್ವಿಸಸ್‌ನೊಂದಿಗೆ ವಿಲೀನಗೊಂಡ ಕಾರ್ಯಾಚರಣೆಗಳಲ್ಲಿ ಜೈನ್ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
2011ರಲ್ಲಿ ಸ್ಥಾಪನೆಯಾದ ಆಕ್ಸೆಸ್ ಹೆಲ್ತ್‌ಕೇರ್ ಸಂಸ್ಥೆಯ ಬೆಳವಣಿಗೆಯಲ್ಲಿ ವರ್ಧಮಾನ್ ಜೈನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳಿಗೆ ವೈದ್ಯಕೀಯ ಬಿಲ್ಲಿಂಗ್, ವೈದ್ಯಕೀಯ ಕೋಡಿಂಗ್, ವಿಮಾ ಕ್ಲೇಮ್ ನಿರ್ವಹಣೆ ಹಾಗೂ ಹಣಕಾಸು ಪ್ರಕ್ರಿಯೆಗಳ ನಿರ್ವಹಣೆಗೆ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಈ ಸಂಸ್ಥೆ ಒದಗಿಸುತ್ತದೆ.
ಕೃತಕ ಬುದ್ಧಿಮತ್ತೆ (AI), ಮಷಿನ್ ಲರ್ನಿಂಗ್ ಮತ್ತು ರೊಬೊಟಿಕ್ ಪ್ರೊಸೆಸ್ ಆಟೊಮೇಷನ್ (RPA) ತಂತ್ರಜ್ಞಾನಗಳ ಬಳಕೆಯ ಮೂಲಕ ಆರೋಗ್ಯ ಸೇವೆಗಳ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡಿದ್ದಾರೆ. ವೈದ್ಯಕೀಯ ಚಿತ್ರಗಳ ಸಂಸ್ಕರಣೆ ಮತ್ತು ಎಲೆಕ್ಟ್ರಾನಿಕ್ ಚಿತ್ರಗಳಲ್ಲಿನ ಮಾಹಿತಿಯನ್ನು ಬಳಸುವ ತಂತ್ರಜ್ಞಾನಕ್ಕೆ ಸಂಬಂಧಿಸಿದ ಪೇಟೆಂಟ್‌ಗಳನ್ನು ಕೂಡ ಹೊಂದಿದ್ದಾರೆ.
ಶ್ರೀ ಸರಿತಾ ಜೈನ್ ಫೌಂಡೇಶನ್ ಟ್ರಸ್ಟ್ ಮೂಲಕ ಬಡ ಮಕ್ಕಳ ಶಿಕ್ಷಣ, ಹಸಿವು ನಿವಾರಣೆ ಮತ್ತು ತುರ್ತು ವೈದ್ಯಕೀಯ ನೆರವಿನ ಕಾರ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ. ಹಿಂದುಳಿದ ಯುವಕರಿಗೆ ಉದ್ಯೋಗಾಧಾರಿತ ಕೌಶಲ ತರಬೇತಿ ನೀಡುವ ‘ಆವಿಷ್ಕಾರ್’ ಯೋಜನೆಯನ್ನೂ ಆರಂಭಿಸಿದ್ದಾರೆ. ಕಾಂಚಿ ಕಾಮಕೋಟಿ ಚೈಲ್ಡ್ಸ್ ಟ್ರಸ್ಟ್ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
121 ಕೆ.ಜಿ. ಚಿನ್ನ ಸಮರ್ಪಣೆ: ಇದೀಗ ಪತ್ನಿ ರಾಧಿಕಾ ಜೈನ್ ಅವರೊಂದಿಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಗೆ 121 ಕೆ.ಜಿ. ಚಿನ್ನಾಭರಣಗಳನ್ನು ಸಮರ್ಪಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಸುಮಾರು 206 ಕೋಟಿ ರೂ. ಮೌಲ್ಯದ ಈ ಕೊಡುಗೆ ಉದ್ಯಮ ವಲಯದ ಜತೆಗೆ ಭಕ್ತರ ಗಮನವನ್ನೂ ಸೆಳೆದಿದೆ.
ಆಭರಣಗಳ ವಿವರವನ್ನೂ ಹಂಚಿಕೊಂಡಿರುವ ಟಿಟಿಡಿ, 238.2 ಕ್ಯಾರೆಟ್‌ನ ವಜ್ರ, 2,247.7 ಕ್ಯಾರೆಟ್‌ನ ಅಮೂಲ್ಯ ಹವಳಗಳು, 2,916.5 ಗ್ರಾಂ ಮಾಣಿಕ್ಯಗಳು ಮತ್ತು ಪಚ್ಚೆಗಳು, 91.6 ಕ್ಯಾರೆಟ್‌ನ ನೀಲಮಣಿಗಳು, 84.2 ಕ್ಯಾರೆಟ್ ಹಳದಿ ನೀಲಮಣಿಗಳು ಮತ್ತು ಸಾಲಿಗ್ರಾಮ ಕಲ್ಲುಗಳನ್ನು ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದೆ.
ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಮ್ಮುಖದಲ್ಲಿ 46 ಬಗೆಯ ಆಭರಣಗಳನ್ನು ನೀಡಲಾಗಿದೆ. ಇದರಲ್ಲಿ ಕಿರೀಟ, ಹಾರ, ತೋಳ್ಬಂದಿಗಳು ಸೇರಿವೆ. ಒಟ್ಟು 121 ಕೆಜಿ ಚಿನ್ನದ ಆಭರ ಅವಾಗಿದ್ದು, ಒಟ್ಟು ಮೌಲ್ಯ 206 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ದಾನ ಮಾಡಿದ ವ್ಯಕ್ತಿ ಬೇರೆ ಯಾರೂ ಅಲ್ಲ. ಅವರೇ ವರ್ಧಮಾನ್ ಜೈನ್. ಇವತ್ತು ತಮ್ಮ ಪತ್ನಿ ರಾಧಿಕಾ ಜೈನ್ ಜೊತೆ ಆಗಮಿಸಿ 206 ಕೋಟಿ ಮೌಲ್ಯದ ಚಿನ್ನಾಭರಣವನ್ನು ದೇಗುಲಕ್ಕೆ ನೀಡಿದರು. ಇನ್ನು ಇವರು ತಿರುಪತಿಗೆ ದಾನ ಮಾಡುತ್ತಿರೋದು ಇದೇ ಮೊದಲಲ್ಲ. ಈ ಹಿಂದೆಯೂ ನೀಡಿರುವ ಮಾಹಿತಿ ಹೀಗಿದೆ.