ಮುಂಬೈ: ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಚುನಾಯಿತ ಪ್ರತಿನಿಧಿಗಳ ನಡುವೆ ತಮ್ಮ ಬಣಕ್ಕೆ ಹೆಚ್ಚಿನ ಬಲವಿದ್ದ ಮಾತ್ರಕ್ಕೆ ಪಕ್ಷದ ಒಡೆತನ ತಮ್ಮದಾಗುತ್ತದೆ ಎಂದು ಹೇಳಬಹುದೇ ಎಂದು ಅವರು ಪ್ರಶ್ನಿಸಿದರು.
'ಇಂಡಿಯಾ ಟುಡೇ ಕಾನ್‌ಕ್ಲೇವ್ ಮುಂಬೈ 2026'ರಲ್ಲಿ ತಮ್ಮ ಬಣದಲ್ಲಿ ಹೆಚ್ಚಿನ ಸಂಖ್ಯೆಯ ಶಾಸಕರು, ಸಂಸದರು ಮತ್ತು ಕೌನ್ಸಿಲರ್‌ಗಳು ಇರುವುದರಿಂದ 'ಅಸಲಿ ಶಿವಸೇನೆ' ಯಾವುದು ಎಂಬ ವಿವಾದ ಬಗೆಹರಿದಿದೆ ಎಂಬ ಶಿಂಧೆ ಅವರ ಹೇಳಿಕೆಯ ಕುರಿತು ಠಾಕ್ರೆ ಅವರನ್ನು ಪ್ರಶ್ನಿಸಲಾಯಿತು.
'ಇಂದು ಕ್ರಿಕೆಟ್ ಆಡುವಾಗ ನಾನು ನಿಮ್ಮ ಬ್ಯಾಟ್ ಅನ್ನು ಕಸಿದುಕೊಂಡು, ನಿಮಗಿಂತ ಹೆಚ್ಚು ರನ್ ಗಳಿಸಿದರೆ, ಆ ಬ್ಯಾಟ್ ನನ್ನದಾಗುತ್ತದೆಯೇ?' ಎಂದು ಠಾಕ್ರೆ ಪ್ರಶ್ನಿಸಿದರು.
ಕದ್ದ ಬ್ಯಾಟ್‌ನಿಂದ ಆಡುವ ಆಟಗಾರನೂ ರನ್ ಗಳಿಸಲೇಬೇಕಲ್ಲವೇ ಎಂದು 'ಇಂಡಿಯಾ ಟುಡೇ ಟಿವಿ'ಯ ರಾಜ್‌ದೀಪ್ ಸರ್ದೇಸಾಯಿ ಕೇಳಿದಾಗ, 'ನಾನು ಏಕನಾಥ್ ಶಿಂಧೆ ಅವರಿಗೆ ಹೇಳುತ್ತಿರುವುದೂ ಅದನ್ನೇ. ಬನ್ನಿ, ನನ್ನೊಂದಿಗೆ ರನ್ ಗಳಿಸಲು ಪ್ರಯತ್ನಿಸಿ' ಎಂದು ಸವಾಲೆಸೆದರು.
ಶಿವಸೇನೆಯ ಹೆಸರು ಮತ್ತು ಚಿಹ್ನೆಗೆ ಸಂಬಂಧಿಸಿದ ಕಾನೂನು ಹೋರಾಟದ ನಡುವೆಯೇ ಈ ಹೇಳಿಕೆಗಳು ಹೊರಬಂದಿವೆ. ಪಕ್ಷದ ಹೆಸರು ಹಾಗೂ 'ಬಿಲ್ಲು-ಬಾಣ'ದ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡುವ ಕುರಿತು ಚುನಾವಣಾ ಆಯೋಗವು 2023ರ ಫೆಬ್ರುವರಿಯಲ್ಲಿ ಕೈಗೊಂಡಿದ್ದ ನಿರ್ಧಾರದ ವಿರುದ್ಧ ಉದ್ಧವ್ ಠಾಕ್ರೆ ಬಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
'ಪಕ್ಷಾಂತರವನ್ನು ಸಹಿಸಲ್ಲ'
ತಮ್ಮ ಪಕ್ಷವನ್ನು ತೊರೆಯುತ್ತಿರುವ ನಾಯಕರ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಠಾಕ್ರೆ, ಪಕ್ಷಾಂತರ ಮಾಡಿದವರಲ್ಲಿ ಕೆಲವರು ತಮ್ಮ ನಿರ್ಧಾರಗಳನ್ನು ಮರುಪರಿಶೀಲಿಸುತ್ತಿರಬಹುದು. ಚುನಾವಣೆಗಳಲ್ಲಿ ಗೆದ್ದ ನಂತರ ಪಕ್ಷ ಬದಲಾಯಿಸುವ ರಾಜಕಾರಣಿಗಳ ವರ್ತನೆಯಿಂದ ಮತದಾರರು ಬೇಸತ್ತಿದ್ದಾರೆ ಎಂದರು.
'ಬದಲಾವಣೆಯೊಂದು ಸಂಭವಿಸಲಿದೆ; ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಜಿಗಿಯುವ ಇಂತಹ ರಾಜಕೀಯವನ್ನು ಜನರು ಸಹಿಸುವುದಿಲ್ಲ' ಎಂದು ಅವರು ಹೇಳಿದರು.
ತಮ್ಮನ್ನು ಭೇಟಿಯಾದ ಜನರು, ಯಾವುದೇ ರಾಜಕೀಯ ಹಿನ್ನೆಲೆ ಅಥವಾ ಪಕ್ಷಾಂತರದ ಆಸಕ್ತಿ ಇಲ್ಲದ ಅಭ್ಯರ್ಥಿಗಳನ್ನು ಬಯಸುತ್ತಿದ್ದರು. ಮುಂದಿನ ಚುನಾವಣೆಗಳಲ್ಲಿ ರಾಜಕೀಯ ಹಿನ್ನೆಲೆ ಇಲ್ಲದ ಹೆಚ್ಚಿನ ಸಂಖ್ಯೆಯ ಯುವಕರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು.
ಪಕ್ಷಾಂತರಗಳು ಮತ್ತು ಪಕ್ಷದ ಮೇಲಿನ ಹಕ್ಕಿಗಾಗಿ ನಡೆಯುತ್ತಿರುವ ಪೈಪೋಟಿ 2022ರ ಜೂನ್‌ನಲ್ಲಿ ಆರಂಭವಾಯಿತು; ಆಗ ಶಿಂಧೆ ಅವರ ನೇತೃತ್ವದಲ್ಲಿ ನಡೆದ ಬಂಡಾಯವು ಉದ್ಧವ್ ಠಾಕ್ರೆ ಅವರ ಸರ್ಕಾರ ಪತನಗೊಳ್ಳಲು ಕಾರಣವಾಗಿತ್ತು. ನಂತರ ಬಿಜೆಪಿ ಬೆಂಬಲದೊಂದಿಗೆ ಶಿಂಧೆ ಮುಖ್ಯಮಂತ್ರಿಯಾದರು; ಇದು ಶಿವಸೇನೆಯ ನಾಯಕತ್ವ, ಹೆಸರು ಮತ್ತು ಚಿಹ್ನೆಗಾಗಿ ಆ ಎರಡು ಬಣಗಳ ನಡುವೆ ಸಂಘರ್ಷಕ್ಕೆ ನಾಂದಿ ಹಾಡಿತು.