ನೇಹಾ ಬೋರಾ 
ದೇಶ

ಯಾರ ಶಾಂತಿ ಕಾಪಾಡಬೇಕು..? ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಶಾಂತಿ ಭಂಗವೇ?: ಶಾಂತಿ ಬಾಂಡ್ ತಿರಸ್ಕರಿಸಿದ ನೇಹಾ ಬೋರಾ; ದೆಹಲಿ ಪೊಲೀಸ್ ನೋಟಿಸ್ ವಿರುದ್ಧ ಆಕ್ರೋಶ..!

ಸರ್ಕಾರದ ಈ ಕ್ರಮವು ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಮತ್ತು ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸುವ ತಂತ್ರವಾಗಿದೆ. ನಾನು ಯಾರ ಶಾಂತಿಯನ್ನು ಕಾಪಾಡಬೇಕೆಂದು ಕೇಳಲಾಗುತ್ತಿದೆ?

ನವದೆಹಲಿ: ನಾನು ಯಾರ ಶಾಂತಿಯನ್ನ ಕಾಪಾಡಬೇಕು...? ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಶಾಂತಿ ಭಂಗವೇ...? ಎಂದು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಅವರು ಪ್ರಶ್ನಿಸಿದ್ದು, ದೆಹಲಿ ಪೊಲೀಸ್ ಜಾರಿ ಮಾಡಿರುವ ಶಾಂತಿ ಬಾಂಡ್‌ಗೆ ಸಹಿ ಹಾಕಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಕಳೆದ ಅಕ್ಟೋಬರ್ 16 ರಂದು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ "ಲೆಹ್ರಾ ದೋ ತಿರಂಗಾ" ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನೇಹಾ ಬೋರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದಾದ ನಂತರ, ಅಕ್ಟೋಬರ್ 17, 2026 ರಂದು ದೆಹಲಿ ಪೊಲೀಸರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ನ ಸೆಕ್ಷನ್ 126 ರ ಅಡಿಯಲ್ಲಿ ನೇಹಾ ಬೋರಾ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಮುಂದಿನ ವಿಚಾರಣೆಯ ಅವಧಿಯಲ್ಲಿ ಶಾಂತಿ ಕಾಪಾಡುವ ಭರವಸೆಯಾಗಿ ರೂ.10,000 ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಜಾಮೀನು (Surety) ನೀಡುವಂತೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಲು ಆದೇಶಿಸಲಾಗಿತ್ತು.

ಪೊಲೀಸರ ಈ ನೋಟಿಸ್ ಕಾನೂನುಬಾಹಿರ ಮತ್ತು ಸಂವಿಧಾನದ ವಿಧಿ 19 ಮತ್ತು 21 ರ ಅಡಿಯಲ್ಲಿ ನೀಡಲಾಗಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ನೇಹಾ ಬೋರಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿ, ಮ್ಯಾಜಿಸ್ಟ್ರೇಟ್ ಪ್ರಕ್ರಿಯೆಗೆ ಹಾದಿ ಸುಗಮಗೊಳಿಸಿತ್ತು.

ಹೈಕೋರ್ಟ್ ತೀರ್ಪಿನ ಮರುದಿನವೇ ಸಿಪಿಐ(ಎಂಎಲ್) ಲಿಬರೇಶನ್ ಸಂಸದೀಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೇಹಾ ಬೋರಾ ಅವರು, ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಈ ಕ್ರಮವು ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಮತ್ತು ಪ್ರತಿಭಟನಾಕಾರರ ಧ್ವನಿಯನ್ನು ಅಡಗಿಸುವ ತಂತ್ರವಾಗಿದೆ. ನಾನು ಯಾರ ಶಾಂತಿಯನ್ನು ಕಾಪಾಡಬೇಕೆಂದು ಕೇಳಲಾಗುತ್ತಿದೆ? ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಇಂತಹ ಬಾಂಡ್‌ಗಳನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಶಾಂತಿ ಬಾಂಡ್‌ಗಳನ್ನು ಜಾರಿಗೊಳಿಸುವ ಆಡಳಿತ ವ್ಯವಸ್ಥೆ ಮತ್ತು ಭಿನ್ನಮತ ವ್ಯಕ್ತಪಡಿಸುವ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ ನಡುವಿನ ಮೂಲಭೂತ ವಿರೋಧಾಭಾಸವನ್ನೂ ಅವರು ಪ್ರಶ್ನಿಸಿದ್ದಾರೆ.

ನಾವು ಸರ್ಕಾರಕ್ಕೆ ಯಾವುದೇ ಪ್ರಶ್ನೆ ಕೇಳದಿದ್ದರೆ, ಯಾರ ಶಾಂತಿಯನ್ನು ಕಾಪಾಡುತ್ತಿದ್ದೇವೆ?ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳಾಗಿವೆ ಎಂದು ಹೇಳಿದ್ದಾರೆ.

ಸಿಪಿಐ (ಎಂಎಲ್) ಲಿಬರೇಷನ್‌ನ ವಿದ್ಯಾರ್ಥಿ ಘಟಕವಾಗಿರುವ ಎಐಎಸ್‌ಎ, ಶಾಂತಿ ಬಾಂಡ್‌ಗೆ ಸಹಿ ಹಾಕುವುದನ್ನು ಸಾಮಾನ್ಯ ಪ್ರಕ್ರಿಯೆಯೆಂದು ಒಪ್ಪಿಕೊಳ್ಳುವುದಿಲ್ಲ. ಇಂತಹ ಬಾಂಡ್‌ಗೆ ಸಹಿ ಹಾಕುವುದು ಪ್ರಜಾಸತ್ತಾತ್ಮಕವಾಗಿ ಭಿನ್ನಮತ ವ್ಯಕ್ತಪಡಿಸುವ ಹಕ್ಕನ್ನೇ ಬಿಟ್ಟುಕೊಟ್ಟಂತೆ ಎಂದು ವಾದಿಸಿದರು.

ಒಂದೆಡೆ ಸಂವಿಧಾನ ನಮಗೆ ಭಿನ್ನಮತ ವ್ಯಕ್ತಪಡಿಸುವ ಹಕ್ಕು ನೀಡುತ್ತದೆ. ಮತ್ತೊಂದೆಡೆ, ಶಾಂತಿ ಭಂಗದ ನೆಪದಲ್ಲಿ ಜನರನ್ನು ಬಂಧಿಸಲು ಇಂತಹ ಬಾಂಡ್‌ಗಳನ್ನು ಬಳಸಲಾಗುತ್ತಿದೆ. ಅಕ್ಟೋಬರ್ 16ರಂದು ಮಂಡಿ ಹೌಸ್‌ನಲ್ಲಿ ಪ್ರತಿಭಟನೆ ಆರಂಭಿಸಿದ ಕೇವಲ 10 ನಿಮಿಷಗಳಲ್ಲೇ ನಮ್ಮನ್ನು ವಶಕ್ಕೆ ಪಡೆದು, ನಾವು ಶಾಂತಿ ಭಂಗ ಮಾಡುತ್ತಿದ್ದೇವೆ ಎಂದು ಹೇಳಲಾಯಿತು. ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ತಡೆಯಲು ಶಾಂತಿ ಬಾಂಡ್‌ಗಳನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಹೀಗಾಗಿ, ಇಂತಹ ಬಾಂಡ್‌ಗೆ ಸಹಿ ಹಾಕುವುದು ತಾತ್ವಿಕವಾಗಿ ತಪ್ಪು. ಇದು ನಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಬಿಟ್ಟುಕೊಟ್ಟಂತೆ ಎಂದು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಹೋರಾಟ ಯಾವ ದಿಕ್ಕಿನಲ್ಲಿ ಸಾಗಿದರೂ, ಭಿನ್ನಮತದ ಹಕ್ಕನ್ನು ಶಾಂತಿಗೆ ಬೆದರಿಕೆ ಎಂದು ಬಿಂಬಿಸಲು ಅವಕಾಶ ನೀಡಬಾರದು. ಕಾನೂನು ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಕರಾಗಿರುವ ನ್ಯಾಯಾಲಯಗಳು ಈ ವಿರೋಧಾಭಾಸವನ್ನು ಅರ್ಥಮಾಡಿಕೊಳ್ಳಲಿವೆ ಎಂಬ ಭರವಸೆ ಇದೆ, ಮುಂದೆಯೂ ಇಂತಹ ಶಾಂತಿ ಬಾಂಡ್‌ಗಳನ್ನು ಪ್ರಶ್ನಿಸುತ್ತೇನೆಂದು ತಿಳಿಸಿದರು.

ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲು ಇಂತಹ ಬಾಂಡ್‌ಗಳನ್ನು ಬಳಸಬಹುದು ಎಂಬುದಕ್ಕೆ ನಾವು ಒಪ್ಪಿಗೆ ನೀಡಿದಂತಾಗಬಾರದು. ಹೀಗಾಗಿ, ನಾವು ಬಾಂಡ್‌ಗೆ ಸಹಿ ಹಾಕುವುದಿಲ್ಲ ಮತ್ತು ಅವುಗಳನ್ನು ಪ್ರಶ್ನಿಸುತ್ತಲೇ ಇರುತ್ತೇವೆ. ಎಐಎಸ್‌ಎ ಇಂತಹ ಕ್ರಮಗಳನ್ನು ಸಾಮಾನ್ಯವೆಂದು ಒಪ್ಪಿಕೊಳ್ಳುವುದಿಲ್ಲ. ಶಾಂತಿ ಎನ್ನುವುದು ಸರ್ಕಾರಕ್ಕೆ ಮಾತ್ರವಲ್ಲ, ಜನರಿಗೂ ಇರಬೇಕು.

ನ್ಯಾಯಾಲಯವು ತಮ್ಮ ಅರ್ಜಿಯನ್ನು ವಿಷಯದ ಅರ್ಹತೆಯ ಆಧಾರದ ಮೇಲೆ ತಿರಸ್ಕರಿಸಿಲ್ಲ. ಬದಲಿಗೆ, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನೀಡಿದ ನೋಟಿಸ್‌ನ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಯ ಮೂಲ ವಿಷಯವನ್ನು ಪರಿಶೀಲಿಸಲು ನಿರಾಕರಿಸಿ, ನೋಟಿಸ್‌ಗೆ ಸಂಬಂಧಿಸಿದ ವಿಚಾರಣೆಯಲ್ಲಿ ಭಾಗವಹಿಸುವಂತೆ ಸೂಚಿಸಿದೆಯ

ಕಾರಣ ಕೇಳುವ ನೋಟಿಸ್ ನೀಡಿದ ಮಾತ್ರಕ್ಕೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಯಾರನ್ನೂ ಬಲವಂತವಾಗಿ ಯಾವುದೇ ದಾಖಲೆಗೆ ಸಹಿ ಹಾಕುವಂತೆ ಮಾಡಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯಲ್ಲಿ ನೈಸರ್ಗಿಕ ನ್ಯಾಯದ ತತ್ವಗಳನ್ನು ಪಾಲಿಸಬೇಕಾಗುತ್ತದೆ ಎಂದರು.

ಪ್ರಜಾಪ್ರಭುತ್ವ ಎನ್ನುವುದು ಕೇವಲ ಅಮೂರ್ತ ಪರಿಕಲ್ಪನೆಯಲ್ಲ; ಮತದಾನದ ಹಕ್ಕು ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕು ಸೇರಿದಂತೆ ಜನರ ಮೂಲಭೂತ ಹಕ್ಕುಗಳ ಅರಿವು ಮೂಡಿಸುವ ವ್ಯವಸ್ಥೆಯಾಗಿದೆ. ಭಾರತದಂತಹ ದೇಶದಲ್ಲಿ ಪ್ರಜಾಪ್ರಭುತ್ವ ಎಂದರೆ ಜನರು ಮುಖ್ಯವಾಗಿ ಎರಡು ಹಕ್ಕುಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಒಂದು ಮತದಾನದ ಹಕ್ಕು, ಮತ್ತೊಂದು ನಮ್ಮ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಧ್ವನಿ ಎತ್ತುವ ಹಕ್ಕು. ಇಂದು ಎಸ್‌ಐಆರ್‌ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. 13 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಮಾಧ್ಯಮ ವರದಿಗಳು, ಸ್ಥಳೀಯ ವರದಿಗಳು, ಬಿಎಲ್‌ಒ ಹೇಳಿಕೆಗಳು ಹಾಗೂ ಇಬ್ಬರು ಚುನಾವಣಾ ಆಯುಕ್ತರು ಎತ್ತಿರುವ ಪ್ರಶ್ನೆಗಳು ಚುನಾವಣಾ ಪ್ರಕ್ರಿಯೆಯ ಪ್ರಜಾಸತ್ತಾತ್ಮಕ ಸ್ವರೂಪದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ. ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟವರೂ ಸೇರಿದಂತೆ ಅನೇಕರು ಚುನಾವಣಾ ಪ್ರಕ್ರಿಯೆಯಲ್ಲಿನ ವ್ಯತ್ಯಾಸಗಳ ಬಗ್ಗೆ ಪ್ರಶ್ನಿಸುತ್ತಿದ್ದಾರೆಂದು ತಿಳಿಸಿದರು

ಇದೇ ವೇಳೆ ಶಾಂತಿ ಭಂಗದ ವ್ಯಾಖ್ಯಾನವನ್ನೂ ಪ್ರಶ್ನಿಸಿದ ನೇಹಾ ಬೋರಾ ಅವರು, ಶಾಂತಿಯುತವಾಗಿ ಪ್ರತಿಭಟಿಸುವ ನಾಗರಿಕರಿಂದ ಶಾಂತಿ ಭಂಗವಾಗುವುದಿಲ್ಲ; ಬದಲಿಗೆ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಡೆದುಕೊಳ್ಳುವ ರೀತಿಯೇ ಸಮಸ್ಯೆಯಾಗಲಿದೆ. ಪ್ರತಿಭಟನೆಯನ್ನು ನಿಯಂತ್ರಿಸಲು ನಿಯೋಜಿಸಲಾಗಿದ್ದ ಪೊಲೀಸರು ಲಾಠಿ ಬಳಸಿದ್ದಾರೆ, ಮಹಿಳೆಯರ ಬಟ್ಟೆಗಳನ್ನು ಹರಿದಿದ್ದಾರೆ ಮತ್ತು ಪತ್ರಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೂ ಹಿಂಸಾಚಾರ ನಡೆಸಲಾಗಿದೆ.

ದೇಶದ ಮೂಲಭೂತ ಹಕ್ಕಾದ ಮತದಾನದ ಹಕ್ಕಿನ ಮೇಲೆ ದಾಳಿ ನಡೆಯುತ್ತಿರುವಾಗ, ಬೀದಿಗಿಳಿದು ಪ್ರತಿಭಟಿಸುವುದು ನಾಗರಿಕರ ಜವಾಬ್ದಾರಿ ಮಾತ್ರವಲ್ಲ, ಕರ್ತವ್ಯವೂ ಹೌದು. ಪ್ರತಿಭಟನೆಗೆ ಬಂದ ಜನರು ಯಾವುದೇ ಪ್ರಜಾಸತ್ತಾತ್ಮಕವಲ್ಲದ ಕೃತ್ಯದಲ್ಲಿ ತೊಡಗಿರಲಿಲ್ಲ. ಹಿಂಸಾಚಾರ ನಡೆದಿದ್ದರೆ ಅದು ಪೊಲೀಸರ ಕಡೆಯಿಂದ. ಶಾಂತಿ ಕಾಪಾಡಬೇಕಿದ್ದ ಭದ್ರತಾ ಸಿಬ್ಬಂದಿಯೇ ಲಾಠಿ ಬಳಸಿದರು. ಪತ್ರಕರ್ತರು ಮತ್ತು ಸ್ವತಂತ್ರ ಮಾಧ್ಯಮದವರೂ ಹಿಂಸೆಗೆ ಒಳಗಾದರು.

ಮತದಾರರ ಪಟ್ಟಿಯಿಂದ ಮಾನ್ಯ ದಾಖಲೆಗಳಿದ್ದರೂ, ಹಿಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದರೂ ಹೆಸರುಗಳನ್ನು ತೆಗೆದುಹಾಕಲಾದ ಜನರು ಈ ಬಗ್ಗೆ ಪ್ರಶ್ನಿಸುವುದು ಶಾಂತಿ ಭಂಗವಾಗುತ್ತದೆಯೇ ಎಂದು ಪ್ರಶ್ನಿಸಿದರು.

13 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದಾಗ ಅವರು ಮೌನವಾಗಿರಬೇಕೇ? ಬೀದಿಗಿಳಿದು ಪ್ರತಿಭಟಿಸಬಾರದೇ? ಅದನ್ನೇ ಶಾಂತಿ ಎಂದು ಕರೆಯುತ್ತೀರಾ? ಅನ್ಯಾಯದ ವಿರುದ್ಧ ಪ್ರಶ್ನೆ ಕೇಳಲು ಅವಕಾಶವಿಲ್ಲದಿದ್ದರೆ, ಸರ್ಕಾರವನ್ನು ಪ್ರಶ್ನಿಸದಿರುವುದೇ ಶಾಂತಿಯೇ? ಸಾಮಾನ್ಯ ನಾಗರಿಕರಿಗೆ ಶಾಂತಿಯುತ ಪ್ರತಿಭಟನೆ ಮತ್ತು ಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸುವುದನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲ. ಈ ಪ್ರಶ್ನೆಯೇ ನಮ್ಮ ಹೋರಾಟದ ಕೇಂದ್ರಬಿಂದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಾಡಿಗೆ ಡೀಸೆಲ್ ತುಂಬಿಸುವಾಗ ಜಿಲೆಟಿನ್ ಸ್ಫೋಟ: ದುರಂತದಲ್ಲಿ ಶಾಲಾ ಶಿಕ್ಷಕಿ ಸೇರಿ ಐವರ ದಾರುಣ ಸಾವು!

India vs New Zealand: ಟೀಂ ಇಂಡಿಯಾಗೆ 4 ವಿಕೆಟ್​ಗಳ ರೋಚಕ ಗೆಲುವು; ಕಿವೀಸ್​ಗೆ ಸತತ 2ನೇ ಸೋಲು

ಸ್ಟಿಂಗ್ ಪ್ರಕರಣದಲ್ಲಿ ನಾಪತ್ತೆಯಾದವರು HDK ಎಡಗೈ-ಬಲಗೈ ಬಂಟರೇ; ಇಂದಲ್ಲ, ನಾಳೆ ಸತ್ಯ ಆಚೆ ಬರುತ್ತೆ: ಪ್ರಿಯಾಂಕ್ ಖರ್ಗೆ

ದರ್ಶನ್ ಜೈಲಿಂದ ಹೊರಬರೋದು ಪತ್ನಿ ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಧನ್ವೀರ್ ಆಡಿಯೋ ಬೆನ್ನಲ್ಲೇ ಸ್ನೇಹಿತನ ಆಡಿಯೋ ವೈರಲ್!

ಸಿಜೆಪಿ ಪ್ರತಿಭಟನೆ: ಪೆಲೆಟ್ ಗನ್ ಬಳಕೆ ಕುರಿತು ಸಾಕ್ಷ್ಯಗಳ ಮಾಹಿತಿ ಕಲೆಹಾಕಲಿರುವ ಸುಪ್ರೀಂ ಕೋರ್ಟ್ ಉನ್ನತ ಸಮಿತಿ!