

ನವದೆಹಲಿ: ಅನುಮತಿಯಿಲ್ಲದೆ ಜಂತರ್ ಮಂತರ್ನ ಬ್ಯಾರಿಕೇಡ್ ಉಲ್ಲಂಘಿಸಿ ರಾಷ್ಟ್ರಧ್ವಜ ಹಾರಿಸಿದ ಸಿಜೆಪಿ (CJP) ಮುಖಂಡರಿಗೆ ದೆಹಲಿ ಹೈಕೋರ್ಟ್ ಬುಧವಾರ ಬಿಸಿ ಮುಟ್ಟಿಸಿದ್ದು, ನೀವು Gen Z ಗಳೇ ಅಲ್ಲ ಎಂದು ಹೇಳಿದೆ.
ಜಂತರ್ ಮಂತರ್ ಅತಿಕ್ರಮಣ ಪ್ರಕರಣದಲ್ಲಿ ತಮ್ಮ ನ್ಯಾಯಾಂಗ ಬಂಧನ ವಿಸ್ತರಿಸಿದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನ್ಯಾ.ಸುಬ್ರಮೋನಿಯಂ ಪ್ರಸಾದ್ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.
ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ಗೆ ದೆಹಲಿ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಪ್ರತಿಭಟನಾಕಾರರ ನಡೆ, ಜಾಮೀನು ಬಾಂಡ್ ಉಲ್ಲಂಘನೆ ಮತ್ತು ಪ್ರತಿಭಟನೆಯ ಉದ್ದೇಶದ ಕುರಿತು ನ್ಯಾಯಾಲಯ ಹಲವು ಪ್ರಶ್ನೆಗಳನ್ನು ಎತ್ತಿದೆ.
ನಿಷೇಧಿತ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಯತ್ನಿಸುವ ಮೂಲಕ ತಾವು ನೀಡಿದ್ದ ಬಾಂಡ್ನ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ CJP ನಾಯಕರು ಬಂಧನಕ್ಕೊಳಗಾಗಿದ್ದರು.
'ಬ್ಯಾರಿಕೇಡ್ ಮುರಿದರೆ ಹಿಂಸಾಚಾರಕ್ಕೂ ದಾರಿಯಾಗಬಹುದು'
ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವವರು ಬ್ಯಾರಿಕೇಡ್ಗಳನ್ನು ಮುರಿದರೆ, ಇತರರೂ ಅವರನ್ನು ಹಿಂಬಾಲಿಸುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅಭಿಪ್ರಾಯಪಟ್ಟರು. “ನೀವು ಪ್ರತಿಭಟನೆಯ ಮುಂಚೂಣಿಯಲ್ಲಿದ್ದೀರಿ. ಪ್ರತಿಭಟನೆಯ ನೇತೃತ್ವ ವಹಿಸಿದ್ದಿರಿ.. ನೀವು ಬ್ಯಾರಿಕೇಡ್ ಮುರಿದಾಗ, ಹೆಚ್ಚಿನ ಜನರು ನಿಮ್ಮನ್ನು ಹಿಂಬಾಲಿಸುವ ಸಾಧ್ಯತೆ ಇರುತ್ತದೆ. ನಿಮ್ಮ ನಿಯಂತ್ರಣದಲ್ಲಿಲ್ಲದ ವ್ಯಕ್ತಿಗಳೂ ಇರಬಹುದು ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿತು.
ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಘಟನೆಗಳು ಇವೆ
ಇದೇ ವೇಳೆ ಇತರ ದೇಶಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ ಘಟನೆಗಳನ್ನೂ ನ್ಯಾಯಮೂರ್ತಿಗಳು ಉಲ್ಲೇಖಿಸಿದರು. “ನಮ್ಮ ದೇಶದ ಹೊರಗೆ ಇಂತಹ ಘಟನೆಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ವಿದ್ಯಾರ್ಥಿಗಳ ಪ್ರತಿಭಟನೆಯಾಗಿ ಆರಂಭವಾದದ್ದು, ಕಟ್ಟಡಗಳಿಗೆ ಬೆಂಕಿ ಹಚ್ಚುವ ಮತ್ತು ಆಸ್ತಿಪಾಸ್ತಿಗಳನ್ನು ಸುಡುವ ಘಟನೆಗಳಾಗಿ ಬದಲಾಗಿತ್ತು” ಎಂದು ನ್ಯಾಯಾಲಯ ಹೇಳಿತು.
'ಬಾಂಡ್ ಉಲ್ಲಂಘಿಸಿದರೆ ಕಠಿಣ ಷರತ್ತು ವಿಧಿಸಬಾರದಾ?'
CJP ನಾಯಕರು ಮೊದಲ ಬಾರಿ ಬಂಧನಕ್ಕೊಳಗಾದ ಬಳಿಕ ಸಲ್ಲಿಸಿದ್ದ ಶಾಂತಿ ಕಾಪಾಡುವ ಬಾಂಡ್ನ ಷರತ್ತುಗಳನ್ನು ಉಲ್ಲಂಘಿಸಿರುವುದರ ಬಗ್ಗೆಯೂ ಹೈಕೋರ್ಟ್ ಪ್ರಶ್ನಿಸಿತು. “ನೀವು ಬಾಂಡ್ ಉಲ್ಲಂಘಿಸಿದಾಗ, ಅಧಿಕಾರಿಗಳು ಇನ್ನಷ್ಟು ಕಠಿಣ ಷರತ್ತುಗಳಿರುವ ಬಾಂಡ್ ಕೇಳಲು ಅರ್ಹರಲ್ಲವೇ?” ಎಂದು ನ್ಯಾಯಾಲಯ ಪ್ರಶ್ನಿಸಿತು.
'ನೀವು Gen Z ಅಲ್ಲ, ಮಿಲೇನಿಯಲ್ಸ್'
ವಿಚಾರಣೆ ವೇಳೆ CJP ನಾಯಕರ ವಯಸ್ಸಿನ ಬಗ್ಗೆಯೂ ನ್ಯಾಯಾಲಯ ಮಾಹಿತಿ ಕೇಳಿತು. ಅವರಿಗೆ 27 ಮತ್ತು 31 ವರ್ಷ ವಯಸ್ಸು ಎಂದು ತಿಳಿಸಿದಾಗ, ಅವರು Gen Z ಪೀಳಿಗೆಗೆ ಸೇರಿದವರಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.
“ಹಾಗಾದರೆ ನೀವು Gen Z ಅಲ್ಲ. ಮಿಲೇನಿಯಲ್ಸ್ ಪೀಳಿಗೆಯವರ ವಯಸ್ಸೆಷ್ಟು? ಮೊದಲು ಅದು ವಿದ್ಯಾರ್ಥಿಗಳ ಪ್ರತಿಭಟನೆಯಾಗಿತ್ತು; ಅಲ್ಲಿ ಮಕ್ಕಳು ಇದ್ದರು. ಆದರೆ ಈಗ ಬೇರೆ ಉದ್ದೇಶವಿದೆ. ಜನರು ಅದೇ ಇದ್ದರೂ, ಉದ್ದೇಶ ಬದಲಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಶಾಂತಿಭಂಗದ ಆತಂಕವಿದೆಯೇ ಎಂಬುದನ್ನು ಮೌಲ್ಯಮಾಪನ ಮಾಡುವಾಗ ವ್ಯಕ್ತಿಯ ಗುರುತು, ಉದ್ದೇಶ ಮತ್ತು ಚಟುವಟಿಕೆಗಳೂ ಮುಖ್ಯವಾಗುತ್ತವೆ. “ನೀವು ಯಾರು? ಏನು ಮಾಡುತ್ತೀರಿ? ನಿಮ್ಮ ಸಂಘಟನೆ ಯಾವುದು? ಅದರ ಉದ್ದೇಶವೇನು? ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಆತಂಕವಿದ್ದಾಗ ಈ ಎಲ್ಲ ಪ್ರಶ್ನೆಗಳು ಮಹತ್ವ ಪಡೆಯುತ್ತವೆ” ಎಂದು CJP ನಾಯಕರ ಪರ ವಕೀಲರಿಗೆ ನ್ಯಾಯಾಲಯ ಹೇಳಿತು.
ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವಂತೆ ಸಲಹೆ
ಬಳಿಕ CJP ನಾಯಕರ ಪರ ವಕೀಲರು ಸಂಜೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವವರೆಗೆ ಕಾಯುವಂತೆ ಹೈಕೋರ್ಟ್ ಸೂಚಿಸಿತು. ಬಳಿಕ ವಕೀಲರು ಅರ್ಜಿಯನ್ನು ಹಿಂಪಡೆದರು. ಹೀಗಾಗಿ, ಬಂಧನ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಕುರಿತು ಹೈಕೋರ್ಟ್ ಯಾವುದೇ ಅಂತಿಮ ತೀರ್ಪು ನೀಡದೆ ವಿಚಾರಣೆ ಮುಕ್ತಾಯಗೊಂಡಿತು.
ಏನಿದು ಪ್ರಕರಣ?
CJP ನಾಯಕರಾದ ಸೌರವ್ ದಾಸ್, ಆಶುತೋಷ್ ರಂಕಾ ಮತ್ತು ಅಭಿಜೀತ್ ದೀಪ್ಕೆ ಅವರನ್ನು ಅಕ್ಟೋಬರ್ 10ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿ ವಶಕ್ಕೆ ಪಡೆಯಲಾಗಿತ್ತು. ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅವರು ಆಗಮಿಸಿದ್ದರು ಎನ್ನಲಾಗಿದೆ.
ಬಳಿಕ ತಲಾ 50,000 ರೂ ಮೊತ್ತದ ಶಾಂತಿ ಕಾಪಾಡುವ ಬಾಂಡ್ ಸಲ್ಲಿಸಿದ ನಂತರ ಅದೇ ದಿನ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ, ಅಕ್ಟೋಬರ್ 14ರಂದು ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜದ ಪ್ರತಿಭಟನೆ ನಡೆಸಲು ಯತ್ನಿಸಿದ ಆರೋಪದ ಮೇಲೆ ದಾಸ್ ಮತ್ತು ರಂಕಾ ಅವರನ್ನು ಮತ್ತೆ ಬಂಧಿಸಲಾಯಿತು. ಬಳಿಕ ಅವರಿಗೆ ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಅಕ್ಟೋಬರ್ 19ರಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಬಂಧನವನ್ನು ಅಕ್ಟೋಬರ್ 21ರವರೆಗೆ ವಿಸ್ತರಿಸಿದ್ದರು. ಬಾಂಡ್ನ ಷರತ್ತುಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿ, ಶಾಂತಿಭಂಗಕ್ಕೆ ಕಾರಣವಾಗುವ ಕೃತ್ಯವನ್ನು ತಕ್ಷಣವೇ ಎಸಗಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ಉಲ್ಲೇಖಿಸಿದ್ದರು. ಇದನ್ನು ಪ್ರಶ್ನಿಸಿ CJP ನಾಯಕರು ಹೈಕೋರ್ಟ್ ಮೊರೆ ಹೋಗಿದ್ದರು.