ಉತ್ತರ ಪ್ರದೇಶದಲ್ಲಿ 125 ಸ್ಥಾನಗಳ ಮೇಲೆ ಕಾಂಗ್ರೆಸ್ ಕಣ್ಣು: ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಮೈತ್ರಿ ಮಾತುಕತೆ!

ಕಾಂಗ್ರೆಸ್ ಸುಮಾರು 100 'ಎ ವರ್ಗದ' (Category A) ಸ್ಥಾನಗಳು, 40-50 'ಬಿ ವರ್ಗದ' (Category B) ಸ್ಥಾನಗಳು ಮತ್ತು 25-35 'ಸಿ ವರ್ಗದ' (Category C) ಸ್ಥಾನಗಳನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸಿದೆ.
Priyanka Gandhi, Akhilesh Yadav
ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್
Updated on: 

ನವದೆಹಲಿ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷದ (SP)ಜೊತೆಗಿನ ಮೈತ್ರಿಯಲ್ಲಿ 125 ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ ಎದುರು ನೋಡುತ್ತಿದೆ. ಎಸ್ ಪಿ ಜೊತೆಗೆ ಮಾತುಕತೆ ಆರಂಭಿಸುವ ಉದ್ದೇಶದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸೋಮವಾರ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರೊಂದಿಗೆ ಸೀಟು ಹಂಚಿಕೆ ಕುರಿತು ಮೂರು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ.

ಈ ಸಭೆಯಲ್ಲಿ ಸುಮಾರು 175 ಸ್ಥಾನಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಎನ್ ಡಿಟಿವಿ ಸುದ್ದಿವಾಹಿನಿ ವರದಿ ಮಾಡಿದೆ. ಕಾಂಗ್ರೆಸ್ ಸುಮಾರು 100 'ಎ ವರ್ಗದ' (Category A) ಸ್ಥಾನಗಳು, 40-50 'ಬಿ ವರ್ಗದ' (Category B) ಸ್ಥಾನಗಳು ಮತ್ತು 25-35 'ಸಿ ವರ್ಗದ' (Category C) ಸ್ಥಾನಗಳನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸಿದೆ.

ಈ ವಾರ ಪ್ರಿಯಾಂಕಾ ಗಾಂಧಿ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರ ನಡುವೆ ಮತ್ತೊಂದು ಸಭೆ ನಡೆಯಲಿದ್ದು, ಆ ನಂತರ ಕಾಂಗ್ರೆಸ್ ಸುಮಾರು 125 ರಿಂದ 150 ಸ್ಥಾನಗಳ ಪಟ್ಟಿಯನ್ನು ಸಮಾಜವಾದಿ ಪಕ್ಷದ ಮುಂದಿಡುವ ಸಾಧ್ಯತೆಯಿದೆ. ನವೆಂಬರ್ ವೇಳೆಗೆ ಸೀಟು ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸುವುದು ಪಕ್ಷದ ಉದ್ದೇಶವಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ನಡೆಯಲಿರುವ ಸೀಟು ಹಂಚಿಕೆ ಮಾತುಕತೆಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

2022ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದಾಗ, ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಪಕ್ಷವು ಕೇವಲ ಎರಡು ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಈ ಬಾರಿ, 2024ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭಾ ಚುನಾವಣೆಯ ದತ್ತಾಂಶವನ್ನು ಆಧರಿಸಿ ಕಾಂಗ್ರೆಸ್ ತನ್ನ ಸ್ಥಾನಗಳ ಪಟ್ಟಿಯನ್ನು ರೂಪಿಸುತ್ತಿದೆ. ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದು ಪಕ್ಷದ ಗುರಿಯಾಗಿದೆ.

ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ 2024ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಅನಿರೀಕ್ಷಿತವಾಗಿ ಉತ್ತಮ ಸಾಧನೆ ತೋರಿತು. ಸ್ಪರ್ಧಿಸಿದ್ದ 17 ಸ್ಥಾನಗಳ ಪೈಕಿ ಆರು ಸ್ಥಾನಗಳನ್ನು ಗೆದ್ದುಕೊಂಡಿತು. 2024ರ ಚುನಾವಣೆಯಲ್ಲಿ ಕಾಂಗ್ರೆಸ್ 38 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಮತ್ತು 42 ಕ್ಷೇತ್ರಗಳಲ್ಲಿ ಎರಡನೇ ಸ್ಥಾನದಲ್ಲಿತ್ತು. ಈ ಎಲ್ಲಾ 80 ಸ್ಥಾನಗಳನ್ನು ಪಕ್ಷದ ಆಕಾಂಕ್ಷಿತ ಪಟ್ಟಿಯಲ್ಲಿ (wishlist) ಸೇರಿಸಲಾಗಿದೆ. ಇದಲ್ಲದೆ, ಅಜಯ್ ರೈ, ಅಜಯ್ ಲಲ್ಲು, ಸುಪ್ರಿಯಾ ಶ್ರೀನೇಟ್ ಮತ್ತು ನದೀಮ್ ಜಾವೇದ್ ಅವರಂತಹ ಪ್ರಮುಖ ಪಕ್ಷದ ನಾಯಕರಿಗೆ ಸಂಬಂಧಿಸಿದ ಕ್ಷೇತ್ರಗಳೂ ಈ ಪಟ್ಟಿಯಲ್ಲಿವೆ.

ಅಮೇಥಿ, ರಾಯಬರೇಲಿ ಮತ್ತು ಸಹರಾನ್‌ಪುರ ಸೇರಿದಂತೆ ಸಮಾಜವಾದಿ ಪಕ್ಷವು ಗೆದ್ದಿರುವ ಸುಮಾರು ಒಂದು ಡಜನ್ (ಹನ್ನೆರಡರಷ್ಟು) ಸ್ಥಾನಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ ಎಂದು ವರದಿಯಾಗಿದೆ. ಅಮೇಥಿ ಮತ್ತು ರಾಯಬರೇಲಿ ಕ್ಷೇತ್ರಗಳನ್ನು ಕಾಂಗ್ರೆಸ್‌ನ 'ಭದ್ರಕೋಟೆ'ಗಳೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇಲ್ಲಿಂದ ಪಕ್ಷದ ಪ್ರಮುಖ ಕುಟುಂಬದ ಸದಸ್ಯರು ಲೋಕಸಭೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ. ಆದರೆ, ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಪ್ರದರ್ಶನ ಅತ್ಯಂತ ಕಳಪೆಯಾಗಿದೆ.

ಅಮೇಥಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ, 2022ರ ಚುನಾವಣೆಯಲ್ಲಿ ಕಾಂಗ್ರೆಸ್ ಒಂದರಲ್ಲೂ ಗೆಲ್ಲಲು ಸಾಧ್ಯವಾಗಲಿಲ್ಲ. ಇದರಲ್ಲಿ ಮೂರು ಸ್ಥಾನಗಳನ್ನು ಬಿಜೆಪಿ, ಒಂದು ಸ್ಥಾನವನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಮತ್ತೊಂದು ಸ್ಥಾನವನ್ನು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಗೆದ್ದುಕೊಂಡಿದ್ದರು. ಅದೇ ರೀತಿ, ರಾಯಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ, 2022ರಲ್ಲಿ ಸಮಾಜವಾದಿ ಪಕ್ಷ ನಾಲ್ಕು ಸ್ಥಾನಗಳನ್ನು ಮತ್ತು ಬಿಜೆಪಿ ಒಂದು ಸ್ಥಾನವನ್ನು ಗೆದ್ದುಕೊಂಡಿದ್ದವು. ಇಲ್ಲಿ ಕಾಂಗ್ರೆಸ್‌ಗೆ ಯಾವುದೇ ಸ್ಥಾನ ಸಿಗಲಿಲ್ಲ.

ಸಮಾಜವಾದಿ ಪಕ್ಷ ಏನು ನೀಡಬಹುದು? ಮೈತ್ರಿ ಮಾಡಿಕೊಳ್ಳುವ ಅಗತ್ಯದ ಬಗ್ಗೆ ಎರಡೂ ಪಕ್ಷಗಳು ಸಕಾರಾತ್ಮಕವಾಗಿವೆ. ಆದರೆ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಕಾಂಗ್ರೆಸ್‌ಗೆ 60 ರಿಂದ 65ಕ್ಕಿಂತ ಹೆಚ್ಚು ಸ್ಥಾನಗಳನ್ನು ಬಿಟ್ಟುಕೊಡಲು ಆಸಕ್ತಿ ಹೊಂದಿಲ್ಲ ಎಂದು ತಿಳಿದುಬಂದಿದೆ. ಸ್ಥಾನ ಹಂಚಿಕೆಗೆ 'ಗೆಲ್ಲುವ ಸಾಮರ್ಥ್ಯ'ವೇ (winnability) ಮಾನದಂಡವಾಗಿರಬೇಕು ಎಂದು ಅಖಿಲೇಶ್ ಯಾದವ್ ಪದೇ ಪದೇ ಒತ್ತಿ ಹೇಳುತ್ತಿದ್ದಾರೆ.

ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 350 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ಅಖಿಲೇಶ್ ಯಾದವ್, ಈಗಾಗಲೇ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

Priyanka Gandhi, Akhilesh Yadav
ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ: ಆಕಾಶವಾಣಿ ಭವನಕ್ಕೆ ನುಗ್ಗಿದ ರಾಹುಲ್-ಪ್ರಿಯಾಂಕಾ ಗಾಂಧಿ ಸೇರಿ ಹಲವರ ವಿರುದ್ಧ FIR ದಾಖಲು..!

ಮೈತ್ರಿಯ ಭಾಗವಾಗಿ ಕಾಂಗ್ರೆಸ್‌ಗೆ ಕನಿಷ್ಠ 150 ಸ್ಥಾನಗಳಾದರೂ ಸಿಗಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಾಜೇಂದ್ರ ಪಾಲ್ ಗೌತಮ್ ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ತನ್ನ ರಾಜ್ಯ ಘಟಕದಲ್ಲಿ ಬದಲಾವಣೆಗಳನ್ನು ಮಾಡಿದ್ದು, ಇದು ಸಮಾಜವಾದಿ ಪಕ್ಷದ ಆಕ್ಷೇಪಣೆಗಳು ಅಥವಾ ಕಳವಳಗಳನ್ನು ಪರಿಗಣಿಸಲು ಕಾಂಗ್ರೆಸ್ ಸಿದ್ಧವಿದೆ ಎಂಬುದರ ಸುಳಿವು ನೀಡಿದೆ. ಪಕ್ಷವು ಆರಾಧನಾ ಮಿಶ್ರಾ ಅವರನ್ನು ರಾಜ್ಯ ಘಟಕದ ಹೊಸ ಮುಖ್ಯಸ್ಥರನ್ನಾಗಿ ನೇಮಿಸಿದೆ ಮತ್ತು ಸಂಸದ ಇಮ್ರಾನ್ ಮಸೂದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ (working president) ನೇಮಕ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com