ಚೆನ್ನೈ: ವಾರಾಂತ್ಯದ ರಜೆಯನ್ನು ಕಳೆಯಲು ತಮಿಳುನಾಡಿನ ಜನಪ್ರಿಯ ಗಿರಿಧಾಮ ಕೊಡೈಕೆನಾಲ್‌ಗೆ ತೆರಳುತ್ತಿದ್ದ ಪ್ರವಾಸಿಗರಿಗೆ ಭಾರೀ ಮಳೆ ಮತ್ತು ಪ್ರವಾಹ ಸಂಕಷ್ಟ ತಂದೊಡ್ಡಿದ್ದು, 2 ಗಂಟೆಗಳ ಕಾಲ ಪ್ರವಾಸಿಗರು ಪರದಾಡಿದ ಘಟನೆ ನಡೆದಿದೆ.
ಧಾರಾಕಾರ ಮಳೆಯಿಂದ ರಸ್ತೆಗಳ ಮೇಲೆ ಪ್ರವಾಹದ ನೀರು ಹರಿದ ಪರಿಣಾಮ, ಕೊಡೈಕೆನಾಲ್ ಗಿರಿಧಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದರಿಂದ ಕಾರುಗಳು ಮತ್ತು ಬಸ್‌ಗಳು ಸೇರಿದಂತೆ ಹಲವು ವಾಹನಗಳು ಸುಮಾರು ಎರಡು ಗಂಟೆಗಳ ಕಾಲ ರಸ್ತೆಯಲ್ಲೇ ಸಿಲುಕಿಕೊಂಡಿವೆ.
ಭಾರೀ ಮಳೆ ಹಾಗೂ ರಸ್ತೆಗಳ ಮೇಲಿನ ನೀರಿನ ಹರಿವಿನಿಂದಾಗಿ ವಾಹನಗಳು ಮುಂದೆ ಸಾಗಲು ಸಾಧ್ಯವಾಗದೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ಕೊಡೈಕೆನಾಲ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಂಪರ್ಕ ರಸ್ತೆಗಳ ಕೆಲವು ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಪರಿಣಾಮವಾಗಿ ಕಾರುಗಳು ಮತ್ತು ಬಸ್‌ಗಳು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಮುಂದಿನ ಪ್ರಯಾಣ ಮುಂದುವರಿಸಲಾಗದೆ ಬರೊಬ್ಬರಿ 2 ಗಂಟೆ ಕಾಯುವಂತಾಯಿತು.
ತಂಪಾದ ವಾತಾವರಣ, ಹಚ್ಚಹಸಿರಿನ ಬೆಟ್ಟಗಳು ಹಾಗೂ ಸುಂದರ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕೊಡೈಕೆನಾಲ್‌ಗೆ ವಾರಾಂತ್ಯ ಮತ್ತು ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಭಾರೀ ಮಳೆ ಮತ್ತು ಪ್ರವಾಹದಂತಹ ಪರಿಸ್ಥಿತಿಗಳು ಬೆಟ್ಟದ ರಸ್ತೆಗಳ ಸಂಚಾರಕ್ಕೆ ಅಡ್ಡಿಯಾಗುತ್ತವೆ.
ಬೆಟ್ಟದ ಪ್ರದೇಶಗಳಿಗೆ ತೆರಳುವ ಮುನ್ನ ಎಚ್ಚರಿಕೆ ಅಗತ್ಯ
ಮಳೆಗಾಲದಲ್ಲಿ ಗಿರಿಧಾಮಗಳಿಗೆ ಪ್ರಯಾಣಿಸುವವರು ಹವಾಮಾನ ಮುನ್ಸೂಚನೆ ಹಾಗೂ ರಸ್ತೆ ಸಂಚಾರದ ಸ್ಥಿತಿಗತಿಗಳನ್ನು ಮುಂಚಿತವಾಗಿ ಪರಿಶೀಲಿಸುವುದು ಅಗತ್ಯವಾಗಿದೆ. ವಿಶೇಷವಾಗಿ ಭಾರೀ ಮಳೆಯ ಎಚ್ಚರಿಕೆ ಇರುವ ಸಂದರ್ಭಗಳಲ್ಲಿ ಪ್ರಯಾಣದ ಯೋಜನೆಯನ್ನು ರೂಪಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.