ನವದೆಹಲಿ: ಬಿಜೆಪಿ ಹಿರಿಯ ನಾಯಕ ಹಾಗೂ ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಉಸಿರಾಟದ ಸಮಸ್ಯೆಯಿಂದಾಗಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ಸಂಜೆ ಸುಮಾರು 7.30ಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶ್ವಾಸಕೋಶ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 98 ವರ್ಷದ ಅಡ್ವಾಣಿ ಅವರ ಆರೋಗ್ಯದ ಮೇಲೆ ವೈದ್ಯರ ತಂಡ ನಿಗಾ ಇರಿಸಿದ್ದು, ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು, ಈ ವರ್ಷದ ಮೇ ತಿಂಗಳಲ್ಲಿಯೂ ವಯೋಸಹಜ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಅಡ್ವಾಣಿ ಆಸ್ಪತ್ರೆಗೆ ದಾಖಲಾಗಿದ್ದರು.
ಕೆಲ ದಿನಗಳ ಚಿಕಿತ್ಸೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶ ಸೋಂಕಿನ ಹಿನ್ನೆಲೆಯಲ್ಲಿ ಮತ್ತೆ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಲಾಲ್ ಕೃಷ್ಣ ಅಡ್ವಾಣಿ ಅವರು ಆಧುನಿಕ ಬಿಜೆಪಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕರಲ್ಲಿ ಒಬ್ಬರು. ಮೂರು ಅವಧಿಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅವರು, 1986ರಿಂದ 1990ರವರೆಗೆ, 1993ರಿಂದ 1998ರವರೆಗೆ ಹಾಗೂ 2004ರಿಂದ 2005ರವರೆಗೆ ಪಕ್ಷದ ನೇತೃತ್ವ ವಹಿಸಿದ್ದರು.
1990ರ ಸೆಪ್ಟೆಂಬರ್ 25ರಂದು ಗುಜರಾತ್ನ ಸೋಮನಾಥದಿಂದ ಅಡ್ವಾಣಿ ಅವರು ರಾಮ ರಥಯಾತ್ರೆ ಆರಂಭಿಸಿದ್ದರು. ರಾಮ ಮಂದಿರ ಚಳವಳಿಯನ್ನು ರಾಷ್ಟ್ರೀಯ ರಾಜಕೀಯದ ಪ್ರಮುಖ ವಿಷಯವನ್ನಾಗಿ ರೂಪಿಸುವಲ್ಲಿ ಈ ಯಾತ್ರೆ ಮಹತ್ವದ ಪಾತ್ರ ವಹಿಸಿತ್ತು. ಆದರೆ, ಅದೇ ವರ್ಷದ ಅಕ್ಟೋಬರ್ 23ರಂದು ಬಿಹಾರದ ಸಮಸ್ತಿಪುರದಲ್ಲಿ ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಯಾತ್ರೆ ಸ್ಥಗಿತಗೊಂಡಿತ್ತು.
1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳ ಬಳಿಕ ವಿಶೇಷ ಸಿಬಿಐ ನ್ಯಾಯಾಲಯವು ಅಡ್ವಾಣಿ ಸೇರಿದಂತೆ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಅಡ್ವಾಣಿ ಅವರು 1998ರಿಂದ 2004ರವರೆಗೆ ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2002ರಿಂದ 2004ರವರೆಗೆ ಭಾರತದ ಉಪಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಗೃಹ ಸಚಿವರ ಅವಧಿಯಲ್ಲಿ 1999ರ ಕಾರ್ಗಿಲ್ ಸಂಘರ್ಷ ಹಾಗೂ 2001ರಲ್ಲಿ ಸಂಸತ್ ಭವನದ ಮೇಲಿನ ಭಯೋತ್ಪಾದಕ ದಾಳಿ ನಡೆದಿದ್ದವು.
ಇದಕ್ಕೂ ಮುನ್ನ, 1977ರಿಂದ 1979ರವರೆಗೆ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿಯೂ ಅಡ್ವಾಣಿ ಕಾರ್ಯನಿರ್ವಹಿಸಿದ್ದರು.
ದೇಶದ ರಾಜಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, 2024ರಲ್ಲಿ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.