ನವದೆಹಲಿ: ಪ್ರಧಾನ ನರೇಂದ್ರ ಮೋದಿ ಅವರ ನಿವಾಸದ ಸಮೀಪವಿರುವ ಶತಮಾನದಷ್ಟು ಹಳೆಯದಾದ 'ರೇಸ್ ಕೋರ್ಸ್ ಮಸೀದಿ'ಯನ್ನು ತೆರವುಗೊಳಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ್ದು, ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಪಿಡಿಪಿ(PDP) ಮುಖ್ಯಸ್ಥೆ, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳ ಬಗ್ಗೆ ಕೇಂದ್ರ ಸರ್ಕಾರ "ತೀವ್ರ ನಿರ್ಲಕ್ಷ್ಯ" ತೋರುತ್ತಿದೆ ಎಂದು ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಅಕ್ಟೋಬರ್ 19 ರಂದು ನೀಡಲಾದ ಈ ತೆರವು ನೋಟಿಸ್‌ನಲ್ಲಿ, ಮಸೀದಿಯನ್ನು ಖಾಲಿ ಮಾಡಲು ಆರು ದಿನಗಳ ಗಡುವು ನೀಡಲಾಗಿದೆ. ಅಲ್ಲದೆ, ಅಲ್ಲಿನ ನೀರು ಮತ್ತು ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ.
ಈ ಕುರಿತು 'ಎಕ್ಸ್' (X) ಮೂಲಕ ಪ್ರತಿಕ್ರಿಯಿಸಿರುವ ಮೆಹಬೂಬಾ ಮುಫ್ತಿ, ಪ್ರಧಾನ ಮಂತ್ರಿಯವರ ನಿವಾಸದ ಬಳಿ ಇರುವ 120 ವರ್ಷ ಹಳೆಯ ಐತಿಹಾಸಿಕ ಮಸೀದಿಗೆ ತೆರವು ನೋಟಿಸ್ ನೀಡಲಾಗಿದ್ದು, ಇದು ಮಸೀದಿಯ ಅಸ್ತಿತ್ವಕ್ಕೇ ಕುತ್ತು ತಂದೊಡ್ಡಿದೆ ಎಂದು ಹೇಳಿದ್ದಾರೆ.
ವಿದೇಶಗಳಲ್ಲಿರುವ ಮಸೀದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಸರ್ಕಾರ, ಭಾರತದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು "ಅಚ್ಚರಿ ಮತ್ತು ದಿಗ್ಭ್ರಮೆ" ಉಂಟುಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಈ ಜಾಗವು ಕೇಂದ್ರ ಸರ್ಕಾರದ ಅಧೀನದಲ್ಲಿರುವ 'ಭೂಮಿ ಮತ್ತು ಅಭಿವೃದ್ಧಿ ಕಚೇರಿ'ಗೆ(LDO) ಸೇರಿದ್ದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದ್ದು, ಅನಧಿಕೃತವಾಗಿ ಜಾಗವನ್ನು ಆಕ್ರಮಿಸಿಕೊಂಡಿರುವುದಕ್ಕೆ ಮತ್ತು ಅಲ್ಲಿ ನಿರ್ಮಾಣ ಕಾರ್ಯ ಕೈಗೊಂಡಿರುವುದಕ್ಕೆ ಎಚ್ಚರಿಕೆ ನೀಡಲಾಗಿದೆ.