ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಬಿಡುಗಡೆ ಮಾಡಲಾಗಿದ್ದು, ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಇನ್ನೂ ಪೊಲೀಸ್ ಕಸ್ಟಡಿಯಲ್ಲೇ ಇದ್ದು, ಅವರನ್ನು ಶನಿವಾರ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.
ಅಕ್ಟೋಬರ್ 16ರ ಶುಕ್ರವಾರ ಸಂಜೆ, ದೆಹಲಿಯಲ್ಲಿ ಸಿಜೆಪಿ ಆಯೋಜಿಸಲು ಉದ್ದೇಶಿಸಿದ್ದ ‘ಲೆಹರಾ ದೋ ತಿರಂಗಾ’ ಪ್ರತಿಭಟನಾ ಮೆರವಣಿಗೆಗೂ ಮುನ್ನ ಈ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಿರೋಧಿಸಿ ಸಿಜೆಪಿ ಹಾಗೂ ವಿದ್ಯಾರ್ಥಿ ಸಂಘಟನೆಗಳು ಈ ಪ್ರತಿಭಟನೆ ಆಯೋಜಿಸಿದ್ದವು.
ದೀಪ್ಕೆ ಅವರನ್ನು ಝಂಡೇವಾಲನ್ ಬಳಿ ತಡೆದು ವಶಕ್ಕೆ ಪಡೆಯಲಾಗಿತ್ತು. ಇತ್ತ, ಪ್ರತಿಭಟನಾ ಸ್ಥಳವಾದ ಕನ್ನಾಟ್ ಪ್ಲೇಸ್ಗೆ ತೆರಳುತ್ತಿದ್ದ ನೆಹಾ ಬೋರಾ ಅವರನ್ನು ಮಂಡಿ ಹೌಸ್ನಲ್ಲಿ ವಶಕ್ಕೆ ಪಡೆಯಲಾಗಿತ್ತು. ಸಂಭಾವ್ಯ ಶಾಂತಿಭಂಗವನ್ನು ತಡೆಯುವ ಉದ್ದೇಶದಿಂದ ಇಬ್ಬರನ್ನೂ ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಬಂಧನಕ್ಕೆ ಸಂಬಂಧಿಸಿದ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ನೆಹಾ ಬೋರಾ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಅಭಿಜೀತ್ ದೀಪ್ಕೆ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170ರ ಅಡಿಯಲ್ಲಿ ದೆಹಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮುಂದಿನ ವಿಚಾರಣೆಗಾಗಿ ಅವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಇಂದು ಹಾಜರುಪಡಿಸುವ ನಿರೀಕ್ಷೆಯಿದೆ.
ಈ ಬಂಧನಗಳು ರಾಜಕೀಯ ಮತ್ತು ಕಾನೂನು ವಿವಾದಕ್ಕೆ ಕಾರಣವಾಗಿವೆ. ಕಾರ್ಯಕರ್ತರನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬುದರ ಕುರಿತು ಸಿಜೆಪಿ ಮತ್ತು ಎಐಎಸ್ಎ ಸಂಘಟನೆಗಳು ಪೊಲೀಸರನ್ನು ಪ್ರಶ್ನಿಸಿವೆ.
ಬಂಧನಕ್ಕೊಳಗಾದ ಇಬ್ಬರನ್ನು ಪೊಲೀಸರು ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದಾರೆ ಹಾಗೂ ಆರಂಭದಲ್ಲಿ ಕಾನೂನು ಸಲಹೆ ಪಡೆಯಲು ಅವಕಾಶ ನಿರಾಕರಿಸಿದ್ದಾರೆ ಎಂದು ಸಂಘಟನೆಗಳು ಆರೋಪಿಸಿವೆ.
ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಕೂಡ ಈ ಬಂಧನಗಳನ್ನು ಖಂಡಿಸಿದ್ದು, ಅವುಗಳನ್ನು “ಸ್ಪಷ್ಟವಾಗಿ ಕಾನೂನುಬಾಹಿರ” ಎಂದು ಬಣ್ಣಿಸಿದ್ದಾರೆ.
ರಾಜಕೀಯ ಪ್ರತಿಭಟನೆಗಳಿಗೂ ಮುನ್ನ ಮುಂಜಾಗ್ರತಾ ಬಂಧನಗಳನ್ನು ನಿರ್ವಹಿಸುವ ದೆಹಲಿ ಪೊಲೀಸರ ಕ್ರಮದ ಕುರಿತು ಟೀಕೆಗಳು ತೀವ್ರಗೊಂಡಿವೆ.
ಸೂಕ್ತ ಕಾನೂನು ಪ್ರಕ್ರಿಯೆ ಪಾಲನೆ ಹಾಗೂ ಪ್ರತಿಭಟನೆ ನಡೆಸುವ ಹಕ್ಕಿನ ಕುರಿತು ಪ್ರತಿಪಕ್ಷ ನಾಯಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.