ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ ಕೋಲ್ಕತ್ತಾದ ದುರ್ಗಾ ಪೂಜಾ ಪೆಂಡಾಲ್ ಒಂದರಲ್ಲಿ ಶನಿವಾರ ಘೋರ ದುರಂತ ಸಂಭವಿಸಿದ್ದು, ನೂಕುನುಗ್ಗಲಿನಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ ಮತ್ತು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿ ಮನೋಜ್ ಅಗರ್ವಾಲ್ ಅವರು ಪರಿಸ್ಥಿತಿಯನ್ನು ಅವಲೋಕಿಸಲು ಕೋಲ್ಕತ್ತಾ ವೈದ್ಯಕೀಯ ಕಾಲೇಜಿಗೆ(Calcutta Medical College) ಆಗಮಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಯು 'ಚೋರ್ ಬಗಾನ್ ಸಾರ್ವಜನಿಕ ಪೂಜಾ' ಪೆಂಡಾಲ್ನಲ್ಲಿ ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
"ಚೋರ್ ಬಗಾನ್ ಪೂಜಾ ಪೆಂಡಾಲ್ನಲ್ಲಿ ನಡೆದ ನೂಕುನುಗ್ಗಲಿನ ಘಟನೆಯ ಬಗ್ಗೆ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಎಂದು ನಾನು ತಾಯಿ ದುರ್ಗೆಯನ್ನು ಪ್ರಾರ್ಥಿಸುತ್ತೇನೆ" ಎಂದು ಮಮತಾ ಬ್ಯಾನರ್ಜಿ ಅವರು 'ಎಕ್ಸ್' (X) ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ಸಂಸ್ಥೆ 'ಎಎನ್ಐ' (ANI) ಗೆ ತಿಳಿಸಿದ ಪ್ರಕಾರ, ಈ ನೂಕುನುಗ್ಗಲಿನ ಸಂದರ್ಭದಲ್ಲಿ ಅನೇಕರು ಪ್ರಜ್ಞೆ ತಪ್ಪಿದರು. ಗಾಯಗೊಂಡ ಅನೇಕರನ್ನು ಮೋಟಾರ್ಸೈಕಲ್ಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಹೇಳಿದ್ದಾರೆ.