ಸ್ಟಾಲಿನ್ ಮನವೊಲಿಕೆಗೆ INDIA ಕೊನೆ ಕ್ಷಣದ ಕಸರತ್ತು: ಹೈವೋಲ್ಟೇಜ್ ಮೀಟಿಂಗ್; Video
ವಿಶೇಷ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ ನಾಯಕರು ತಕ್ಷಣ ವಿಮಾನ ನಿಲ್ದಾಣದ ಎದುರಿರುವ ಪಂಚತಾರಾ ಹೋಟೆಲ್‌ಗೆ ತೆರಳಿದ್ದಾರೆ. ಈ ಮಧ್ಯೆ, ಡಿಎಂಕೆ ಹಿರಿಯ ನಾಯಕಿ ಹಾಗೂ ಲೋಕಸಭಾ ಸಂಸದೆ ಕನಿಮೊಳಿ ಅವರು ಈ ವಿಚಾರದಲ್ಲಿ ತಮ್ಮ ಪಕ್ಷದ ನಿಲುವನ್ನು ಖರ್ಗೆ ಅವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.
ಚೆನ್ನೈ: ಕೇಂದ್ರದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡಿರುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಮನವೊಲಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಉನ್ನತ ನಾಯಕರ ನಿಯೋಗ ಚೆನ್ನೈನ ಸ್ಟಾಲಿನ್ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ.
ನಿಯೋಗದಲ್ಲಿ ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ, ಕೇರಳ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ವಿ.ಡಿ. ಸತೀಶನ್ ಹಾಗೂ ಎ. ರೇವಂತ್ ರೆಡ್ಡಿ ಕೂಡ ಇದ್ದಾರೆ.
ವಿಶೇಷ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದ ನಾಯಕರು ತಕ್ಷಣ ವಿಮಾನ ನಿಲ್ದಾಣದ ಎದುರಿರುವ ಪಂಚತಾರಾ ಹೋಟೆಲ್‌ಗೆ ತೆರಳಿದ್ದಾರೆ. ಈ ಮಧ್ಯೆ, ಡಿಎಂಕೆ ಹಿರಿಯ ನಾಯಕಿ ಹಾಗೂ ಲೋಕಸಭಾ ಸಂಸದೆ ಕನಿಮೊಳಿ ಅವರು ಈ ವಿಚಾರದಲ್ಲಿ ತಮ್ಮ ಪಕ್ಷದ ನಿಲುವನ್ನು ಖರ್ಗೆ ಅವರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.
ನಿನ್ನೆ ಸಂಸದರ ಸಭೆಯಲ್ಲಿ ನಮ್ಮ ಪಕ್ಷದ ಅಧ್ಯಕ್ಷರು ಪ್ರಕಟಿಸಿದ ನಿಲುವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದೇನೆ. ಇಂಡಿಯಾ ನಾಯಕರು ನಮ್ಮ ನಾಯಕನನ್ನು ಭೇಟಿಯಾಗಲು ಬಂದಿದ್ದಾರೆ” ಎಂದು ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವ ಡಿಎಂಕೆ ನಿರ್ಧಾರದ ಕುರಿತು ಅವರು ಹೇಳಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ನಡೆದ ಚುನಾವಣೆಯ ಬಳಿಕ ಕಾಂಗ್ರೆಸ್, ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಹೊರಬಂದು, ಟಿವಿಕೆ ಸಂಸ್ಥಾಪಕ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಮೊದಲ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಿತ್ತು. ಅಲ್ಲದೆ, ಸಮ್ಮಿಶ್ರ ಸರ್ಕಾರದಲ್ಲೂ ಭಾಗವಹಿಸಿತ್ತು.
ಅಂದಿನಿಂದ ಎರಡೂ ಪಕ್ಷಗಳು ಪರಸ್ಪರ ಟೀಕಿಸುತ್ತಿದ್ದು, ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಬದಲಿಸಿದೆ ಎಂದು ಡಿಎಂಕೆ ಆರೋಪಿಸಿತ್ತು.
ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ನಾಳೆ ಸೋಮವಾರ ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದ್ದು, ಅದನ್ನು ಸೋಲಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ನಿಯೋಗ ಚೆನ್ನೈ ಮತ್ತು ಮುಂಬೈ ಪ್ರವಾಸ ಕೈಗೊಂಡಿದೆ. ಚೆನ್ನೈನಲ್ಲಿ ಸ್ಟಾಲಿನ್ ಹಾಗೂ ಮುಂಬೈನಲ್ಲಿ ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗುತ್ತಿದೆ. ನಿಯೋಗದಲ್ಲಿ ಇಂಡಿಯಾ ಮೈತ್ರಿಕೂಟದ ಇತರ ಕೆಲವು ನಾಯಕರೂ ಇದ್ದಾರೆ.
22 ಲೋಕಸಭಾ ಹಾಗೂ 8 ರಾಜ್ಯಸಭಾ ಸದಸ್ಯರನ್ನು ಹೊಂದಿರುವ ಡಿಎಂಕೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವುದಾಗಿ ಘೋಷಿಸಿತ್ತು.
ಪ್ರಮುಖ ಮಿತ್ರಪಕ್ಷಗಳ ಮನವೊಲಿಸಲು ಪ್ರತಿಪಕ್ಷಗಳ ತುರ್ತು ಪ್ರಯತ್ನ
ಡಿಎಂಕೆ ತನ್ನ ಎರಡು ಪ್ರಮುಖ ಬೇಡಿಕೆಗಳನ್ನು ಮಸೂದೆಯಲ್ಲಿ ಸೇರಿಸಿರುವ ಹಿನ್ನೆಲೆಯಲ್ಲಿ ಅದಕ್ಕೆ ಬೆಂಬಲ ನೀಡಲು ನಿರ್ಧರಿಸಿದೆ ಎಂದು ಸ್ಟಾಲಿನ್ ಹೇಳಿದ್ದರು. ಇದು ಪಕ್ಷದ ಹೋರಾಟಕ್ಕೆ ಸಂದ ಜಯವಾಗಿದ್ದು, ದಕ್ಷಿಣದ ಎಲ್ಲ ರಾಜ್ಯಗಳಿಗೂ ದೊರೆತ ಗೆಲುವಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.
ಲೋಕಸಭೆಯಲ್ಲಿ ತಮಿಳುನಾಡಿನ ಶೇ.7.18ರ ಸ್ಥಾನಗಳ ಪಾಲು ಕಡಿಮೆಯಾಗಬಾರದು ಹಾಗೂ 1971ರ ಜನಗಣತಿ ಆಧರಿಸಿ ರಾಜ್ಯಗಳ ನಡುವಿನ ಸಂಸದೀಯ ಪ್ರಾತಿನಿಧ್ಯದ ಈಗಿನ ಅನುಪಾತವನ್ನು ಉಳಿಸಿಕೊಳ್ಳಬೇಕು ಎಂಬುದು ಡಿಎಂಕೆಯ ಎರಡು ಪ್ರಮುಖ ಬೇಡಿಕೆಗಳಾಗಿವೆ.
ಈ ಹಿಂದೆ ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾವವನ್ನು ಡಿಎಂಕೆ ತೀವ್ರವಾಗಿ ವಿರೋಧಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸ್ಟಾಲಿನ್ ಏಪ್ರಿಲ್‌ನಲ್ಲಿ ಕಪ್ಪು ಬಟ್ಟೆ ಧರಿಸಿ ಮಸೂದೆಯ ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದ್ದರು.
ಡಿಎಂಕೆ ಸಂಸದರಿಂದ ಗೋ ಬ್ಯಾಕ್ ಕಾಂಗ್ರೆಸ್ ಸ್ವಾಗತ
ಚೆನ್ನೈಗೆ ಆಗಮಿಸಿದ ಇಂಡಿಯಾ ಮೈತ್ರಿಕೂಟ ನಾಯಕರಿಗೆ ಡಿಎಂಕೆ ಬೆಂಬಲಿಗರು ಗೋ ಬ್ಯಾಕ್ ಕಾಂಗ್ರೆಸ್ ಎಂದು ಫಲಕ ಹಿಡಿದದ್ದು ಕಂಡುಬಂತು.