ಎಸ್ ಸಿಒ ಸಭೆಯಲ್ಲಿ ರಾಜನಾಥ್ ಸಿಂಗ್ ಮಾತು  
ದೇಶ

‘ಭಯೋತ್ಪಾದನೆ ವಿಚಾರದಲ್ಲಿ ದ್ವಂದ್ವ ನೀತಿ ಬೇಡ’: ಪಾಕ್ ಉಪ ಪ್ರಧಾನಿ ಎದುರೇ SCO ಸಭೆಯಲ್ಲಿ ರಾಜನಾಥ್ ಸಿಂಗ್ ಖಡಕ್ ಮಾತು; Video

ಭಯೋತ್ಪಾದನೆಯು ಅಮಾಯಕ ಜೀವಗಳನ್ನು ಬಲಿಪಡೆಯುವುದಷ್ಟೇ ಅಲ್ಲದೆ, ದೇಶದಲ್ಲಿ ಹೊರಗಿನಿಂದ ಹೂಡಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೂ ಅಡ್ಡಿಪಡಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ದುಶಾಂಬೆ: ಭಯೋತ್ಪಾದನೆಯು ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ ಎದುರಾಗಿರುವ ಅತ್ಯಂತ ಗಂಭೀರ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿದ್ದಾರೆ. ತಜಿಕಿಸ್ತಾನದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (SCO) ಸರ್ಕಾರದ ಮುಖ್ಯಸ್ಥರ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು.

ಭಯೋತ್ಪಾದನೆಯ ವಿರುದ್ಧ ರಾಜನಾಥ್ ಸಿಂಗ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಉಪ ಪ್ರಧಾನಿ ಇಶಾಕ್ ದಾರ್ ಕೂಡ ಸಭೆಯಲ್ಲಿ ಉಪಸ್ಥಿತಿ ವಿಶೇಷವಾಗಿತ್ತು.

ಭಯೋತ್ಪಾದನೆಯು ಅಮಾಯಕ ಜೀವಗಳನ್ನು ಬಲಿಪಡೆಯುವುದಷ್ಟೇ ಅಲ್ಲದೆ, ದೇಶದಲ್ಲಿ ಹೊರಗಿನಿಂದ ಹೂಡಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೂ ಅಡ್ಡಿಪಡಿಸುತ್ತದೆ. ಇದು ಸಮಾಜದಲ್ಲಿ ತೀವ್ರವಾದಿ ಮನೋಭಾವವನ್ನು ಬೆಳೆಸುವುದರ ಜೊತೆಗೆ, ನಮ್ಮ ಯುವಜನರು ಪಡೆಯಬೇಕಾದ ಅವಕಾಶಗಳಿಂದ ಅವರನ್ನು ವಂಚಿತಗೊಳಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ, ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ದ್ವಂದ್ವ ನೀತಿ ಇರಬಾರದು. ಭಯೋತ್ಪಾದಕರಿಗೆ ಹಣಕಾಸು ಒದಗಿಸುವವರು, ಬೆಂಬಲ ನೀಡುವವರು ಅಥವಾ ಅವರಿಗೆ ಸುರಕ್ಷಿತ ಆಶ್ರಯ ಕಲ್ಪಿಸುವವರಿಗೆ ಯಾವುದೇ ಅವಕಾಶ ನೀಡಬಾರದು. ಭಯೋತ್ಪಾದನೆಯ ಸಂಪೂರ್ಣ ಜಾಲವನ್ನು ದೃಢವಾಗಿ ಮತ್ತು ಸಾಮೂಹಿಕವಾಗಿ ನಾಶಪಡಿಸಬೇಕು ಎಂದು ಹೇಳಿದರು.

ತಜಿಕಿಸ್ತಾನ ಮತ್ತು ಇರಾನ್ ನಾಯಕರೊಂದಿಗೆ ರಾಜನಾಥ್ ಸಿಂಗ್ ಮಾತುಕತೆ

ದುಶಾಂಬೆಯಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಸರ್ಕಾರದ ಮುಖ್ಯಸ್ಥರ ಸಭೆಯ ನೇಪಥ್ಯದಲ್ಲಿ ರಾಜನಾಥ್ ಸಿಂಗ್ ಅವರು ತಜಿಕಿಸ್ತಾನದ ಪ್ರಧಾನಿ ಕೋಹಿರ್ ರಸುಲ್ಜೋದಾ ಮತ್ತು ಇರಾನ್‌ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಆರಿಫ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ತಜಿಕಿಸ್ತಾನದ ಪ್ರಧಾನಿಯೊಂದಿಗಿನ ಭೇಟಿಯ ಕುರಿತು ಮಾಹಿತಿ ಹಂಚಿಕೊಂಡ ರಾಜನಾಥ್ ಸಿಂಗ್, ಭಾರತ ಮತ್ತು ತಜಿಕಿಸ್ತಾನ ನಡುವಿನ ದೀರ್ಘಕಾಲದ ನಾಗರಿಕತೆಯ ಸಂಬಂಧಗಳು ಹಾಗೂ ಜನರ ನಡುವಿನ ಆಳವಾದ ಬಾಂಧವ್ಯವನ್ನು ಪ್ರಸ್ತಾಪಿಸಿದ್ದಾಗಿ ತಿಳಿಸಿದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಕ್ಷಣಾ ಸಚಿವರು, “ದುಶಾಂಬೆಯಲ್ಲಿ ಎಸ್‌ಸಿಒ ಸರ್ಕಾರದ ಮುಖ್ಯಸ್ಥರ ಸಭೆ ಆರಂಭವಾಗುವ ಸಂದರ್ಭದಲ್ಲಿ ತಜಿಕಿಸ್ತಾನದ ಪ್ರಧಾನಿ ಗೌರವಾನ್ವಿತ ಕೋಹಿರ್ ರಸುಲ್ಜೋದಾ ಅವರನ್ನು ಭೇಟಿಯಾಗಿದ್ದು ಸಂತೋಷ ತಂದಿದೆ. ಭಾರತ ಮತ್ತು ತಜಿಕಿಸ್ತಾನ ನಡುವಿನ ದೀರ್ಘಕಾಲದ ನಾಗರಿಕತೆಯ ಸಂಬಂಧಗಳು ಹಾಗೂ ಜನರ ನಡುವಿನ ಆಳವಾದ ಬಾಂಧವ್ಯವನ್ನು ಒತ್ತಿಹೇಳಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ ಇರಾನ್‌ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಆರಿಫ್ ಅವರೊಂದಿಗಿನ ಭೇಟಿಯ ಕುರಿತು ಮಾಹಿತಿ ಹಂಚಿಕೊಂಡ ಅವರು, ದುಶಾಂಬೆಯಲ್ಲಿ ನಡೆದ ಎಸ್‌ಸಿಒ ಸರ್ಕಾರದ ಮುಖ್ಯಸ್ಥರ ಸಭೆಯ ನೇಪಥ್ಯದಲ್ಲಿ ಇರಾನ್‌ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಆರಿಫ್ ಅವರನ್ನು ಭೇಟಿಯಾಗಿದ್ದು ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.

ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿರುವ ಎಸ್‌ಸಿಒ ಸರ್ಕಾರದ ಮುಖ್ಯಸ್ಥರ ಸಭೆಯಲ್ಲಿ ಭಾರತವನ್ನು ರಾಜನಾಥ್ ಸಿಂಗ್ ಪ್ರತಿನಿಧಿಸುತ್ತಿದ್ದಾರೆ. ಪ್ರಾದೇಶಿಕ ಸಂಘಟನೆಯ ಸದಸ್ಯ ರಾಷ್ಟ್ರಗಳ ನಾಯಕರು ಮತ್ತು ಪ್ರತಿನಿಧಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಸಭೆಗೆ ಮುನ್ನ ತಜಿಕಿಸ್ತಾನದ ಅಧ್ಯಕ್ಷ ಇಮೋಮಲಿ ರಹಮೋನ್ ಅವರು ದುಶಾಂಬೆಯ ಪ್ಯಾಲೇಸ್ ಆಫ್ ದಿ ನೇಷನ್‌ನಲ್ಲಿ ರಾಜನಾಥ್ ಸಿಂಗ್ ಮತ್ತು ಇತರ ಎಸ್‌ಸಿಒ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಸ್ವಾಗತಿಸಿದರು.

ರಕ್ಷಣಾ ಸಚಿವಾಲಯದ ಪ್ರಕಾರ, ಈ ಸಭೆಯಲ್ಲಿ ಸಂಸ್ಕೃತಿ, ಸಂಪರ್ಕ ವ್ಯವಸ್ಥೆ, ಆರ್ಥಿಕತೆ, ನಾವೀನ್ಯತೆ, ಹೂಡಿಕೆ ಮತ್ತು ಜನರ ನಡುವಿನ ಬಾಂಧವ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚಿಸಲಾಗುತ್ತದೆ. ಸಂಘಟನೆಯ ಹಣಕಾಸು ಮತ್ತು ಸಾಂಸ್ಥಿಕ ಕಾರ್ಯನಿರ್ವಹಣೆಯಲ್ಲಿನ ಪ್ರಗತಿಯನ್ನೂ ಪರಿಶೀಲಿಸಲಾಗುತ್ತದೆ.

ವಿವಿಧ ಕಾರ್ಯವಿಧಾನಗಳಲ್ಲಿ ಭಾರತ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಪ್ರಸ್ತಾಪಿಸಿದ ಸಚಿವಾಲಯ, ಸ್ಟಾರ್ಟ್‌ಅಪ್‌ಗಳು, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸಾಂಸ್ಕೃತಿಕ ವಿನಿಮಯದ ಮೂಲಕ ಭಾರತ ನಿರಂತರ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದೆ. ಈ ಉಪಕ್ರಮಗಳು ಸದಸ್ಯ ರಾಷ್ಟ್ರಗಳ ನಡುವೆ ಪ್ರಾಯೋಗಿಕ ಹಾಗೂ ಪರಸ್ಪರ ಪ್ರಯೋಜನಕಾರಿಯಾದ ಸಹಕಾರವನ್ನು ಮುಂದುವರಿಸಲು ಅವಕಾಶ ಕಲ್ಪಿಸುತ್ತವೆ ಎಂದು ಸಚಿವಾಲಯ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಾಶ್ಚಾತ್ಯ ಶಕ್ತಿಗಳ ಟಾರ್ಗೆಟ್ ಭಾರತ ಆಗಿದೆ: RSS ಮುಖ್ಯಸ್ಥ ಮೋಹನ್ ಭಾಗವತ್; Video

ಕಿಮ್ ಜಾಂಗ್-ಉನ್ ನಿಧನ? ಉತ್ತರಾಧಿಕಾರ ಬಿಕ್ಕಟ್ಟಿನ ಭೀತಿ ನಡುವೆ ಸಹೋದರಿ ಕೈಗೆ ಆಡಳಿತ, 9,000 ಚೀನಾ ಸೈನಿಕರ ನಿಯೋಜನೆ!

ಸ್ಟಿಂಗ್ ಆಪರೇಷನ್ ಕೋಲಾಹಲ: ಸಿದ್ದರಾಮಯ್ಯ ಮೌನವೇಕೆ; ಕಾಂಗ್ರೆಸ್ ನಲ್ಲಿ, ರಾಜಕೀಯ ವಲಯದಲ್ಲಿ ಎದ್ದಿದೆ ಕುತೂಹಲ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಭೇಟಿಯಾದ 'ಪ್ರೇಮದ ಊರಲಿ' ತಂಡ! Video

CJP ನಾಯಕರ ಅತಿಕ್ರಮಣ ಪ್ರಕರಣ ಅಪರಾಧ ವಿಭಾಗಕ್ಕೆ ವರ್ಗಾವಣೆ: ನ್ಯಾಯಾಂಗ ಬಂಧನ ಬೆನ್ನಲ್ಲೇ ಪೊಲೀಸರ ಶಾಕ್