ನವದೆಹಲಿ: ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್‌ನಿಂದ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಇದೀಗ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೂಲಭೂತವಾದಿ ಸಹ ಪೈಲಟ್ ನಿಂದ ದಾಳಿಗೆ ತುತ್ತಾದ ಹೊರತಾಗಿಯೂ 170ಕ್ಕೂ ಹೆಚ್ಚು ಪ್ರಯಾಣಿಕರ ರಕ್ಷಣೆ ಮಾಡಿದ ಭಾರತ ಮೂಲದ ಪೈಲಟ್ ಸ್ಮಿತ್ ಮಚ್ಚರ್ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಅವರ ರಕ್ಷಣೆಗೆ ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಂತರ ಜನರು ಪ್ರಾರ್ಥನೆ ಮಾಡುತ್ತಿದ್ದಾರೆ.
ಇದೀಗ ಅವರೆಲ್ಲರ ಪ್ರಾರ್ಥನೆ ಫಲಿಸಿದ್ದು ಕೊನೆಗೂ ಫ್ಲೈ ದುಬೈ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾತ್ರವಲ್ಲದೇ ಘಟನೆ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಅವರು ತಮ್ಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಬೆಂಬಲ ನೀಡಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.
ತಾವು ಪ್ರಾಣಾಪಾಯದಿಂದ ಹೊರಬಂದಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ಮಚ್ಚರ್ ತಿಳಿಸಿದ್ದಾರೆ. ಗುರುವಾರ ತಮ್ಮ ಎಕ್ಸ್ ಖಾತೆಯಲ್ಲಿ ಸ್ಮಿತ್ ಮಚ್ಚರ್ ಅವರು ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ.
ಸಂದೇಶ ಹಂಚಿಕೊಳ್ಳಲು ಎಕ್ಸ್ ಖಾತೆ ತೆರೆದ ಮಚ್ಚರ್
ಇನ್ನು ಸ್ಮಿತ್ ಮಚ್ಚರ್ ಗುರುವಾರ ತಮ್ಮ ಎಕ್ಸ್ ಖಾತೆ ತೆರೆದಿದ್ದು, ತಮ್ಮ ಆರೋಗ್ಯದ ವಿಚಾರವಾಗಿ ತಮ್ಮ ಮೊದಲ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ, 'ನಿಮ್ಮೆಲ್ಲರೊಂದಿಗೆ ಮಹತ್ವದ ಸಂದೇಶವನ್ನು ಹಂಚಿಕೊಳ್ಳಲು ಇಂದು ಈ ಖಾತೆಯನ್ನು ರಚಿಸಿದ್ದೇನೆ. ನನ್ನ ಜೊತೆ ನಿಂತ, ಬೆಂಬಲ ನೀಡಿದ ಹಾಗೂ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದಗಳು” ಎಂದು ಅವರು ಬರೆದಿದ್ದಾರೆ.
“ನನ್ನ ಆರೋಗ್ಯ ಈಗ ಸ್ಥಿರವಾಗಿದೆ. ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ನಾನು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದೇನೆ ಎಂಬುದನ್ನು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಈ ಕಷ್ಟದ ಸಮಯದಲ್ಲಿ ನಿಮ್ಮ ಪ್ರಾರ್ಥನೆ, ಬೆಂಬಲ ಹಾಗೂ ಶುಭ ಹಾರೈಕೆಗಳು ನನಗೆ ಬಹಳ ಮಹತ್ವದ್ದಾಗಿದ್ದವು” ಎಂದು ಸ್ಮಿತ್ ಮಚ್ಚರ್ ಹೇಳಿದ್ದಾರೆ.
ಅಲ್ಲದೆ “ನನಗಾಗಿ ಪ್ರಾರ್ಥಿಸಿದ ಹಾಗೂ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ,” ಎಂದು ಫ್ಲೈದುಬೈ ಪೈಲಟ್ ತಿಳಿಸಿದ್ದಾರೆ.