ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು "ಚೋರೋಂ ಕೆ ಸರ್ದಾರ್" (ಕಳ್ಳರ ನಾಯಕ) ಮತ್ತು "ಕಮಾಂಡರ್-ಇನ್-ಥೀಫ್" (ಕಳ್ಳರ ಮುಖ್ಯಸ್ಥ) ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣಾ ನ್ಯಾಯಾಲಯದ ಕಲಾಪಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಮಾನನಷ್ಟ ಮೊಕದ್ದಮೆ ಪ್ರಕ್ರಿಯೆಯನ್ನು ರದ್ದುಗೊಳಿಸಲು ನಿರಾಕರಿಸಿದ್ದ ಬಾಂಬೆ ಹೈಕೋರ್ಟ್‌ನ ಸೆಪ್ಟೆಂಬರ್ 8ರ ಆದೇಶವನ್ನು ಪ್ರಶ್ನಿಸಿ ಗಾಂಧಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ನೋಟಿಸ್ ಜಾರಿ ಮಾಡಿದೆ.
ಈ ನೋಟಿಸ್‌ಗೆ ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡಬೇಕಿದೆ. ಈ ಮಧ್ಯೆ, ವಿಚಾರಣಾ ನ್ಯಾಯಾಲಯದ ಮುಂದಿನ ಕಲಾಪಗಳಿಗೆ ತಡೆ ಇರಲಿದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು 'ಲೈವ್ ಲಾ' ವರದಿ ಮಾಡಿದೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಗಾಂಧಿ ಪರವಾಗಿ ವಾದ ಮಂಡಿಸಿದರು.
ಮಾನನಷ್ಟ ಮೊಕದ್ದಮೆ ಪ್ರಶ್ನಿಸಿ ರಾಹುಲ್ ಅರ್ಜಿ: ಬಿಜೆಪಿ ಕಾರ್ಯಕರ್ತ ಮಹೇಶ್ ಶ್ರೀಶ್ರೀಮಾಲ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಿದ ದೂರಿನಿಂದ ಈ ಪ್ರಕರಣವನ್ನು ದಾಖಲಿಸಲಾಗಿತ್ತು. ಮೋದಿ ವಿರುದ್ಧದ ಹೇಳಿಕೆಗಳು ಬಿಜೆಪಿ ಮತ್ತು ಅದರ ಸದಸ್ಯರ ಘನತೆಗೂ ಧಕ್ಕೆ ತಂದಿವೆ ಎಂದು ದೂರುದಾರರು ಆರೋಪಿಸಿದ ನಂತರ ಮ್ಯಾಜಿಸ್ಟ್ರೇಟ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದ್ದರು.
ಪ್ರಧಾನಿಯನ್ನು "ಚೋರೋಂ ಕೆ ಸರ್ದಾರ್" ಎಂದು ಬಣ್ಣಿಸುವುದು ಪರೋಕ್ಷವಾಗಿ ಬಿಜೆಪಿ ಸದಸ್ಯರನ್ನು ಕಳ್ಳರೆಂದು ಬಿಂಬಿಸುವಂತಿದೆ. ಈ ಹೇಳಿಕೆಗಳು ತಮ್ಮ ಘನತೆಯನ್ನು ಕುಗ್ಗಿಸಿವೆ ಮತ್ತು ಪಕ್ಷದ ಕಾರ್ಯಕರ್ತರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ಅರ್ಹರಾಗಿದ್ದಾರೆ ಎಂದು ಅವರು ವಾದಿಸಿದ್ದರು.
ಬಳಿಕ ರಾಹುಲ್ ಗಾಂಧಿ, ತಮ್ಮ ಟ್ವೀಟ್‌ನಲ್ಲಿ ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷದ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ವಾದಿಸಿ, ಬಾಂಬೆ ಹೈಕೋರ್ಟ್‌ನಲ್ಲಿ ಸಮನ್ಸ್ ಅನ್ನು ಪ್ರಶ್ನಿಸಿದರು. ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸುದೀಪ್ ಪಾಸ್ಬೋಲಾ, ದೂರಿನಲ್ಲಿ ಮಾನಹಾನಿಯಾಗಿದೆ ಎಂದು ಹೇಳಿಕೊಳ್ಳಬಹುದಾದ ಯಾವುದೇ ನಿರ್ದಿಷ್ಟ ಅಥವಾ ಗುರುತಿಸಬಹುದಾದ ಗುಂಪನ್ನು ಉಲ್ಲೇಖಿಸಲಾಗಿಲ್ಲ ಎಂದು ಪ್ರತಿಪಾದಿಸಿದರು.
ಸ್ಪಷ್ಟವಾಗಿ ಬಾಧಿತರಾದ ವ್ಯಕ್ತಿ ಅಥವಾ ಗುಂಪು ಇಲ್ಲದಿರುವಾಗ, ದೂರುದಾರರಿಗೆ ಈ ಪ್ರಕರಣವನ್ನು ಮುಂದುವರಿಸಲು ಅಗತ್ಯವಾದ ಕಾನೂನು ಅರ್ಹತೆ (locus standi) ಇರುವುದಿಲ್ಲ ಎಂದು ಪಾಸ್ಬೋಲಾ ವಾದಿಸಿದರು. ಆ ಹೇಳಿಕೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಅನ್ವಯಿಸುವಂತೆ ಅರ್ಥೈಸಿಕೊಳ್ಳುವುದು ಕ್ರಿಮಿನಲ್ ಮಾನಹಾನಿ ದೂರಿಗೆ ಆಧಾರವಾಗಲು ಸಾಕಾಗುವುದಿಲ್ಲ ಎಂದು ಅವರು ಹೇಳಿದರು.