ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಶಾಕ್ ಕೊಟ್ಟ ಹರ್ಯಾಣ ಸರ್ಕಾರ; ಲಿವ್-ಇನ್ ಸಂಬಂಧ ನೋಂದಣಿ ಕಡ್ಡಾಯ, ಬಹುಪತ್ನಿತ್ವಕ್ಕೆ ನಿಷೇಧ; ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಿದ್ಧತೆ!

ಹರಿಯಾಣ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಸ್. ಭಲ್ಲಾ ಅವರು ವರದಿ ಸಲ್ಲಿಸಿರುವುದನ್ನು ಖಚಿತಪಡಿಸಿದ್ದಾರೆ. ಮುಂದಿನ ಕ್ರಮ ಕೈಗೊಳ್ಳುವ ಮೊದಲು ಅಡ್ವೊಕೇಟ್ ಜನರಲ್ ಮತ್ತು ಕಾನೂನು ಸಲಹೆಗಾರರ..

ಹರ್ಯಾಣದಲ್ಲಿ ಲಿವ್-ಇನ್ ಸಂಬಂಧ ನೋಂದಣಿ ಕಡ್ಡಾಯ
Srinivasa Murthy VN
Updated On : 28 Nov 2026, 10:14 am

ಚಂಡೀಗಢ: ಪ್ರೇಮಿಗಳಿಗೆ ಹರ್ಯಾಣ ಸರ್ಕಾರ ಶಾಕ್ ನೀಡಿದ್ದು, ಲಿವ್-ಇನ್ ಸಂಬಂಧಗಳಿಗೂ ಕಡ್ಡಾಯ ನೋಂದಣಿ, ಬಹುಪತ್ನಿತ್ವಕ್ಕೆ ನಿಷೇಧ, ಮದುವೆ ನೋಂದಣಿ ಕಡ್ಡಾಯ ಸೇರಿದಂತೆ ಹಲವು ಮಹತ್ವದ ಶಿಫಾರಸುಗಳನ್ನು ಹರಿಯಾಣ ರಾಜ್ಯ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆ (UCC) ವರದಿಯಲ್ಲಿ ಮಾಡಿದೆ.

ಈ ವರದಿಯನ್ನು ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮದುವೆ, ವಿಚ್ಛೇದನ, ಜೀವನಾಂಶ, ಆಸ್ತಿ ಹಕ್ಕು ಮತ್ತು ಉತ್ತರಾಧಿಕಾರ ಸೇರಿದಂತೆ ಹಲವು ವೈಯಕ್ತಿಕ ಕಾನೂನುಗಳಿಗೆ ಎಲ್ಲ ಧರ್ಮದವರಿಗೂ ಅನ್ವಯವಾಗುವಂತೆ ಒಂದೇ ರೀತಿಯ ನಿಯಮಗಳನ್ನು ರೂಪಿಸುವುದು ಈ ಪ್ರಸ್ತಾವನೆಯ ಉದ್ದೇಶವಾಗಿದೆ.

ಹರಿಯಾಣ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್.ಎಸ್. ಭಲ್ಲಾ ಅವರು ವರದಿ ಸಲ್ಲಿಸಿರುವುದನ್ನು ಖಚಿತಪಡಿಸಿದ್ದಾರೆ. ಮುಂದಿನ ಕ್ರಮ ಕೈಗೊಳ್ಳುವ ಮೊದಲು ಅಡ್ವೊಕೇಟ್ ಜನರಲ್ ಮತ್ತು ಕಾನೂನು ಸಲಹೆಗಾರರ ಅಭಿಪ್ರಾಯ ಪಡೆಯಲಾಗುವುದು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಅನುರಾಗ್ ರಸ್ತೋಗಿ ತಿಳಿಸಿದ್ದಾರೆ.

Advertisement

Advertisement

Also Read

ತಿರುಪರಂಕುಂದ್ರಂ ದೀಪ ವಿವಾದ: ಜೋಸೆಫ್ ವಿಜಯ್ ಸರ್ಕಾರಕ್ಕೆ ಭಾರಿ ಹಿನ್ನಡೆ, ಭದ್ರತಾ ಕಣ್ಗಾವಲಿಗೆ ಸಿಆರ್‌ಪಿಎಫ್ ನಿಯೋಜನೆ

ಲಿವ್-ಇನ್ ಸಂಬಂಧಕ್ಕೂ ನೋಂದಣಿ ಕಡ್ಡಾಯ!

ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯ ಪ್ರಕಾರ, ಲಿವ್-ಇನ್ ಸಂಬಂಧದಲ್ಲಿ ವಾಸಿಸುವ ಜೋಡಿಗಳು ತಾವು ವಾಸಿಸುವ ಪ್ರದೇಶದ ರಿಜಿಸ್ಟ್ರಾರ್ ಅಥವಾ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಡ್ಡಾಯವಾಗಿ ಘೋಷಣಾ ಪತ್ರ ಸಲ್ಲಿಸಬೇಕು. ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಸಂಬಂಧವನ್ನು ನಿಗದಿತ ನೋಂದಣಿ ಪುಸ್ತಕದಲ್ಲಿ ದಾಖಲಿಸಿ ಪ್ರಮಾಣಪತ್ರ ನೀಡಲಿದ್ದಾರೆ.

ಅದರ ಪ್ರತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೂ ಕಳುಹಿಸಲಾಗುತ್ತದೆ. ಜೋಡಿಯಲ್ಲಿ ಯಾರಾದರೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಅವರ ಪೋಷಕರು ಅಥವಾ ಕಾನೂನುಬದ್ಧ ಪಾಲಕರಿಗೂ ಮಾಹಿತಿ ನೀಡಲಾಗುತ್ತದೆ.

ಯಾವ ಸಂದರ್ಭಗಳಲ್ಲಿ ಲಿವ್-ಇನ್ ಸಂಬಂಧದ ನೋಂದಣಿಗೆ ಅವಕಾಶ ಇರುವುದಿಲ್ಲ?

- ಜೋಡಿಯಲ್ಲಿರುವ ಯಾರಾದರೂ ಈಗಾಗಲೇ ವಿವಾಹಿತರಾಗಿದ್ದರೆ.

- ಯಾರಾದರೂ ಅಪ್ರಾಪ್ತರಾಗಿದ್ದರೆ.

- ಈಗಾಗಲೇ ಮತ್ತೊಂದು ಲಿವ್-ಇನ್ ಸಂಬಂಧದಲ್ಲಿದ್ದರೆ.

- ಬಲವಂತ, ವಂಚನೆ, ತಪ್ಪು ಮಾಹಿತಿ ಅಥವಾ ಒತ್ತಡದ ಮೂಲಕ ಸಂಬಂಧಕ್ಕೆ ಒಪ್ಪಿಗೆ ಪಡೆದಿದ್ದರೆ.

ಸಂಬಂಧವನ್ನು ಮುಂದುವರಿಸಲು ಇಚ್ಛಿಸದಿದ್ದರೆ ಇಬ್ಬರಲ್ಲಿ ಯಾರಾದರೂ ಅಥವಾ ಇಬ್ಬರೂ ನಿಗದಿತ ಘೋಷಣಾ ಪತ್ರ ಸಲ್ಲಿಸಿ ಸಂಬಂಧವನ್ನು ಅಂತ್ಯಗೊಳಿಸಬಹುದು.

ನೋಂದಣಿ ಮಾಡಿಸದಿದ್ದರೆ ಜೈಲು ಶಿಕ್ಷೆ, ದಂಡ!

ಲಿವ್-ಇನ್ ಸಂಬಂಧದಲ್ಲಿದ್ದು ಕಡ್ಡಾಯ ಘೋಷಣಾ ಪತ್ರ ಸಲ್ಲಿಸದಿದ್ದರೆ ಗರಿಷ್ಠ ಮೂರು ತಿಂಗಳ ಜೈಲು ಶಿಕ್ಷೆ ಅಥವಾ 10,000 ರೂ. ದಂಡ ವಿಧಿಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಬಲವಂತ ಅಥವಾ ವಂಚನೆಯ ಮೂಲಕ ಸಂಬಂಧಕ್ಕೆ ಒಪ್ಪಿಗೆ ಪಡೆದಿರುವುದು ಸಾಬೀತಾದರೆ ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಪ್ರಸ್ತಾವನೆಯೂ ಇದೆ. ಇನ್ನು, ಲಿವ್-ಇನ್ ಸಂಬಂಧದಲ್ಲಿರುವ ಮಹಿಳೆಯನ್ನು ಸಂಗಾತಿ ತೊರೆದರೆ ಆಕೆ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Also Read

'ಅನಿವಾರ್ಯತೆ': ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ಕುರಿತು ಶರದ್ ಪವಾರ್ ಸ್ಪಷ್ಟನೆ, ಕಾಂಗ್ರೆಸ್ ಆಕ್ರೋಶ!

ಬಹುಪತ್ನಿತ್ವಕ್ಕೆ ನಿಷೇಧ, ಮದುವೆ ನೋಂದಣಿ ಕಡ್ಡಾಯ

ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾವನೆಯಲ್ಲಿ ಬಹುಪತ್ನಿತ್ವಕ್ಕೆ ಸಂಪೂರ್ಣ ನಿಷೇಧ ಹೇರಲು ಶಿಫಾರಸು ಮಾಡಲಾಗಿದೆ. ಪತಿ ಅಥವಾ ಪತ್ನಿಯಲ್ಲಿ ಯಾರೊಬ್ಬರಿಗಾದರೂ ಜೀವಂತ ಸಂಗಾತಿ ಇದ್ದರೆ ಮತ್ತೊಂದು ಮದುವೆಯಾಗಲು ಅವಕಾಶ ಇರುವುದಿಲ್ಲ. ಎಲ್ಲ ಮದುವೆಗಳ ನೋಂದಣಿಯನ್ನೂ ಕಡ್ಡಾಯಗೊಳಿಸುವ ಪ್ರಸ್ತಾವನೆ ಇದೆ.

ತಾಯಿಯ ಅಥವಾ ತಂದೆಯ ಕಡೆಯ ಮೊದಲ ಸೋದರ ಸಂಬಂಧಿಗಳ ನಡುವಿನ ಮದುವೆಗಳಿಗೂ ನಿಷೇಧ ಹೇರಲು ಶಿಫಾರಸು ಮಾಡಲಾಗಿದೆ. ಆದರೆ, ಕೆಲವು ಸಮುದಾಯಗಳಲ್ಲಿ ಮಾನ್ಯತೆ ಪಡೆದ ಸಂಪ್ರದಾಯಗಳ ಪ್ರಕಾರ ಇಂತಹ ಮದುವೆಗಳಿಗೆ ಅವಕಾಶವಿದ್ದರೆ, ಸಾರ್ವಜನಿಕ ನೀತಿ ಮತ್ತು ನೈತಿಕತೆಯ ಮಿತಿಯೊಳಗೆ ವಿನಾಯಿತಿ ನೀಡಬಹುದು.

ವಿಚ್ಛೇದನಕ್ಕೆ ಯಾವೆಲ್ಲ ಕಾರಣಗಳು ಮಾನ್ಯ?

ಪ್ರಸ್ತಾವಿತ ಸಂಹಿತೆಯ ಪ್ರಕಾರ, ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಮದುವೆಯನ್ನು ರದ್ದುಗೊಳಿಸಲು ಅವಕಾಶವಿರುತ್ತದೆ.

ಅವುಗಳೆಂದರೆ:-

- ದಾಂಪತ್ಯ ಸಂಬಂಧವನ್ನು ಪೂರ್ಣಗೊಳಿಸದಿರುವುದು.

- ಬಲವಂತ ಅಥವಾ ವಂಚನೆಯ ಮೂಲಕ ಮದುವೆಗೆ ಒಪ್ಪಿಗೆ ಪಡೆದಿರುವುದು.

- ಗುರುತಿನ ಬಗ್ಗೆ ತಪ್ಪು ಮಾಹಿತಿ ನೀಡಿರುವುದು.

ಇನ್ನು, ವಿಚ್ಛೇದನ ಪಡೆಯಲು ವ್ಯಭಿಚಾರ, ಕ್ರೌರ್ಯ, ಕನಿಷ್ಠ ಎರಡು ವರ್ಷಗಳ ಕಾಲ ಸಂಗಾತಿಯನ್ನು ತೊರೆದು ಹೋಗಿರುವುದು ಮತ್ತು ಧರ್ಮಾಂತರಗೊಳ್ಳುವುದು ಪ್ರಮುಖ ಕಾರಣಗಳಾಗಿವೆ. ವಿಚ್ಛೇದನದ ಬಳಿಕ ಅದೇ ದಂಪತಿ ಮತ್ತೆ ಮದುವೆಯಾಗಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಮೂರನೇ ವ್ಯಕ್ತಿಯನ್ನು ಮೊದಲು ಮದುವೆಯಾಗಬೇಕೆಂಬ ಕಡ್ಡಾಯ ನಿಯಮ ಇರುವುದಿಲ್ಲ.

Also Read

ಕೇಜ್ರಿವಾಲ್ ಶೀಷ್ ಮಹಲ್ ನ ದೇವರ ಕೋಣೆಯಲ್ಲಿ Jesus ಫೋಟೋ; ಐಷಾರಾಮಿ ವೈಭೋಗ ಕಂಡು ಪತ್ರಕರ್ತರು ದಂಗು! ಭುಗಿಲೆದ್ದ ವಿವಾದ

ಜೀವನಾಂಶ, ಮೆಹರ್ ಮತ್ತು ಸ್ತ್ರೀಧನದ ಬಗ್ಗೆ ಪ್ರಸ್ತಾವನೆ

ವಿಚ್ಛೇದನದ ಬಳಿಕ ಜೀವನಾಂಶ ಅಥವಾ ಪರಿಹಾರ ನೀಡುವಾಗ ಇಬ್ಬರ ಆರ್ಥಿಕ ಸ್ಥಿತಿ, ಆದಾಯ ಮತ್ತು ಅಗತ್ಯಗಳನ್ನು ಪರಿಗಣಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಪತ್ನಿಯ ಜೀವನಾಂಶದ ಹಕ್ಕಿನಲ್ಲಿ ಮುಸ್ಲಿಂ ವಿವಾಹದ ಸಂದರ್ಭದಲ್ಲಿ ಪತಿ ನೀಡುವ ಮೆಹರ್ (ವಿವಾಹದ ವೇಳೆ ಪತ್ನಿಗೆ ನೀಡುವ ಹಣ ಅಥವಾ ಆಸ್ತಿ) ಮತ್ತು ಸ್ತ್ರೀಧನವನ್ನು ಸೇರಿಸಬಾರದು ಎಂದು ಪ್ರಸ್ತಾವಿಸಲಾಗಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದ ಬಳಿಕ ಅದಕ್ಕೆ ವಿರುದ್ಧವಾಗಿರುವ ವೈಯಕ್ತಿಕ ಕಾನೂನುಗಳು, ಸಂಪ್ರದಾಯಗಳು ಮತ್ತು ಆಚರಣೆಗಳು ಅನೂರ್ಜಿತವಾಗಲಿವೆ. ವಿಚ್ಛೇದನಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಶಿಫಾರಸನ್ನೂ ಮಾಡಲಾಗಿದೆ. ಪರಿಶಿಷ್ಟ ಪಂಗಡಗಳನ್ನು (Scheduled Tribes) ಈ ಸಂಹಿತೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಏಕರೂಪ ನಾಗರಿಕ ಸಂಹಿತೆಗೆ ಅನಿಲ್ ವಿಜ್ ಬೆಂಬಲ

ಹರಿಯಾಣದ ಇಂಧನ, ಸಾರಿಗೆ ಮತ್ತು ಕಾರ್ಮಿಕ ಸಚಿವ ಅನಿಲ್ ವಿಜ್ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಂವಿಧಾನ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು. ಹೀಗಾಗಿ ದೇಶದ ಎಲ್ಲರಿಗೂ ಒಂದೇ ರೀತಿಯ ಕಾನೂನು ಇರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಈಗಾಗಲೇ ಉತ್ತರಾಖಂಡ ರಾಜ್ಯವು 2025ರ ಜನವರಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯವಾಗಿದೆ. ಗೋವಾದಲ್ಲಿ 1867ರ ಪೋರ್ಚುಗೀಸ್ ನಾಗರಿಕ ಸಂಹಿತೆಯ ಆಧಾರದಲ್ಲಿ ನಾಗರಿಕ ಕಾನೂನು ಜಾರಿಯಲ್ಲಿದೆ. ಇದಲ್ಲದೆ, ಗುಜರಾತ್, ಅಸ್ಸಾಂ ಮತ್ತು ಮಧ್ಯಪ್ರದೇಶ ರಾಜ್ಯಗಳೂ ತಮ್ಮದೇ ಆದ ಏಕರೂಪ ನಾಗರಿಕ ಸಂಹಿತೆ ರೂಪಿಸುವ ಸಿದ್ಧತೆಯಲ್ಲಿವೆ.

ಭಾರತ ಸಂವಿಧಾನದ ನಾಲ್ಕನೇ ಭಾಗದಲ್ಲಿರುವ ರಾಜ್ಯ ನೀತಿ ನಿರ್ದೇಶಕ ತತ್ವಗಳ 44ನೇ ವಿಧಿಯು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಆಶಯವನ್ನು ಹೊಂದಿದೆ. ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳಲ್ಲಿ ಯುಸಿಸಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಹಿಂದೆ ಹೇಳಿದ್ದರು.

ಸದ್ಯ ಹರಿಯಾಣ ಸರ್ಕಾರವು ಕಾನೂನು ಆಯೋಗದ ಶಿಫಾರಸುಗಳನ್ನು ಪರಿಶೀಲಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ಗಮನಿಸಬೇಕಾದ ಅಂಶವೆಂದರೆ, ಇವು ಸದ್ಯಕ್ಕೆ ಕಾನೂನು ಆಯೋಗದ ಶಿಫಾರಸುಗಳಷ್ಟೇ ಹೊರತು ಜಾರಿಗೆ ಬಂದಿರುವ ಕಾನೂನಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement