ಪೀಲಮೇಡು: ಗೋಮಾಂಸ ಸೇವಿಸಿದ ಕಾರಣದಿಂದ ಜಾತಿ ಆಧಾರಿತ ಕಿರುಕುಳ ಮತ್ತು ನಿಂದನೆಗೆ ಒಳಗಾದ 11ನೇ ತರಗತಿಯ 16 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮಿಳುನಾಡಿನ ಪೀಲಮೇಡುವಿನಲ್ಲಿ ಅಕ್ಟೋಬರ್ 21ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸುಮಾರು ಎರಡು ತಿಂಗಳ ಹಿಂದಿನಿಂದಲೇ ಈ ಕಿರುಕುಳ ತೀವ್ರಗೊಂಡಿತ್ತು ಎಂದು ಬಾಲಕನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಬಾಲಕ ಸರ್ಕಾರಿ ಅನುದಾನಿತ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ವಿದ್ಯಾರ್ಥಿವೇತನ ಯೋಜನೆಗೆ ಅರ್ಹರಾದ ಪರಿಶಿಷ್ಟ ಜಾತಿಯ (SC) ವಿದ್ಯಾರ್ಥಿಗಳನ್ನು ಗುರುತಿಸಲು ಆತನ ತರಗತಿ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ಜಾತಿಯನ್ನು ಬಹಿರಂಗಪಡಿಸುವಂತೆ ಕೇಳಿದ್ದರು. ಅಲ್ಲದೆ, ಅವರು ಯಾವ ರೀತಿಯ ಆಹಾರ ಸೇವಿಸುತ್ತಾರೆ ಮತ್ತು ಗೋಮಾಂಸ ತಿನ್ನುತ್ತಾರೆಯೇ ಎಂಬ ಬಗ್ಗೆಯೂ ಶಿಕ್ಷಕರು ಪ್ರಶ್ನಿಸಿದ್ದರು.
ಆ ಬಾಲಕ ಮತ್ತಿತರರು ತಾವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು ಮತ್ತು ಗೋಮಾಂಸ ಸೇವಿಸುತ್ತೇವೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ, ಆ ಬಾಲಕನನ್ನು ಸಹಪಾಠಿಗಳು ನಿಂದಿಸಲು ಮತ್ತು ಕಿರುಕುಳ ನೀಡಲು ಪ್ರಾರಂಭಿಸಿದರು ಹಾಗೂ ಅವನನ್ನು ಗುಂಪಿನಿಂದ ಪ್ರತ್ಯೇಕಿಸಿ ಏಕಾಂಗಿಯಾಗಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಿರುಕುಳದ ಬಗ್ಗೆ ಬಾಲಕನು ತರಗತಿ ಶಿಕ್ಷಕರು ಮತ್ತು ಶಾಲಾ ಪ್ರಾಂಶುಪಾಲರಿಗೆ ಪದೇ ಪದೇ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆತನ ತಾಯಿ ಆರೋಪಿಸಿದ್ದಾರೆ. ನಿರಂತರ ಮಾನಸಿಕ ಯಾತನೆಯಿಂದ ಬೇಸತ್ತ ಬಾಲಕ, ಅಂತಿಮವಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಪೀಲಮೇಡು ಪೊಲೀಸರು ಶಾಲಾ ಪ್ರಾಂಶುಪಾಲರು, ತರಗತಿ ಶಿಕ್ಷಕರು ಮತ್ತು ಇಬ್ಬರು ಸಹಪಾಠಿಗಳು ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ 'ಆತ್ಮಹತ್ಯೆಗೆ ಪ್ರಚೋದನೆ' ನೀಡಿದ ಆರೋಪ ಮತ್ತು 'ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ'ಯ ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ. ತರಗತಿ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.