ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿಜಯದಶಮಿ ಭಾಷಣವನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 'ಅತ್ಯಂತ ಸ್ಪೂರ್ತಿದಾಯಕ' ಎಂದು ಕರೆದಿದ್ದು ಈ ಭಾಷಣವು ರಾಷ್ಟ್ರೀಯ ಪ್ರಗತಿ, ಸಾಮಾಜಿಕ ಏಕತೆ, ಸ್ವಾವಲಂಬನೆ, ವ್ಯಕ್ತಿತ್ವ ನಿರ್ಮಾಣ ಮತ್ತು 'ಪಂಚ ಪರಿವರ್ತನ' ಉಪಕ್ರಮದ ಮೇಲೆ ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನಾಗ್ಪುರದಲ್ಲಿ ಶ್ರೀ ವಿಜಯದಶಮಿ ಆಚರಣೆಯ ಶತಮಾನೋತ್ಸವ ವರ್ಷದ ಸಂದರ್ಭದಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ಭಾಷಣವು ಅತ್ಯಂತ ಸ್ಪೂರ್ತಿದಾಯಕವಾಗಿದೆ. ಈ ಸಂದರ್ಭದಲ್ಲಿ ಅವರು ರಾಷ್ಟ್ರೀಯ ಪ್ರಗತಿ, ಸಾಮಾಜಿಕ ಏಕತೆ, ಸ್ವಾವಲಂಬನೆ ಮತ್ತು ಸಾಮಾಜಿಕ ಸಬಲೀಕರಣ ಸೇರಿದಂತೆ ಹಲವಾರು ವಿಷಯಗಳ ಕುರಿತು ವಿವರಿಸಿದ್ದಾರೆ ಎಂದು ಬರೆದಿದ್ದಾರೆ.
ಆರ್‌ಎಸ್‌ಎಸ್‌ನ ಎಲ್ಲಾ ಸ್ವಯಂಸೇವಕರ ಜೀವನದ ಅವಿಭಾಜ್ಯ ಅಂಗವಾಗಿರುವ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವರು ಬಲವಾದ ಒತ್ತು ನೀಡಿದ್ದರು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗೆ ನಿರ್ಣಾಯಕವಾಗಿರುವ ಪಂಚ ಪರಿವರ್ತನೆ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸಂಘಟನೆಯ ಸಂಸ್ಥಾಪನಾ ದಿನದಂದು ನಾಗ್ಪುರದಲ್ಲಿ ನಡೆದ ವಾರ್ಷಿಕ ವಿಜಯದಶಮಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಸ್ವಯಂ ಅರಿವು, ಸ್ವದೇಶಿ, ಸಾಮಾಜಿಕ ಸಾಮರಸ್ಯ, ಕುಟುಂಬ ಮೌಲ್ಯಗಳು ಮತ್ತು ರಾಷ್ಟ್ರೀಯ ಏಕತೆಯ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಸಂಸ್ಥೆಯು ಕಳೆದ ವರ್ಷ ತನ್ನ ಶತಮಾನೋತ್ಸವದ ಆಚರಣೆಯ ಭಾಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ ಮತ್ತು ವಿಜಯದಶಮಿ ಆಚರಣೆಗಳು ವರ್ಷಪೂರ್ತಿ ನಡೆಯುವ ಚಟುವಟಿಕೆಗಳ ಪರಾಕಾಷ್ಠೆಯಾಗಿದೆ ಎಂದು ಭಾಗವತ್ ಹೇಳಿದರು.
ಆರ್‌ಎಸ್‌ಎಸ್ ಮುಖ್ಯಸ್ಥರು "ಪಂಚ ಪರಿವರ್ತನ" (ಐದು ಬದಲಾವಣೆಗಳು) ಅನ್ನು ಸಕಾರಾತ್ಮಕ ಸಾಮಾಜಿಕ ನವೀಕರಣ, ರಾಷ್ಟ್ರೀಯ ಪ್ರಗತಿ ಮತ್ತು ವೈಯಕ್ತಿಕ ನಡವಳಿಕೆಯ ಬದಲಾವಣೆಗೆ "ಪ್ರಮುಖ ನೀಲನಕ್ಷೆ" ಎಂದು ಬಣ್ಣಿಸಿದ್ದಾರೆ. ಇದು ಐದು ಅಂಶಗಳನ್ನು ಒಳಗೊಂಡಿದೆ. ಸಾಮಾಜಿಕ ಸಾಮರಸ್ಯ, ಕುಟುಂಬ ಜ್ಞಾನೋದಯ, ಪರಿಸರ ಪ್ರಜ್ಞೆ, ಸ್ವಯಂ ಸಾಕ್ಷಾತ್ಕಾರ ಮತ್ತು ಸ್ವದೇಶಿ ಮತ್ತು ನಾಗರಿಕ ಶಿಸ್ತು ಎಂದು ಹೇಳಿದರು.