ಟೈರ್ ಪಂಕ್ಚರ್ ನೆಪ ಹೇಳಿ ಕ್ಲೈಮ್ ತಿರಸ್ಕರಿಸಿದ್ದ ಇನ್ಶೂರೆನ್ಸ್ ಕಂಪನಿಗೆ ಮುಖಭಂಗ AI Image
ದೇಶ

ಟೈರ್ ಪಂಕ್ಚರ್ ನೆಪ ಹೇಳಿ ಕ್ಲೈಮ್ ತಿರಸ್ಕರಿಸಿದ್ದ ಇನ್ಶೂರೆನ್ಸ್ ಕಂಪನಿಗೆ ಮುಖಭಂಗ: 14 ವರ್ಷದ ಬಳಿಕ BMW ಮಾಲೀಕನಿಗೆ ಸಿಕ್ತು 1.4 ಕೋಟಿ ರೂ.!

ಕೇವಲ ಟೈರ್ ಪಂಕ್ಚರ್ ಆದ ಕಾರಣಕ್ಕೆ ಇನ್ಶೂರೆನ್ಸ್ ಕಂಪನಿಯು ಕ್ಲೈಮ್ ನಿರಾಕರಿಸಿದ್ದರ ವಿರುದ್ಧ ಬಿಎಂಡಬ್ಲ್ಯು ಕಾರು ಮಾಲೀಕರು ನಡೆಸಿದ 14 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಕೊನೆಗೂ ಜಯ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ಕೇವಲ ಟೈರ್ ಪಂಕ್ಚರ್ ಆದ ಕಾರಣಕ್ಕೆ ಇನ್ಶೂರೆನ್ಸ್ ಕಂಪನಿಯು ಕ್ಲೈಮ್ ನಿರಾಕರಿಸಿದ್ದರ ವಿರುದ್ಧ ಬಿಎಂಡಬ್ಲ್ಯು ಕಾರು ಮಾಲೀಕರು ನಡೆಸಿದ 14 ವರ್ಷಗಳ ಸುದೀರ್ಘ ಕಾನೂನು ಹೋರಾಟದಲ್ಲಿ ಕೊನೆಗೂ ಜಯ ಸಿಕ್ಕಿದೆ. ಮಹಾರಾಷ್ಟ್ರದ ಗ್ರಾಹಕ ಆಯೋಗವು ಕಾರಿನ ಮಾಲೀಕರಾದ ರವಿಕಾಂತ್ ಪಾಟೀಲ್ ಅವರಿಗೆ ಕಾರಿನ ಒಟ್ಟು ವಿಮಾ ಮೌಲ್ಯವಾದ ₹70 ಲಕ್ಷವನ್ನು ಪಾವತಿಸುವಂತೆ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗೆ ಆದೇಶಿಸಿದೆ. ಈ ಮೂಲಕ ಬಡ್ಡಿ ಮತ್ತು ಇತರ ಪರಿಹಾರಗಳನ್ನು ಸೇರಿಸಿದರೆ ಮಾಲೀಕರಿಗೆ ಸಿಗಲಿರುವ ಒಟ್ಟು ಮೊತ್ತ ಸುಮಾರು ₹1.4 ಕೋಟಿಗೆ ತಲುಪಲಿದೆ. ಆ ಕುರಿತ ವರದಿ ಇಲ್ಲಿದೆ:

ಅಸಲಿಗೆ ಅಂದು ರಾತ್ರಿ ಆಗಿದ್ದೇನು?

2012ರ ಮಾರ್ಚ್ 8ರಂದು ಕಾರು ಮಾಲೀಕರಾದ ರವಿಕಾಂತ್ ಪಾಟೀಲ್ ಅವರು ತಮ್ಮ ಬಿಎಂಡಬ್ಲ್ಯು ಕಾರಿನಲ್ಲಿ ಮಹಾರಾಷ್ಟ್ರದ ಧುಲ್ಖೇಡ್ ಹೆದ್ದಾರಿ ಬಳಿ ಪ್ರಯಾಣಿಸುತ್ತಿದ್ದಾಗ ತಡರಾತ್ರಿ ಕಾರಿನ ಟೈರ್ ಪಂಕ್ಚರ್ ಆಗಿತ್ತು. ಆ ವೇಳೆ, ನಿರ್ಜನ ಪ್ರದೇಶ ಹಾಗೂ ತಡರಾತ್ರಿಯಾಗಿದ್ದರಿಂದ ಯಾವುದೇ ಮೆಕ್ಯಾನಿಕ್ ಸಿಗಲಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಅವರು ಕಾರನ್ನು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ಪಾರ್ಕ್ ಮಾಡಿ, ಡೋರ್ ಮತ್ತು ವಿಂಡೋಗಳನ್ನು ಸರಿಯಾಗಿ ಲಾಕ್ ಮಾಡಿ, ಮತ್ತೊಂದು ವಾಹನದಲ್ಲಿ ಮನೆಗೆ ಮರಳಿದರು. ಆದರೆ ಮರುದಿನ ಬೆಳಗ್ಗೆ ಅವರು ಗಾಡಿ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದು ನೋಡಿದಾಗ, ಅವರ ಬಿಎಂಡಬ್ಲ್ಯು ಕಾರು ನಿಗೂಢವಾಗಿ ಸಂಪೂರ್ಣ ಸುಟ್ಟು ಕರಕಲಾಗಿತ್ತು.

 ಇನ್ಶೂರೆನ್ಸ್ ಕಂಪನಿ ಕ್ಲೈಮ್ ತಿರಸ್ಕರಿಸಿದ್ದು ಏಕೆ?

ಕಾರು ಮಾಲೀಕರು ವಿಮೆಗಾಗಿ ಅರ್ಜಿ ಸಲ್ಲಿಸಿದಾಗ, ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯು ಕ್ಲೈಮ್ ಅನ್ನು ತಿರಸ್ಕರಿಸಿತು. "ಕಾರನ್ನು ರಸ್ತೆ ಬದಿಯಲ್ಲಿ ಯಾರೂ ಇಲ್ಲದೆ ಹಾಗೇ ಬಿಟ್ಟು ಹೋಗಿರುವುದು ಪಾಲಿಸಿಯ ನಿಯಮಗಳ ಉಲ್ಲಂಘನೆಯಾಗಿದೆ. ಮುಂದಾಗಬಹುದಾದ ನಷ್ಟವನ್ನು ತಡೆಯಲು ಮಾಲೀಕರು ಸೂಕ್ತ ಎಚ್ಚರಿಕೆ ವಹಿಸಿಲ್ಲ" ಎಂದು ಕಂಪನಿ ವಾದಿಸಿತು.

ಗ್ರಾಹಕ ನ್ಯಾಯಾಲಯ ಹೇಳಿದ್ದೇನು?

ಇದರ ವಿರುದ್ಧ ರವಿಕಾಂತ್ ಪಾಟೀಲ್ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದರು. 14 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಆಯೋಗವು ಇನ್ಶೂರೆನ್ಸ್ ಕಂಪನಿಗೆ ತಪರಾಕಿ ನೀಡಿ, ತಡರಾತ್ರಿಯಲ್ಲಿ ಹೆದ್ದಾರಿಯಲ್ಲಿ ವಾಹನ ಕೆಟ್ಟು ನಿಂತಾಗ ವಾಹನವನ್ನು ಕಾಯುವುದಕ್ಕಿಂತ, ಮಾಲೀಕರ ಹಾಗೂ ಚಾಲಕನ ವೈಯಕ್ತಿಕ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಕೇವಲ ಕಾರನ್ನು ಕಾಯಲು ನಿರ್ಜನ ಪ್ರದೇಶದಲ್ಲಿ ಜೀವವನ್ನು ಅಪಾಯಕ್ಕೆ ಸಿಲುಕಿಸಲು ಸಾಧ್ಯವಿಲ್ಲ. ಜೊತೆಗೆ, ಮಾಲೀಕರು ಕಾರನ್ನು ರಸ್ತೆ ಬದಿ ಪಾರ್ಕ್ ಮಾಡಿ, ಲಾಕ್ ಮಾಡಿ ಹೋಗಿದ್ದರಿಂದ ಅವರು ತಮ್ಮ ಮಟ್ಟಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದರು. ಕಾರನ್ನು ಹಾಗೇ ಬಿಟ್ಟು ಹೋದದ್ದಕ್ಕೂ, ಕಾರಿಗೆ ಬೆಂಕಿ ಬಿದ್ದದ್ದಕ್ಕೂ ನೇರ ಸಂಬಂಧವಿದೆ ಎಂದು ಕಂಪನಿ ಸಾಬೀತುಪಡಿಸಿಲ್ಲ.

ಹಾಗಾಗಿ, ನ್ಯಾಯಾಲಯವು ವಿಮಾ ಕಂಪನಿಯ ನಡೆ ತಪ್ಪು ಎಂದು ತೀರ್ಪು ನೀಡಿ, ಮಾಲೀಕರಿಗೆ ಭರ್ಜರಿ ಪರಿಹಾರ ಘೋಷಿಸಿದೆ. ಅದರಂತೆ, ಕಾರಿನ IDV ಮೊತ್ತ: ₹70,00,000, ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಿ ₹50,000 ಹಾಗೂ ಕಾನೂನು ಹೋರಾಟದ ವೆಚ್ಚವಾಗಿ ₹25,000 ಇದರೊಂದಿಗೆ ಕ್ಲೈಮ್ ತಿರಸ್ಕರಿಸಿದ ದಿನಾಂಕದಿಂದ (23 ನವೆಂಬರ್ 2012) ಅನ್ವಯವಾಗುವಂತೆ ವಾರ್ಷಿಕ ಶೇ. 7 ರಷ್ಟು ಬಡ್ಡಿ ನೀಡಲು ಆದೇಶಿಸಲಾಗಿದೆ. ಅದರಲ್ಲೂ, 14 ವರ್ಷಗಳ ಈ ಬಡ್ಡಿಯೇ ಸರಿಸುಮಾರು ₹68 ಲಕ್ಷದಷ್ಟಾಗಲಿದ್ದು, ಈ ಮೂಲಕ ಒಟ್ಟು ಮೊತ್ತ ₹1.4 ಕೋಟಿಯ ಹತ್ತಿರವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video