ನವದೆಹಲಿ: ದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ಸಿಇಸಿ (ಮುಖ್ಯ ಚುನಾವಣಾ ಆಯುಕ್ತ) ವಿರೋಧಿ ಪ್ರತಿಭಟನೆ ಹೊಸ ತಿರುವು ಪಡೆದುಕೊಂಡಿದೆ.
ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿನ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಈ ಹೋರಾಟದಲ್ಲಿ, ಯುವ ಪ್ರತಿಭಟನಾಕಾರರು ಪೊಲೀಸರ ಹೈಟೆಕ್ ಕಣ್ಗಾವಲನ್ನು ಮುರಿಯಲು ಅತ್ಯಂತ ವಿಶಿಷ್ಟ ಮತ್ತು ಸೃಜನಶೀಲ ತಂತ್ರಗಳನ್ನು ಬಳಸುತ್ತಿದ್ದಾರೆ.
ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆಯುತ್ತಿರುವ ಈ ಕಣ್ಣಾಮುಚ್ಚಾಲೆಯ ಆಟದಲ್ಲಿ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಪರಿಣತಿ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಚಾಣಾಕ್ಷತನವನ್ನೇ ಪ್ರತಿರೋಧದ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.
ಪ್ರತಿಭಟನಾಕಾರರ ಮುಖ ಗುರುತಿಸಲು ದೆಹಲಿ ಪೊಲೀಸರು ಬಳಸುತ್ತಿರುವ ಫೇಶಿಯಲ್ ರೆಕಗ್ನಿಷನ್ (Facial Recognition) ಕ್ಯಾಮೆರಾಗಳನ್ನು ಗೊಂದಲಕ್ಕೀಡಾಗುವಂತೆ ಮಾಡಲು, ಯುವಕರು ಬ್ಯಾಟ್‌ಮ್ಯಾನ್ ಮಾಸ್ಕ್‌ಗಳನ್ನು ಧರಿಸಿ ರಸ್ತೆಗಿಳಿದಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್ (IYC) ಮುಂಚೂಣಿಗೆ ತಂದ ಈ ಸೂಪರ್‌ಹೀರೋ ಮಾಸ್ಕ್ ಈಗ ಪ್ರತಿಭಟನೆಯ ದೊಡ್ಡ ಸಂಕೇತವಾಗಿದೆ. ಸುಪ್ರೀಂ ಕೋರ್ಟ್ ಕಡೆಗೆ ನಡೆದ "ದೆಹಲಿ ಚಲೋ" ಮೆರವಣಿಗೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ಇಂಡಿಯಾ (INDIA) ಮೈತ್ರಿಕೂಟದ ನಾಯಕರು ಈ ಮಾಸ್ಕ್‌ಗಳೊಂದಿಗೆ ಕಾಣಿಸಿಕೊಂಡಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ದೆಹಲಿಯ ಪ್ರಮುಖ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್‌ಗೆ ಪ್ರತಿಭಟನಾಕಾರರು ಪ್ರವೇಶಿಸದಂತೆ ರಾಜಧಾನಿಯ ಪ್ರಮುಖ ಪ್ರದೇಶಗಳಲ್ಲಿ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಕ್ಕೆ ಪ್ರತಿಯಾಗಿ, ಪ್ರತಿಭಟನಾಕಾರರು ಬೇರೆ ಬೇರೆ ಸ್ಥಳಗಳಲ್ಲಿ ದಿಢೀರ್ ಪ್ರತಿಭಟನೆಗಳನ್ನು ನಡೆಸುವ ಮೂಲಕ ಪೊಲೀಸರನ್ನು ಅಚ್ಚರಿಗೊಳಿಸುತ್ತಿದ್ದಾರೆ.
ವಾರಾಂತ್ಯದಲ್ಲಿ ರಾಜಧಾನಿಯಲ್ಲಿ ನಡೆದ ಪ್ರತಿಭಟನೆಗಳ ವೇಳೆ ಸಾವಿರಾರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದ್ದರೂ, ಯುವ ಪ್ರತಿಭಟನಾಕಾರರು ಹಿಂಜರಿದಿಲ್ಲ. ವಶಕ್ಕೆ ಪಡೆದವರಲ್ಲಿ ಹಲವರನ್ನು ಬಳಿಕ ಬಿಡುಗಡೆ ಮಾಡಲಾಗಿದೆ.
ಪ್ರಧಾನಿ ಮೋದಿ ನೇತೃತ್ವದ ಆಡಳಿತಾರೂಢ ಪಕ್ಷಕ್ಕೆ ಅನುಕೂಲವಾಗುವಂತೆ ಮತದಾರರ ಪಟ್ಟಿಯಲ್ಲಿ ತಿರುಚುವಿಕೆ ಮಾಡಲಾಗಿದೆ ಎಂದು ಆರೋಪಿಸಿ, ಭಾರತದ ಚುನಾವಣಾ ಆಯೋಗದ ಮುಖ್ಯಸ್ಥರು ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಆದರೆ, ಚುನಾವಣಾ ಆಯೋಗ ಈ ಆರೋಪವನ್ನು ನಿರಾಕರಿಸಿದೆ.
ವಶಕ್ಕೆ ಪಡೆದವರ ನೆರವಿಗೆ ಸ್ವಯಂಸೇವಕರ ತಂಡ
36 ವರ್ಷದ ಕಂಟೆಂಟ್ ಕ್ರಿಯೇಟರ್ ಮೇಘನಾದ್ ಎಸ್. ಪ್ರತಿಭಟನೆ ವೇಳೆ ವಶಕ್ಕೆ ಪಡೆದವರಿಗೆ ನೆರವಾಗುವ ವಿಶಿಷ್ಟ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 170 ಸ್ವಯಂಸೇವಕರ ತಂಡದೊಂದಿಗೆ ಅವರು ಸ್ಮಾರ್ಟ್‌ಫೋನ್‌ಗಳ ಸಹಾಯದಿಂದ ಪೊಲೀಸರ ವಾಹನಗಳ ಚಲನವಲನವನ್ನು ಗಮನಿಸುತ್ತಿದ್ದಾರೆ.
ವಶಕ್ಕೆ ಪಡೆದವರನ್ನು ಯಾವ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಸಿಕ್ಕ ತಕ್ಷಣ, ಅದನ್ನು ಡಿಜಿಟಲ್ ಡ್ಯಾಶ್‌ಬೋರ್ಡ್‌ನಲ್ಲಿ ದಾಖಲಿಸಲಾಗುತ್ತದೆ. ಬಳಿಕ ಆ ಮಾಹಿತಿಯ ಆಧಾರದ ಮೇಲೆ ಅವರನ್ನು ಕರೆತರಲು ಸಿದ್ಧರಿರುವ ಸ್ವಯಂಸೇವಕ ಚಾಲಕರನ್ನು ಸಂಪರ್ಕಿಸಲಾಗುತ್ತದೆ.
ವಶಕ್ಕೆ ಪಡೆದವರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬುದು ತಿಳಿದ ತಕ್ಷಣ, ನಮ್ಮ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಸ್ವಯಂಸೇವಕ ಚಾಲಕರು ಯಾರಾದರೂ ಲಭ್ಯವಿದ್ದಾರೆಯೇ ಎಂದು ಕೇಳುತ್ತೇವೆ. ಅವರ ಬಳಿ ಯಾವ ಕಾರಿದೆ, ಅದರಲ್ಲಿ ಆಹಾರ, ನೀರು ಮತ್ತು ಇಂಧನ ಇದೆಯೇ ಎಂಬುದನ್ನೂ ವಿಚಾರಿಸುತ್ತೇವೆ ಎಂದು ಮೇಘನಾದ್ ಎಎಫ್‌ಪಿ ತಿಳಿಸಿದ್ದಾರೆ.
ಎಲ್ಲವನ್ನೂ ಪರಿಶೀಲಿಸಿದ ಬಳಿಕ, ವಶಕ್ಕೆ ಪಡೆದವರಿಗೆ ವೈದ್ಯಕೀಯ ನೆರವಿನ ಅಗತ್ಯವಿದ್ದರೆ ಸಹಾಯ ಮಾಡಲು ನಮ್ಮ ಸಂಪರ್ಕದಲ್ಲಿರುವ ವೈದ್ಯರೊಬ್ಬರನ್ನು ಚಾಲಕರೊಂದಿಗೆ ಕಳುಹಿಸಲು ಪ್ರಯತ್ನಿಸುತ್ತೇವೆ ಎಂದು ವಿವರಿಸಿದ್ದಾರೆ.
ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಜನಪ್ರಿಯ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಅವರು ಮಾತನಾಡಿ, ಗುರುತು ತಪ್ಪಿದ ಪ್ರಕರಣವೊಂದರಿಂದಾಗಿ ಸುದ್ದಿಯಾಗಿದ್ದಾರೆ. ಅವರನ್ನೇ ಹೋಲುವ ಮತ್ತೊಬ್ಬ ಮಹಿಳೆಯನ್ನು ಪೊಲೀಸರು ನೇಹಾ ಎಂದು ಭಾವಿಸಿ ವಶಕ್ಕೆ ಪಡೆದಿದ್ದರು. ಈ ಘಟನೆಯ ಬಳಿಕ ನಿಜವಾದ ನೇಹಾ ಬೋರಾ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಗಾದರು.
29 ವರ್ಷದ ನೇಹಾ, ಭದ್ರತಾ ಸಿಬ್ಬಂದಿಯ ಸುತ್ತುವರಿದ ಪ್ರದೇಶದಿಂದ ತಪ್ಪಿಸಿಕೊಂಡು ಮಧ್ಯ ದೆಹಲಿಯತ್ತ ಧಾವಿಸುವಲ್ಲಿ ಯಶಸ್ವಿಯಾದರು. ಆದರೆ, ಕೊನೆಗೆ ಅವರನ್ನೂ ಪೊಲೀಸರು ವಶಕ್ಕೆ ಪಡೆದರು.
ನಂತರ ತಮ್ಮನ್ನು ಹೋಲುವ ಮಹಿಳೆಯೊಂದಿಗೆ ಇರುವ ಛಾಯಾಚಿತ್ರವನ್ನು ಹಂಚಿಕೊಂಡ ನೇಹಾ, ಇಬ್ಬರ ನಡುವಿನ ಹೋಲಿಕೆ “ಕೇವಲ ಕಾಕತಾಳೀಯವೇ ಹೊರತು, ಪೂರ್ವಯೋಜಿತ ತಂತ್ರವಲ್ಲ” ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದರು.
ನೇಹಾ ಅವರ ಪ್ರಕರಣವೊಂದೇ ಅಲ್ಲ, ಬೀದಿಗಳಲ್ಲಿ ಚುರುಕಾಗಿ ಓಡಾಡುತ್ತಿದ್ದ ಯುವ ಪ್ರತಿಭಟನಾಕಾರರನ್ನು ಹಿಡಿಯಲು ಪೊಲೀಸರು ಪರದಾಡಿದ ದೃಶ್ಯಗಳೂ ಕಂಡುಬಂದಿವೆ.
“ಅವರಿಗೆ ದೊಡ್ಡ ಹೊಟ್ಟೆಗಳಿವೆ, ಅವರಿಂದ ಓಡಲು ಸಾಧ್ಯವಾಗುವುದಿಲ್ಲ. ಕೇವಲ 50 ಮೀಟರ್ ಓಡಿದರೂ ದೊಡ್ಡ ಉಸಿರು ಬಿಡುತ್ತಾರೆಂದು ಪ್ರತಿಭಟನಾಕಾರರೊಬ್ಬರು ಪೊಲೀಸರ ಕುರಿತು ವ್ಯಂಗ್ಯವಾಡಿದ್ದಾರೆ.
ಮತ್ತೊಂದು ದೃಶ್ಯದಲ್ಲಿ, ಪೊಲೀಸರು ಪ್ರತಿಭಟನಾಕಾರರನ್ನು ಬಸ್‌ಗಳಿಗೆ ಎಳೆದುಕೊಂಡು ಹೋಗುತ್ತಿದ್ದಾಗ ಅವರು ಪರಸ್ಪರ ಕೈ ಹಿಡಿದುಕೊಂಡು ಒಬ್ಬರನ್ನೊಬ್ಬರು ಬಿಡಿಸಿಕೊಳ್ಳದಂತೆ ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ಇನ್ನೂ ಕೆಲವರು ಬಸ್‌ನ ಚಾಲಕನ ಆಸನದ ಕಡೆಯಿಂದ ಅಥವಾ ಹಿಂಬದಿಯ ಕಿಟಕಿಯಿಂದ ಹೊರಬರಲು ಪ್ರಯತ್ನಿಸಿದ ದೃಶ್ಯಗಳೂ ವರದಿಯಾಗಿವೆ.
ಬ್ಯಾಟ್‌ಮ್ಯಾನ್ ಮಾಸ್ಕ್, ಮೇಕಪ್ ಮೂಲಕ ಗುರುತು ಮರೆಮಾಚುವ ಯತ್ನ
ಈ ನಡುವೆ ಎಎಫ್‌ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಲವು ಪ್ರತಿಭಟನಾಕಾರರು, ತಮ್ಮ ಗುರುತು ಪತ್ತೆಯಾಗದಂತೆ ತಡೆಯಲು ಬ್ಯಾಟ್‌ಮ್ಯಾನ್ ಮುಖವಾಡಗಳನ್ನು ಧರಿಸಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಬಾಲಿವುಡ್ ನಟಿ ರಿಚಾ ಚಡ್ಡಾ ಅವರು ಕೂಡ ಪೊಲೀಸರ ನಿಗಾ ಮತ್ತು ಮುಖ ಗುರುತಿಸುವ ತಂತ್ರಜ್ಞಾನದಿಂದ ತಪ್ಪಿಸಿಕೊಳ್ಳಲು ಸಲಹೆ ನೀಡಿದ್ದಾರೆ.
ಭಾನುವಾರ ತಮ್ಮ ಮುಖಕ್ಕೆ ಮೇಕಪ್ ಹಚ್ಚಿಕೊಳ್ಳುತ್ತಿರುವ ವಿಡಿಯೊವನ್ನು ಹಂಚಿಕೊಂಡ ಅವರು, ಪ್ರತಿಭಟನಾಕಾರರನ್ನು ಅವರ ಒಪ್ಪಿಗೆಯಿಲ್ಲದೆ ಚಿತ್ರೀಕರಿಸಲಾಗುತ್ತಿರುವುದರಿಂದ ಮೇಕಪ್ ಬಳಸಿ ಕಣ್ಗಾವಲು ಕ್ಯಾಮೆರಾಗಳು ಹಾಗೂ ಮುಖ ಗುರುತಿಸುವ ವ್ಯವಸ್ಥೆಯನ್ನು ತಪ್ಪಿಸಲು ಪ್ರಯತ್ನಿಸಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.
ಇದರಂತೆ ಭಾರೀ ಭದ್ರತೆ, ಬಂಧನಗಳು ಮತ್ತು ನಿರ್ಬಂಧಗಳ ನಡುವೆಯೂ ಪ್ರತಿಭಟನೆ ಮುಂದುವರಿಸಲು ಯುವಕರು ತಂತ್ರಜ್ಞಾನ, ಸ್ವಯಂಸೇವಕರ ಜಾಲ ಮತ್ತು ಹೊಸ ಆಲೋಚನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ದೆಹಲಿಯಲ್ಲಿ ಪೊಲೀಸರ ಕಣ್ಗಾವಲು ಮತ್ತು ಪ್ರತಿಭಟನಾಕಾರರ ಪ್ರತಿರೋಧದ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.