ಕಾನ್ಪುರ: ದಸರಾ ಜಾತ್ರೆಗೆ ತೆರಳಿದ್ದ ವ್ಯಕ್ತಿಯನ್ನು ಕಾರಿನ ಮೇಲ್ಛಾವಣಿಗೆ ಕಟ್ಟಿ 1.5 ಕಿಮೀ ಎಳೆದೊಯ್ದು ಬಳಿಕ ಕಾರು ಹತ್ತಿಸಿ ಭೀಕರವಾಗಿ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಕೈಗಳನ್ನು ಕಾರಿನ ಕಿಟಕಿಗಳಿಗೆ ಕಟ್ಟಿ, ಆತನನ್ನು ಕಾರಿನ ಮೇಲ್ಛಾವಣಿಯ ಮೇಲೆ ಮಲಗಿಸಿ ಸುಮಾರು ಒಂದೂವರೆ ಕಿಲೋಮೀಟರ್ ಎಳೆದೊಯ್ದು ಬಳಿಕ ರಸ್ತೆಗೆ ಎಸೆದು ಕಾರು ಹತ್ತಿಸಿ ಹತ್ಯೆ ಮಾಡಲಾಗಿದೆ.
ದಸರಾ ಹಬ್ಬದ ರಾತ್ರಿ ಅಕ್ಟೋಬರ್ 20ರಂದು ಸುಮಾರು 10.30ರ ವೇಳೆಗೆ ಈ ಭೀಕರ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ಚಲಿಸುವ ಕಾರಿನ ಮೇಲ್ಛಾವಣಿಯಲ್ಲಿ ವ್ಯಕ್ತಿಯನ್ನು ಕರೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೃತನನ್ನು 37 ವರ್ಷದ ಬೀರೂ ಸಿಂಗ್ ಎಂದು ಗುರುತಿಸಲಾಗಿದೆ. ಕಾನ್ಪುರದ ಅರ್ರಾ ನಿವಾಸಿಯಾಗಿದ್ದ ಅವರು, ಆಹಾರ ಉತ್ಪನ್ನಗಳ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ ಎಂದು ತಿಳಿದುಬಂದಿದೆ.
ಹಳೆಯ ದ್ವೇಷಕ್ಕೆ ಬರ್ಬರ ಹತ್ಯೆ?
ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಬೀರೂ ಸಿಂಗ್ ಅವರಿಗೆ ರಾಜ್ವೀರ್ ಮತ್ತು ಮೇವುಲಾಲ್ ಎಂಬ ಇಬ್ಬರೊಂದಿಗೆ ಮಾತಿನ ಚಕಮಕಿ ನಡೆದಿತ್ತು. ದಸರಾ ಜಾತ್ರೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಮೇವುಲಾಲ್, ರಾಜ್ವೀರ್ ಸೇರಿದಂತೆ ಐವರು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳಿಂದ ತಪ್ಪಿಸಿಕೊಳ್ಳಲು ಬೀರೂ ಸಿಂಗ್ ಪ್ರಯತ್ನಿಸಿದಾಗ, ಕಾರಿನಿಂದ ಅವರಿಗೆ ಡಿಕ್ಕಿ ಹೊಡೆಯಲಾಗಿದೆ ಎನ್ನಲಾಗಿದೆ. ಬಳಿಕ ಅವರನ್ನು ಕಾರಿನ ಮೇಲ್ಛಾವಣಿಯ ಮೇಲೆ ಮಲಗಿಸಿ, ಎರಡೂ ಕೈಗಳನ್ನು ಕಾರಿನ ಕಿಟಕಿಗಳ ನಡುವೆ ಕಟ್ಟಿ ಸುಮಾರು ಒಂದೂವರೆ ಕಿಲೋಮೀಟರ್ ದೂರ ಎಳೆದೊಯ್ಯಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇಷ್ಟಕ್ಕೇ ನಿಲ್ಲದ ಆರೋಪಿಗಳು, ಬೀರೂ ಅವರನ್ನು ರಸ್ತೆಗೆ ಎಸೆದು ಅವರ ಮೇಲೆ ಕಾರು ಹರಿಸಿದ್ದಾರೆ ಎನ್ನಲಾಗಿದೆ. ಈ ಭೀಕರ ಕೃತ್ಯದಿಂದಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಆಸ್ಪತ್ರೆಗೆ ಸಾಗಿಸಿದರೂ ಉಳಿಯದ ಜೀವ
ಘಟನೆ ನಡೆದ ಸ್ಥಳದ ಮೂಲಕ ಹಾದುಹೋಗುತ್ತಿದ್ದ ಸ್ಥಳೀಯ ನಿವಾಸಿ ದೇವೇಂದ್ರ ಸಿಂಗ್ ಚೌಹಾಣ್ ಅವರು ಬೀರೂ ಸಿಂಗ್ ಅವರನ್ನು ಗುರುತಿಸಿದ್ದಾರೆ. ತಕ್ಷಣ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬೀರೂ ಅವರನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಬಳಿಕ ಹ್ಯಾಲೆಟ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
‘ಅಪಘಾತವಲ್ಲ, ನನ್ನ ಪತಿಯ ಕೊಲೆ’
ಬೀರೂ ಸಿಂಗ್ ಅವರ ಪತ್ನಿ ರೀನಾ ಸಿಂಗ್ ಈ ಘಟನೆ ಅಪಘಾತ ಎಂಬುದನ್ನು ತಳ್ಳಿಹಾಕಿದ್ದಾರೆ. ತಮ್ಮ ಪತಿಯನ್ನು ಪರಿಚಯಸ್ಥರೇ ಸೇರಿಕೊಂಡು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ನಡುವೆ, ಪ್ರದೇಶದ ಸಿಸಿಟಿವಿ ಕ್ಯಾಮೆರಾದಲ್ಲಿ ಚಲಿಸುತ್ತಿರುವ ಕಾರಿನ ಮೇಲ್ಛಾವಣಿಯಲ್ಲಿ ವ್ಯಕ್ತಿಯೊಬ್ಬನನ್ನು ಕರೆದೊಯ್ಯುತ್ತಿರುವ ದೃಶ್ಯ ದಾಖಲಾಗಿದೆ. ಈ ದೃಶ್ಯ ಪ್ರಕರಣದ ತನಿಖೆಯಲ್ಲಿ ಮಹತ್ವದ ಸಾಕ್ಷ್ಯವಾಗುವ ಸಾಧ್ಯತೆಯಿದೆ.
ಪೊಲೀಸರಿಂದ ತನಿಖೆ ಚುರುಕು
ಕಾನ್ಪುರದ ನೌಬಸ್ತಾ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಭಿಷೇಕ್ ಕುಮಾರ್ ರಾಹುಲ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ. “ಬೀರೂ ಅವರ ಅಣ್ಣ ಕುಲದೀಪ್ ಸಿಂಗ್ ಭದೌರಿಯಾ ದೂರು ಸಲ್ಲಿಸಿದ್ದು, ತಮ್ಮ ಸಹೋದರನಿಗೆ ಕಾರಿನಿಂದ ಡಿಕ್ಕಿ ಹೊಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ತನಿಖೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಗಳನ್ನೂ ಪರಿಶೀಲಿಸಲಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಹಳೆಯ ವೈಷಮ್ಯವೇ ಘಟನೆಗೆ ಕಾರಣವೇ, ಆರೋಪಿಗಳು ಉದ್ದೇಶಪೂರ್ವಕವಾಗಿ ಬೀರೂ ಅವರನ್ನು ಹತ್ಯೆ ಮಾಡಿದ್ದಾರೆಯೇ ಎಂಬುದನ್ನು ಪೊಲೀಸರು ತನಿಖೆಯ ಮೂಲಕ ಪತ್ತೆಹಚ್ಚಬೇಕಿದೆ.