ಇಂದು ಶನಿವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಗಂಭೀರ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಗೃಹ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ. ಪ್ರತಿಭಟನೆ ನಡೆಸಲು ಸಲ್ಲಿಸಿದ್ದ ಮನವಿಯನ್ನು ದೆಹಲಿ ಪೊಲೀಸರು ಸ್ಪಷ್ಟವಾಗಿ ತಿರಸ್ಕರಿಸಿದ್ದು, ಉದ್ದೇಶಿತ ಸಭೆಯನ್ನು ನಿಷೇಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಈ ವಿಷಯವನ್ನು ತಿಳಿಸಿದ್ದಾರೆ. ನಿಗದಿತ ಕಾರ್ಯವಿಧಾನಗಳನ್ನು ಪಾಲಿಸದಿರುವುದು ಹಾಗೂ ಜಂತರ್ ಮಂತರ್ ಪ್ರದೇಶದಲ್ಲಿ ಸಭೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 23.07.2018ರಂದು W.P. (C) No. 1153 of 2017 ಪ್ರಕರಣದಲ್ಲಿ ನೀಡಿರುವ ಕಡ್ಡಾಯ ನಿರ್ದೇಶನಗಳನ್ನು ಪಾಲಿಸುವ ಅಗತ್ಯದ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸದಿರುವ ಸಿಜೆಪಿ ಹಾಗೂ ಅದಕ್ಕೆ ಬೆಂಬಲ ನೀಡುವ ಪಕ್ಷಗಳು, ಸಂಘಟನೆಗಳು ಮತ್ತು ವ್ಯಕ್ತಿಗಳ ಹಿಂದಿನ ನಡವಳಿಕೆಯ ದಾಖಲೆಗಳನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಿವಿಧ ರಾಜ್ಯಗಳಿಂದ ದೆಹಲಿಗೆ ಈ ಹಿಂದೆ ನಡೆಸಲಾದ ಬೃಹತ್ ಜನಸಮೂಹದ ಆಗಮನದಿಂದ ಸಾರ್ವಜನಿಕ ಸುವ್ಯವಸ್ಥೆಗೆ ಗಮನಾರ್ಹ ಅಡಚಣೆ ಉಂಟಾಗಿದ್ದು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಿಜೆಪಿಗೆ ಪ್ರತಿಭಟನೆಗೆ ಅನುಮತಿ ನಿರಾಕರಿಸಿರುವುದನ್ನು ಅಧಿಕೃತವಾಗಿ ತಿಳಿಸಿದ್ದರೂ, ಪಕ್ಷ ಹಾಗೂ ಅದರ ಬೆಂಬಲಿಗರು ಕಾನೂನುಬದ್ಧ ಆದೇಶಗಳನ್ನು ಉಲ್ಲಂಘಿಸಿ, ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅನುಮತಿಯಿಲ್ಲದೆ ದೆಹಲಿಯನ್ನು ಪ್ರವೇಶಿಸಲು ಉದ್ದೇಶಿಸಿದ್ದಾರೆ ಎಂಬ ವಿಶ್ವಾಸಾರ್ಹ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆಯಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವುದನ್ನು ಮುಂಚಿತವಾಗಿ ತಡೆಯಲು ಹಾಗೂ ಪ್ರಮುಖ ಮೂಲಸೌಕರ್ಯಗಳ ರಕ್ಷಣೆಗಾಗಿ, ಕಾನೂನಿನ ಶಾಸನಬದ್ಧ ಮತ್ತು ಕಾರ್ಯಾಚರಣಾ ಚೌಕಟ್ಟಿನೊಳಗೆ ದೆಹಲಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ, ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೊಳಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗುಪ್ತಚರ ಸಂಸ್ಥೆಗಳು, ಗಡಿ ಹಾಗೂ ಸಾರಿಗೆ ಪ್ರಾಧಿಕಾರಗಳು ಮತ್ತು ದೆಹಲಿ ಪೊಲೀಸರ ನಡುವೆ ನಿರಂತರವಾಗಿ, ನೈಜ ಸಮಯದಲ್ಲಿ ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುವಂತೆಯೂ ಗೃಹ ಸಚಿವಾಲಯ ಸೂಚಿಸಿದೆ. ಇದರಿಂದ ಎಲ್ಲ ಇಲಾಖೆಗಳು ಸಮನ್ವಯದೊಂದಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವುದನ್ನು ಸಂವಿಧಾನಾತ್ಮಕವಾಗಿ ಯಾವುದೇ ರಾಜಿ ಮಾಡಿಕೊಳ್ಳಲಾಗದ ಕರ್ತವ್ಯ ಎಂದು ಬಣ್ಣಿಸಿರುವ ಗೃಹ ಸಚಿವಾಲಯ, ಕಾನೂನಿನ ಆಳ್ವಿಕೆಯನ್ನು ಎತ್ತಿಹಿಡಿಯಲು ನೀಡಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರ ಬಗ್ಗೆ ರಾಜ್ಯಗಳಿಂದ ವಿವರ ಕೇಳಿದ ದೆಹಲಿ ಪೊಲೀಸರು
ಪ್ರಸ್ತಾವಿತ ಪ್ರತಿಭಟನೆಗೆ ಜನರನ್ನು ಸಂಘಟಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವಿವರವಾದ ಮಾಹಿತಿ ನೀಡುವಂತೆ ದೆಹಲಿ ಪೊಲೀಸ್ ವಿಶೇಷ ಘಟಕ ಗುರುವಾರ ಸಂಜೆ ಕೋರಿದೆ. ಈ ಹಿಂದೆ ಅಕ್ಟೋಬರ್ 5ರಂದು ಕಳುಹಿಸಿದ್ದ ಪತ್ರಕ್ಕೆ ಸಂಬಂಧಿಸಿದಂತೆ ಕೇಳಲಾಗಿದ್ದ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಅಥವಾ ಅಪೂರ್ಣವಾಗಿದೆ ಎಂದು ವಿಶೇಷ ಘಟಕ ತಿಳಿಸಿದೆ.
ಹೊಸ ಪತ್ರದಲ್ಲಿ 10 ನಿರ್ದಿಷ್ಟ ಅಂಶಗಳಿಗೆ ಸಂಬಂಧಿಸಿದಂತೆ ನವೀಕೃತ ಮಾಹಿತಿ ನೀಡುವಂತೆ ಪೊಲೀಸರು ಕೋರಿದ್ದಾರೆ.
ಪ್ರತಿಭಟನೆಯಲ್ಲಿ ಜನರನ್ನು ಸಂಘಟಿಸುವ ರಾಜ್ಯಮಟ್ಟದ ಸಂಯೋಜಕರು ಮತ್ತು ಪ್ರಮುಖ ಪದಾಧಿಕಾರಿಗಳ ಹೆಸರು, ಹಿನ್ನೆಲೆ ಹಾಗೂ ಸಂಪರ್ಕ ವಿವರಗಳನ್ನು ಪೊಲೀಸರು ಕೇಳಿದ್ದಾರೆ. ಅಲ್ಲದೆ, ಸಿಜೆಪಿಗೆ ಬೆಂಬಲ ಅಥವಾ ಒಗ್ಗಟ್ಟು ವ್ಯಕ್ತಪಡಿಸುತ್ತಿರುವ ಸಂಘಟನೆಗಳು, ಒಕ್ಕೂಟಗಳು, ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಹಾಗೂ ಇತರ ಗುಂಪುಗಳ ವಿವರಗಳನ್ನೂ ಕೋರಿದ್ದಾರೆ. ದೆಹಲಿಗೆ ಪ್ರಯಾಣಿಸುವ ನಿರೀಕ್ಷೆಯಿರುವ ಪ್ರತಿಭಟನಾಕಾರರು ಮತ್ತು ಬೆಂಬಲಿಗರ ಅಂದಾಜು ಸಂಖ್ಯೆಯನ್ನು, ಲಭ್ಯವಿದ್ದಲ್ಲಿ ಜಿಲ್ಲಾವಾರು ವಿವರಗಳೊಂದಿಗೆ ನೀಡುವಂತೆ ಸೂಚಿಸಿದ್ದಾರೆ.
ಪ್ರತಿಭಟನಾಕಾರರು ಹೊರಡುವ ಉದ್ದೇಶಿತ ದಿನಾಂಕ ಮತ್ತು ಸಮಯ, ಪ್ರಯಾಣದ ಮಾರ್ಗಗಳು, ದೆಹಲಿ ಹಾಗೂ ರಾಷ್ಟ್ರೀಯ ರಾಜಧಾನಿ ವಲಯಕ್ಕೆ (NCR) ಆಗಮಿಸುವ ದಿನಾಂಕ ಮತ್ತು ಸಮಯದ ವಿವರಗಳನ್ನೂ ಕೇಳಲಾಗಿದೆ.
ರೈಲು, ಬಸ್, ಖಾಸಗಿ ಅಥವಾ ಬಾಡಿಗೆ ವಾಹನಗಳು ಹಾಗೂ ವಿಮಾನ ಪ್ರಯಾಣ ಸೇರಿದಂತೆ ಬಳಸಲಿರುವ ಸಾರಿಗೆ ವಿಧಾನಗಳು ಮತ್ತು ಪ್ರತಿ ವಿಧಾನದಲ್ಲಿ ಪ್ರಯಾಣಿಸುವವರ ಅಂದಾಜು ಸಂಖ್ಯೆಯನ್ನೂ ಕೋರಲಾಗಿದೆ. ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ವಾಸ್ತವ್ಯ ಹೂಡಲು ಉದ್ದೇಶಿಸಿರುವ ಸ್ಥಳಗಳು, ತಂಗುದಾಣಗಳು, ಶಿಬಿರಗಳು, ಧರ್ಮಶಾಲೆಗಳು, ಹಾಸ್ಟೆಲ್‌ಗಳು, ಅತಿಥಿಗೃಹಗಳು ಮತ್ತು ಹೋಟೆಲ್‌ಗಳ ವಿವರಗಳನ್ನೂ ಕೇಳಲಾಗಿದೆ ಎಂದು ಪತ್ರವನ್ನು ಉಲ್ಲೇಖಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಲ್ಲದೆ, ಪ್ರತಿಭಟನೆಗೆ ಸಂಬಂಧಿಸಿದಂತೆ ಯೋಜಿಸಲಾಗಿರುವ ಅಥವಾ ಈಗಾಗಲೇ ನಡೆಸಿರುವ ಪೂರ್ವಸಿದ್ಧತಾ ಸಭೆಗಳು, ಪ್ರತಿಭಟನೆಗಳು, ಸಾಮಾಜಿಕ ಮಾಧ್ಯಮ ಅಭಿಯಾನಗಳು, ನಿಧಿ ಸಂಗ್ರಹಣೆ, ಜನಸಂಘಟನೆ ಹಾಗೂ ಇತರ ಚಟುವಟಿಕೆಗಳ ವಿವರಗಳನ್ನೂ ಪೊಲೀಸರು ಕೇಳಿದ್ದಾರೆ.
ಪ್ರಭಾವಿ ವ್ಯಕ್ತಿಗಳು, ಕಾರ್ಯಕರ್ತರು, ವಿದ್ಯಾರ್ಥಿ ಮತ್ತು ಯುವಜನ ಮುಖಂಡರು, ಸಾಮಾಜಿಕ ಮಾಧ್ಯಮ ಪ್ರಭಾವಿಗಳು, ಸಾರ್ವಜನಿಕ ವ್ಯಕ್ತಿಗಳು ಹಾಗೂ ಇತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯ ಬಗ್ಗೆಯೂ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಪ್ರತಿಭಟನೆಯ ಸಂಘಟನೆ ಮತ್ತು ಜನಸಮೂಹದ ಚಲನವಲನಕ್ಕೆ ಸಂಬಂಧಿಸಿದ ಇತರ ಯಾವುದೇ ಮಹತ್ವದ ಮಾಹಿತಿಯಿದ್ದರೂ ಅದನ್ನು ಒದಗಿಸುವಂತೆ ದೆಹಲಿ ಪೊಲೀಸ್ ವಿಶೇಷ ಘಟಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ.