ಡಿ.1 ರಿಂದ ಶೋಧ ಕಾರ್ಯಾಚರಣೆ ಬಹಿಷ್ಕರಿಸಲು IT ಇಲಾಖೆಯ ನೌಕರರ ಸಂಘಟನೆಗಳು ಬೆದರಿಕೆ! ಕಾರಣವೇನು?
ತಮ್ಮ 12 ಅಂಶಗಳ ಬೇಡಿಕೆಗಳ ಪಟ್ಟಿಯು ನೌಕರರ "ಗೌರವ ಮತ್ತು ಹಕ್ಕುಗಳನ್ನು ಎತ್ತಿಹಿಡಿಯುವ" ಉದ್ದೇಶವನ್ನು ಹೊಂದಿದೆ ಎಂದು ಸಂಘಟನೆಗಳು ಹೊರಡಿಸಿದ ನಿರ್ಣಯವೊಂದರಲ್ಲಿ ತಿಳಿಸಲಾಗಿದೆ.
ನವದೆಹಲಿ: ಬಾಕಿ ಇರುವ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಈಡೇರಿಸದಿದ್ದರೆ, ಡಿಸೆಂಬರ್ 1 ರಿಂದ ಶೋಧ ಮತ್ತು ಸಮೀಕ್ಷೆ (search and survey) ಕಾರ್ಯಾಚರಣೆಗಳಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆಯ ನೌಕರರ ಎರಡು ಪ್ರಮುಖ ಸಂಘಟನೆಗಳು ಘೋಷಿಸಿವೆ.
ತಮ್ಮ 12 ಅಂಶಗಳ ಬೇಡಿಕೆಗಳ ಪಟ್ಟಿಯು ನೌಕರರ "ಗೌರವ ಮತ್ತು ಹಕ್ಕುಗಳನ್ನು ಎತ್ತಿಹಿಡಿಯುವ" ಉದ್ದೇಶವನ್ನು ಹೊಂದಿದೆ ಎಂದು ಸಂಘಟನೆಗಳು ಹೊರಡಿಸಿದ ನಿರ್ಣಯವೊಂದರಲ್ಲಿ ತಿಳಿಸಲಾಗಿದೆ.
"CBDT (ಕೇಂದ್ರೀಯ ನೇರ ತೆರಿಗೆಗಳ ಮಂಡಳಿ) ಆರಂಭದಲ್ಲಿ ತೆಗೆದುಕೊಂಡ ಸಕಾರಾತ್ಮಕ ಕ್ರಮಗಳನ್ನು ನಾವು ಗುರುತಿಸುತ್ತೇವೆ. ಆದರೆ, ಹಲವು ಪ್ರಮುಖ ವಿಷಯಗಳು CBDT ಅಧ್ಯಕ್ಷರ ಮಟ್ಟದಲ್ಲಿ ಅಂತಿಮ ಅನುಮೋದನೆಗಾಗಿ ಬಾಕಿ ಉಳಿದಿರುವುದು ಮತ್ತು ಈ ವಿಳಂಬಕ್ಕೆ ಯಾವುದೇ ಸಮರ್ಥನೀಯ ಕಾರಣ ನೀಡದಿರುವುದು ಗಂಭೀರ ಕಳವಳದ ವಿಷಯವಾಗಿದೆ. ಅಲ್ಲದೆ, ಇತರ ಕೆಲವು ವಿಷಯಗಳಲ್ಲಿನ ಪ್ರಗತಿಯು ನಿರೀಕ್ಷೆಗಿಂತ ತೀರಾ ಕಡಿಮೆಯಿದೆ" ಎಂದು ಆ ಎರಡು ಸಂಘಟನೆಗಳ ನಿರ್ಣಯದಲ್ಲಿ ಹೇಳಲಾಗಿದೆ.
ಕಂದಾಯ ಕಾರ್ಯದರ್ಶಿ ಹಾಗೂ ನಂತರ CBDT ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿ ಐದು ತಿಂಗಳು ಕಳೆದಿದ್ದರೂ, ದೀರ್ಘಕಾಲದ ಹಲವು ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ನಾವು ನಿರಂತರವಾಗಿ ಮಾತುಕತೆ ನಡೆಸಿದರೂ ಮತ್ತು ಸಾಕಷ್ಟು ಸಂಯಮ ತೋರಿದರೂ, ಯಾವುದೇ ಗಮನಾರ್ಹ ಪ್ರಗತಿಯಾಗಿಲ್ಲ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಒಂದು ವೇಳೆ ಈ ಸಮಸ್ಯೆಗಳು ಬಗೆಹರಿಯದಿದ್ದರೆ, ಡಿಸೆಂಬರ್ 1 ರಿಂದ ಪ್ರಾರಂಭವಾಗುವ ಯಾವುದೇ ಶೋಧ ಮತ್ತು ಸಮೀಕ್ಷೆ (TDS ಸಮೀಕ್ಷೆಗಳೂ ಸೇರಿದಂತೆ) ಕಾರ್ಯಾಚರಣೆಗಳಲ್ಲಿ ಈ ಎರಡು ಸಂಘಟನೆಗಳ ಸಿಬ್ಬಂದಿ ಭಾಗವಹಿಸುವುದಿಲ್ಲ ಎಂದು ಅದರಲ್ಲಿ ತಿಳಿಸಲಾಗಿದೆ.
ತೆರಿಗೆ ವಂಚನೆಯನ್ನು ತಡೆಯಲು ಇಲಾಖೆ ಕೈಗೊಳ್ಳುವ ಜಾರಿ ಕ್ರಮಗಳಲ್ಲಿ (enforcement action) ಈ ಶೋಧ ಮತ್ತು ಸಮೀಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತವೆ.