ಬೆಂಗಳೂರು: ಯುವ ಕಾರ್ಯಕರ್ತರ ಬಂಧನ ಹಾಗೂ ಬಿಡುಗಡೆಗೂ ಮುನ್ನ ಅವರು ‘ಶಾಂತಿ ಭದ್ರತಾ ಬಾಂಡ್’ಗಳನ್ನು (Peace Bonds) ಸಲ್ಲಿಸಬೇಕೆಂಬ ಷರತ್ತನ್ನು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ರಾಜ್ ತೀವ್ರವಾಗಿ ಖಂಡಿಸಿದ್ದಾರೆ. ಪ್ರಜಾಸತ್ತಾತ್ಮಕ ಭಿನ್ನಮತವನ್ನು ಹತ್ತಿಕ್ಕುವ ಸರ್ಕಾರದ ಪ್ರಯತ್ನವಿದು ಎಂದು ಅವರು ಟೀಕಿಸಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದೂ ಆಗ್ರಹಿಸಿದ್ದಾರೆ. ಚುನಾವಣಾ ಪ್ರಕ್ರಿಯೆಯ ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೊ ಹೇಳಿಕೆಯಲ್ಲಿ, ಸೌರಭ್, ಆಶುತೋಷ್ ಮತ್ತು ನೇಹಾ ಸೇರಿದಂತೆ ಕಾರ್ಯಕರ್ತರನ್ನು ಮೊದಲು ಬಂಧಿಸಿದ್ದೇಕೆ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವ ಮೊದಲು ಶಾಂತಿ ಭದ್ರತಾ ಬಾಂಡ್‌ಗಳಿಗೆ ಸಹಿ ಹಾಕುವಂತೆ ಸರ್ಕಾರ ಷರತ್ತು ವಿಧಿಸಿರುವುದನ್ನು ಅವರು ಟೀಕಿಸಿದ್ದಾರೆ. ಭವಿಷ್ಯದಲ್ಲಿ ಅವರು ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ, ಈ ಬಾಂಡ್‌ಗಳನ್ನು ಆಧರಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಂತಿಯುತ ಪ್ರತಿಭಟನೆಗಳನ್ನು ಬೆದರಿಕೆಯೆಂದು ಪರಿಗಣಿಸಬಾರದು ಎಂದು ಹೇಳಿರುವ ನಟ ಪ್ರಕಾಶ್ ರಾಜ್, ಭಿನ್ನಮತಕ್ಕೆ ಸರ್ಕಾರ ಹೆಚ್ಚು ಪ್ರಬುದ್ಧತೆಯಿಂದ ಪ್ರತಿಕ್ರಿಯಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆ ನಡೆಸಿದ್ದಕ್ಕಾಗಿ ವಿದ್ಯಾರ್ಥಿಗಳು ಕಾನೂನು ಪ್ರಕ್ರಿಯೆಗಳನ್ನು ಎದುರಿಸುವಂತೆ ಮಾಡುವುದು ನ್ಯಾಯ ಒದಗಿಸುವುದರ ಬದಲು ಪ್ರಕ್ರಿಯೆಯನ್ನೇ ಶಿಕ್ಷೆಯಾಗಿ ಪರಿವರ್ತಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಂಧನಗಳು ಮತ್ತು ಕಾನೂನು ನಿರ್ಬಂಧಗಳಿಂದ ಯುವಜನರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ, ತಮಗೆ ಆಗಿರುವ ಅನ್ಯಾಯ ಹಾಗೂ ಅಧಿಕಾರದ ದುರುಪಯೋಗದ ರೀತಿಯ ವರ್ತನೆಯನ್ನು ವಿದ್ಯಾರ್ಥಿಗಳು ಮರೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ವಿರುದ್ಧ ಸಾರ್ವಜನಿಕರ ವಿರೋಧ ಹೆಚ್ಚುತ್ತಿದ್ದು, ಶೀಘ್ರದಲ್ಲೇ ಇದು ದೇಶವ್ಯಾಪಿ ದೊಡ್ಡ ಆಂದೋಲನವಾಗಿ ರೂಪುಗೊಳ್ಳಲಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ರೈತ ಸಂಘಟನೆಗಳು, ನಾಗರಿಕ ಸಮಾಜದ ಗುಂಪುಗಳು, ಬರಹಗಾರರು ಹಾಗೂ ಸಾರ್ವಜನಿಕರು ಸಂಘಟಿತ ಪ್ರತಿಭಟನೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಈ ಚಳವಳಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ಹೇಳಿದ್ದಾರೆ.