ಧಾರಾಶಿವ್ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಸರ್ಕಾರ ಘೋಷಿಸಿರುವ ಮಧ್ಯಂತರ ಬರ ಪರಿಹಾರದ ಮೊತ್ತ ತೀರಾ ಕಡಿಮೆ ಎಂದು ಅಸಮಾಧಾನಗೊಂಡ ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಸೂರಡಿ ಗ್ರಾಮದ ಸೋಯಾಬೀನ್ ಬೆಳೆಗಾರ ಚಾಂದ್ ಶೇಖ್, ಸ್ನೇಹಿತನಿಂದ ಸಾಲ ಪಡೆದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ₹5,000 ಹಣವನ್ನು ಮನಿ ಆರ್ಡರ್ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
₹25,000 ಖರ್ಚು, ₹3,900 ಆದಾಯ
ಮಹಾರಾಷ್ಟ್ರದ ಶೇ. 85 ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ ಬೆನ್ನಲ್ಲೇ, ದೀಪಾವಳಿ ಹಬ್ಬದ ಮುನ್ನ ರೈತರ ಬ್ಯಾಂಕ್ ಖಾತೆಗಳಿಗೆ ₹5,000 ಮಧ್ಯಂತರ ಪರಿಹಾರ ಜಮಾ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದರು. ಈ ಮೊತ್ತ ತೀರಾ ಅತ್ಯಲ್ಪ ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ, ರೈತ ಚಾಂದ್ ಶೇಖ್ ಅವರು ತಮ್ಮ 1.5 ಎಕರೆ ಜಮೀನಿನಲ್ಲಿ ಸೋಯಾಬೀನ್ ಬೆಳೆಯಲು ಬರೋಬ್ಬರಿ ₹25,000 ಖರ್ಚು ಮಾಡಿದ್ದರು. ಆದರೆ ತೀವ್ರ ಬರದ ಕಾರಣ ಕೇವಲ 60 ಕೆಜಿ ಇಳುವರಿ ಬಂದಿದ್ದು, ಅದರಿಂದ ಅವರಿಗೆ ಸಿಕ್ಕ ಆದಾಯ ಕೇವಲ ₹3,900 ಮಾತ್ರ!
ಹಾಗಾಗಿ, ಸರ್ಕಾರ ನೀಡಿದ ₹5,000 ಪರಿಹಾರವು ತಮಗಾದ ನಷ್ಟಕ್ಕೆ ಹೋಲಿಸಿದರೆ ಅತ್ಯಲ್ಪ ಎಂದು ಭಾವಿಸಿದ ಅವರು, ಸಿಎಂ ಕೊಟ್ಟಷ್ಟೇ ಮೊತ್ತವನ್ನು ಮರಳಿ ಕಳುಹಿಸಲು ನಿರ್ಧರಿಸಿದರು. ಇದಕ್ಕಾಗಿ ತಮ್ಮಲ್ಲಿದ್ದ ₹3,900 ಹಣದ ಜೊತೆಗೆ ಸ್ನೇಹಿತನಿಂದ ₹1,100 ಸಾಲ ಪಡೆದು ಒಟ್ಟು ₹5,000 ಹಣವನ್ನು ಮುಖ್ಯಮಂತ್ರಿಯವರಿಗೇ ಮನಿ ಆರ್ಡರ್ ಮಾಡಿದ್ದಾರೆ. ಈ ವೇಳೆ, ನಾವು ಇಷ್ಟೊಂದು ನಷ್ಟ ಅನುಭವಿಸುತ್ತಿದ್ದರೂ ಸರ್ಕಾರ ನೀಡುತ್ತಿರುವ ಈ ಅಲ್ಪ ಮೊತ್ತದ ನೆರವು ನಮಗೆ ಮಾಡುವ ಅಪಹಾಸ್ಯದಂತಿದೆ ಎಂದು ಚಾಂದ್ ಶೇಖ್ ತಿಳಿಸಿದ್ದಾರೆ.
ಮತ್ತೊಂದೆಡೆ, ರಾಜ್ಯದ ಒಟ್ಟು 358 ಉಪವಿಭಾಗಗಳಲ್ಲಿ 305 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಕೇಂದ್ರ ಸರ್ಕಾರದ ಸಂಪೂರ್ಣ ಆಡಳಿತಾತ್ಮಕ ಪರಿಶೀಲನೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆ ಮುಗಿಯಲು ಸಮಯ ಹಿಡಿಯುವುದರಿಂದ, ಹಬ್ಬಕ್ಕೆ ಮುಂಚಿತವಾಗಿ ತಕ್ಷಣದ ಆರ್ಥಿಕ ನೆರವು ನೀಡಲು ಈ 5,000 ರೂ. ಮೊತ್ತವನ್ನು ನಿರ್ಧರಿಸಲಾಗಿತ್ತು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದರು.