ನವದೆಹಲಿ: ಅನುಮತಿಯಿಲ್ಲದೆ ಜಂತರ್ ಮಂತರ್ ಪ್ರದೇಶವನ್ನು ಪ್ರವೇಶಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಕ್ಷದ (CJP) ನಾಯಕರಾದ ಆಶುತೋಷ್ ರಂಕಾ, ಸೌರವ್ ದಾಸ್ ಮತ್ತು ಅಜಿಂಕ್ಯ ಶಿಂಧೆ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ. ಇಂದು ಬುಧವಾರ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆಗೆ ನಿಗದಿಪಡಿಸಿದ್ದ ಸ್ಥಳಗಳ ಪಟ್ಟಿಯಿಂದ ಇತ್ತೀಚೆಗೆ ಕೈಬಿಡಲಾಗಿದ್ದ ಜಂತರ್ ಮಂತರ್ನ ಪ್ರತಿಭಟನಾ ಸ್ಥಳಕ್ಕೆ ಬ್ಯಾರಿಕೇಡ್ಗಳನ್ನು ದಾಟಿ ಪ್ರವೇಶಿಸಿದ ಆರೋಪದ ಮೇಲೆ ನಿನ್ನೆ ಮಂಗಳವಾರ ಮುಂಜಾನೆ ಈ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದರು ಎಂದು ಆರೋಪಿಸಲಾಗಿದೆ.
ಅತಿಕ್ರಮಣ, ನಿಷೇಧಾಜ್ಞೆಗಳ ಉಲ್ಲಂಘನೆ, ಶಾಂತಿ ಕಾಪಾಡುವ ಬಾಂಡ್ನ ಉಲ್ಲಂಘನೆ ಹಾಗೂ ಸರ್ಕಾರಿ ನೌಕರರು ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸಿದ ಆರೋಪಗಳು ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ ಈ ಮೂವರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರ ವಿಶೇಷ ನ್ಯಾಯಾಲಯದ (SEM) ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಶನಿವಾರ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಹಿಂದಿನ ಪ್ರತಿಭಟನೆಯ ಸಂದರ್ಭದಲ್ಲಿ ಆಶುತೋಷ್ ರಂಕಾ, ಸೌರವ್ ದಾಸ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಒಂದು ವರ್ಷ ಶಾಂತಿ ಕಾಪಾಡುವುದಾಗಿ ಅವರು ಬಾಂಡ್ಗೆ ಸಹಿ ಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಮೂವರನ್ನು ಬಂಧಿಸಲಾಗಿದ್ದು, ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಸಿಜೆಪಿಯ ಕಾನೂನು ತಂಡದ ಮುಖ್ಯಸ್ಥೆ ರತ್ನಾ ಸಿಂಗ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ನಿನ್ನೆ ನಸುಕಿನ ಜಾವ 3 ಗಂಟೆಗೆ ಖಾಸಗಿ ವ್ಯಾನ್ನಲ್ಲಿ ಮೂವರನ್ನು ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ತಡರಾತ್ರಿಯವರೆಗೂ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿದ್ದಾರೆ.
“ಗಮನಿಸಿ, 24 ಗಂಟೆಗಳ ಅವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳಲಿದೆ” ಎಂದು ಹೇಳಿದ್ದಾರೆ. ಮೂವರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಬಳಿಕ ತಿಹಾರ್ ಜೈಲಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಸಾಧ್ಯತೆಯಿದೆ ಎಂದೂ ತಿಳಿಸಿದ್ದಾರೆ. ಈ ಅಕ್ರಮ ಕ್ರಮಗಳ ನಡುವೆಯೂ ಅವರ ಉತ್ಸಾಹ ಕುಗ್ಗಿಲ್ಲ ಎಂದು ರತ್ನಾ ಸಿಂಗ್ ಹೇಳಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ಸರಣಿ ಪ್ರತಿಭಟನೆಗಳನ್ನು ನಡೆಸುತ್ತಿವೆ. ಈ ಬೆಳವಣಿಗೆಗಳ ನಡುವೆಯೇ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಅಕ್ಟೋಬರ್ 11ರಂದು ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್, ರಾಮಲೀಲಾ ಮೈದಾನ, ಬುರಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳನ್ನು ಪ್ರತಿಭಟನೆ ಹಾಗೂ ಧರಣಿಗಳಿಗೆ ನಿಗದಿಪಡಿಸಿದ ಸ್ಥಳಗಳೆಂದು ಘೋಷಿಸಿ ಆದೇಶ ಹೊರಡಿಸಿದ್ದರು. ಬಳಿಕ ಜಂತರ್ ಮಂತರ್ ನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿತ್ತು.
ಆದರೆ, ಈ ಕ್ರಮವನ್ನು ಸಿಜೆಪಿ ಟೀಕಿಸಿದೆ. ರಾಷ್ಟ್ರ ರಾಜಧಾನಿಯ ರಾಜಕೀಯ ಕೇಂದ್ರದಿಂದ ಪ್ರತಿಭಟನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವುದರಿಂದ ಸಾರ್ವಜನಿಕ ಭಿನ್ನಮತದ ಅಭಿವ್ಯಕ್ತಿಯ ಪ್ರಭಾವ ಕಡಿಮೆಯಾಗಲಿದೆ ಎಂದು ಹೇಳಿದೆ.