ರಾಹುಲ್ ಗಾಂಧಿ 
ದೇಶ

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: 2018ರ ಮಾನನಷ್ಟ ಮೊಕದ್ದಮೆ ಕೇಸ್ ವಜಾಗೊಳಿಸಿದ ಸುಲ್ತಾನ್‌ಪುರ ಕೋರ್ಟ್..!

ಪ್ರಕರಣದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಸೋಮವಾರ ದೆಹಲಿಯಿಂದ ಸುಲ್ತಾನ್‌ಪುರಕ್ಕೆ ಆಗಮಿಸಿ ನ್ಯಾಯಾಲಯದ ವಿಚಾರಣೆಯಲ್ಲಿ ಖುದ್ದು ಹಾಜರಿದ್ದರು.

ಲಖನೌ: ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಸುಲ್ತಾನ್‌ಪುರದ ವಿಶೇಷ ಎಂಪಿ/ಎಮ್‌ಎಲ್‌ಎ ನ್ಯಾಯಾಲಯವು ದೊಡ್ಡ ಕಾನೂನು ರಿಲೀಫ್ ನೀಡಿದೆ.

2018 ರಲ್ಲಿ ದಾಖಲಾಗಿದ್ದ ಬಹುಚರ್ಚಿತ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಿ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಸೋಮವಾರ ದೆಹಲಿಯಿಂದ ಸುಲ್ತಾನ್‌ಪುರಕ್ಕೆ ಆಗಮಿಸಿ ನ್ಯಾಯಾಲಯದ ವಿಚಾರಣೆಯಲ್ಲಿ ಖುದ್ದು ಹಾಜರಿದ್ದರು.

2018 ರ ಆಗಸ್ಟ್‌ನಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯೊಂದನ್ನು ನಡೆಸಿದ್ದರು.

ಈ ವೇಳೆ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಸ್ತುತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ರಾಹುಲ್ ಗಾಂಧಿ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಬಿಜೆಪಿಯ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನಿಸುವಾಗ ರಾಹುಲ್ ಗಾಂಧಿ ಬಳಸಿದ್ದ ಕೆಲವು ಪದಗಳು ವಿವಾದಕ್ಕೆ ಕಾರಣವಾಗಿದ್ದವು.

ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ವಿರೋಧಿಸಿ ಸುಲ್ತಾನ್‌ಪುರದ ಬಿಜೆಪಿ ನಾಯಕ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ವಿಜಯ್ ಮಿಶ್ರಾ ಅವರು ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ಈ ಹಿಂದೆ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಫೆಬ್ರವರಿ 2024 ರಲ್ಲಿ ತಮ್ಮ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯನ್ನು ಅರ್ಧಕ್ಕೆ ನಿಲ್ಲಿಸಿದ್ದ ರಾಹುಲ್ ಗಾಂಧಿ, ಸುಲ್ತಾನ್‌ಪುರ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಜಾಮೀನು ಪಡೆದುಕೊಂಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಉಭಯ ಪಕ್ಷಗಳ ಪರ ವಕೀಲರು ಸುದೀರ್ಘ ವಾದ-ಪ್ರತಿವಾದಗಳನ್ನು ಮಂಡಿಸಿದ್ದರು.

ವಾದ-ಪ್ರತಿವಾದಗಳನ್ನು ಆಲಿಸಿದ ವಿಶೇಷ ನ್ಯಾಯಾಲಯವು, ದೂರಿನಲ್ಲಿ ಸೂಕ್ತ ಆಧಾರಗಳಿಲ್ಲದ ಕಾರಣ ಪ್ರಕರಣವನ್ನು ವಜಾಗೊಳಿಸಿ ರಾಹುಲ್ ಗಾಂಧಿ ಅವರನ್ನು ದೋಷಮುಕ್ತಗೊಳಿಸಿದೆ.

ನ್ಯಾಯಾಲಯದ ಈ ತೀರ್ಪು ಕಾಂಗ್ರೆಸ್ ವಲಯದಲ್ಲಿ ಸಂಭ್ರಮ ತಂದಿದ್ದು, ಕಾನೂನು ಹೋರಾಟದಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಿದ್ದಾರೆ.

ತೀರ್ಪು ಪ್ರಕಟಕ್ಕೂ ಮುನ್ನ ಪ್ರಕರಣದ ದೂರುದಾರ ವಿಜಯ್ ಮಿಶ್ರಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದರು.

ಆಗಿನ ನಮ್ಮ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ರಾಹುಲ್ ನಡೆದುಕೊಂಡ ರೀತಿಯನ್ನು ಗಮನಿಸಿದರೆ ನಮಗೆ ನ್ಯಾಯ ಸಿಗುವ ಭರವಸೆಯಿದೆ. 2018ರಿಂದ 2026ರವರೆಗೆ ಈ ಕಾನೂನು ಹೋರಾಟ ಮುಂದುವರಿದಿದೆ. ಇಂದು ತೀರ್ಪು ಪ್ರಕಟವಾಗಲಿದ್ದು, ನಮ್ಮ ವಕೀಲರು ಪ್ರಕರಣವನ್ನು ಸಮರ್ಥವಾಗಿ ವಾದಿಸಿರುವುದರಿಂದ ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ವಿಶ್ವಾಸವಿದೆ ಎಂದು ಮಿಶ್ರಾ ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ: ಆ್ಯಂಬುಲೆನ್ಸ್ ಸೇರಿ ಹಲವರು ವಾಹನಗಳಿಗೆ ಡಿಕ್ಕಿ; ಕೂದಲೆಳೆ ಅಂತರದಲ್ಲಿ ವಿಪಕ್ಷ ನಾಯಕ ಪಾರು, ಹಲವರಿಗೆ ಗಾಯ..!

ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು!

ಬ್ರೆಜಿಲ್ ನಲ್ಲಿ ಟ್ರಂಪ್ ವಿರೋಧಿ ಲೂಯಿಜ್ ಇನಾಸಿಯೊ ಲುಲಾಗೆ ಮತ್ತೆ ಅಧಿಕಾರ; ನಾಲ್ಕನೇ ಬಾರಿಗೆ ಅಧ್ಯಕ್ಷ ಸ್ಥಾನ

ಭಾರತ 'ತೈಲ ಶುದ್ಧೀಕರಣದ ಸೂಪರ್ ಪವರ್' ರಾಷ್ಟ್ರವೆಂದು ಜಗತ್ತಿನ ಇತರ ರಾಷ್ಟ್ರಗಳಿಗೆ ಗೊತ್ತಾದದ್ದು ಹೇಗೆ?

ರೆಸ್ಟೋರೆಂಟ್ ನಲ್ಲಿ ಜಿನ್ನಾ ಫೋಟೊ ವಿವಾದ: ಮುಸ್ಲಿಂ ಮನೆಗೆ ಹೋಗಿ ಕೇರಳ ಕಾಂಗ್ರೆಸ್​ ನಾಯಕರು ಹಂದಿಮಾಂಸ ಕೇಳುತ್ತಾರಾ?: ರಾಜೀವ್​ ಚಂದ್ರಶೇಖರ್