ಲಖನೌ: ದಸರಾ ಹಬ್ಬದ ಮುನ್ನಾದಿನವಾದ ಭಾನುವಾರ ಉತ್ತರ ಪ್ರದೇಶ ರಾಜಧಾನಿ ಲಖನೌನ ಹಲವು ಕಡೆಗಳಲ್ಲಿ ಹತ್ತು ತಲೆಯ ರಾವಣನ ವಿವಾದಾತ್ಮಕ ಪೋಸ್ಟರ್ಗಳನ್ನು ಹಾಕಲಾಗಿದೆ.
ರಾವಣನ ಹತ್ತು ತಲೆಗಳಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅಮೆರಿಕದ ಉದ್ಯಮಿ ಎಲೋನ್ ಮಸ್ಕ್ ಮತ್ತು ಇತರರ ಫೋಟೋ ಇರುವ ಹೋರ್ಡಿಂಗ್ಗಳನ್ನು ನಗರದಲ್ಲಿ ಹಲವು ಕಡೆಗಳಲ್ಲಿ ಅಳವಡಿಸಲಾಗಿದೆ.
'ಸನಾತನ ರಕ್ಷಾ ಸಂಘಟನೆ'ಯಿಂದ ಅಳವಡಿಸಲಾದ ಈ ಹೋರ್ಡಿಂಗ್ಗಳಲ್ಲಿ ‘ರಾವಣ–ಸನಾತನ ಭಾರತದ ಶತ್ರುಗಳು’ ಎಂಬ ಶೀರ್ಷಿಕೆ ಇದೆ.
ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಅವರಲ್ಲದೆ, ಈ ಫಲಕಗಳಲ್ಲಿ ಗ್ಯಾಂಗ್ಸ್ಟರ್ ಅತಿಕ್ ಅಹ್ಮದ್, ಉದ್ಯಮಿ ಎಲಾನ್ ಮಸ್ಕ್, ಅಮೆರಿಕದ ಸಂಸದೆ ಇಲ್ಹಾನ್ ಒಮರ್, ಬಾಂಗ್ಲಾದೇಶದ ನಾಯಕ ಮುಹಮ್ಮದ್ ಯೂನುಸ್, ಹೂಡಿಕೆದಾರ ಜಾರ್ಜ್ ಸೊರೊಸ್, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತು ಮತ್ತೊಬ್ಬ ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ ಸೇರಿದಂತೆ ಇತರೆ ವ್ಯಕ್ತಿಗಳ ಚಿತ್ರಗಳಿವೆ.
ಈ ವ್ಯಕ್ತಿಗಳೆಲ್ಲರೂ ಭಾರತದ ವಿರುದ್ಧದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ದೇಶದ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಸಂಘಟನೆಯು ಪೋಸ್ಟರ್ ಮೂಲಕ ಗಂಭೀರ ಆರೋಪ ಮಾಡಿದೆ.