

ನವದೆಹಲಿ: ದೆಹಲಿಯಲ್ಲಿ ನಡೆಯಲಿರುವ ರಾಮಲೀಲಾ ಕಾರ್ಯಕ್ರಮವೊಂದರಲ್ಲಿ ರಾವಣ, ಮೇಘನಾದ ಮತ್ತು ಕುಂಭಕರ್ಣನ ಪ್ರತಿಕೃತಿಗಳ ಜೊತೆಗೆ 30 ಅಡಿ ಎತ್ತರದ ಜಿರಲೆಯ ಪ್ರತಿಕೃತಿಯನ್ನು ಸುಡಲು ನಿರ್ಧರಿಸಲಾಗಿದೆ. ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ, ಇದನ್ನು 'ಉಚಿತ ಪ್ರಚಾರ' ಎಂದು ಕರೆದು, ಆಯೋಜಕರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸಿಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಕೂಡ ಈ ವಿವಾದದ ಕುರಿತು ಪ್ರತಿಕ್ರಿಯಿಸಿದ್ದು, ಇದನ್ನು ಒಂದು 'ತಮಾಷೆ' ಎಂದು ಬಣ್ಣಿಸಿದ್ದಾರೆ.
ಪಿತಾಂಪುರದಲ್ಲಿ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸುವ 'ಶ್ರೀ ಕೇಶವ್ ರಾಮ್ ಲೀಲಾ ಸಮಿತಿ'ಯು, ಜಿರಲೆಯ ಪ್ರತಿಕೃತಿಯನ್ನು ಅಶುಚಿತ್ವ ಹಾಗೂ ಕೊಳಕಿನ ಸಂಕೇತವಾಗಿ ಬಳಸಲಾಗಿದೆ ಎಂದು ತಿಳಿಸಿದೆ. 'ಸ್ವಚ್ಛ ಭಾರತ್' ಮತ್ತು 'ಸ್ವಚ್ಛ ದೆಹಲಿ' ಅಭಿಯಾನಗಳ ಅಡಿಯಲ್ಲಿ ಸ್ವಚ್ಛತೆಯನ್ನು ಉತ್ತೇಜಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ಸಮಿತಿ ಹೇಳಿದೆ.
ಸಮಿತಿಯ ಅಧ್ಯಕ್ಷರು ಹಾಗೂ ಬಿಜೆಪಿ ಶಾಸಕ ಅಶೋಕ್ ಗೋಯಲ್ ಅವರು, ಈ ನಿರ್ಧಾರವು ರಾಜಕೀಯ ಪ್ರೇರಿತವಲ್ಲ. ಸ್ವಚ್ಛತೆಯ ಮಹತ್ವವನ್ನು ಎತ್ತಿ ತೋರಿಸುವ ಜೊತೆಗೆ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯದ ಸಂದೇಶವನ್ನು ಸಾರುವ ಉದ್ದೇಶದಿಂದ ಇದನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಈ ಗುಂಪು ಆರಂಭದಲ್ಲಿ ಕೇಂದ್ರದ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ಪ್ರತಿಭಟಿಸಿತು ಮತ್ತು ನಂತರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಇದೀಗ ಪ್ರತಿಭಟನೆಗೆ ಮುಂದಾಗಿದೆ.
ಪ್ರಸ್ತಾಪಿತ ಪ್ರತಿಕೃತಿ ದಹನವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಧಾರ್ಮಿಕ ಆಚರಣೆಯೊಂದರಲ್ಲಿ ಇಂತಹ ಪ್ರತಿಕೃತಿಯ ಬಳಕೆ ಎಷ್ಟು ಸೂಕ್ತ ಎಂದು ಕೆಲವರು ಪ್ರಶ್ನಿಸಿದ್ದರೆ, ಹಬ್ಬದ ಸಾಂಪ್ರದಾಯಿಕ ಮಹತ್ವದೊಂದಿಗೆ ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಬೆರೆಸಲಾಗುತ್ತಿದೆ ಎಂದು ಇನ್ನು ಕೆಲವರು ಆರೋಪಿಸಿದ್ದಾರೆ.