ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ 'ಮೋದಿ ಕಾ ಬಾಪ್ ಭೀ ಜಾಯೇಗಾ' ಹೇಳಿಕೆಗೆ ಸಂಬಂಧಿಸಿದಂತೆ ಉಂಟಾಗಿರುವ ತೀವ್ರ ವಿವಾದದ ನಡುವೆಯೇ, 'ಇದೊಂದು ಸಾಮಾನ್ಯ ನುಡಿಗಟ್ಟು ಮಾತ್ರವಾಗಿದ್ದು, ಯಾರ ತಂದೆಯನ್ನೂ ಅವಮಾನಿಸುವ ಉದ್ದೇಶವಿಲ್ಲದಿರುವುದರಿಂದ, ಈ ವಿಷಯವನ್ನು ದೊಡ್ಡದಾಗಿ ಬಿಂಬಿಸುವ ಅಥವಾ ಗದ್ದಲವೆಬ್ಬಿಸುವ ಅಗತ್ಯವಿಲ್ಲ ಎಂದು ಪಕ್ಷದ ಸಂಸದ ಶಶಿ ತರೂರ್ ಸೋಮವಾರ ಹೇಳಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಪ್ರೇಕ್ಷಕರಲ್ಲೊಬ್ಬರು 'ಪ್ರಧಾನಿ ಎಲ್ಲಿಗೂ ಹೋಗುವುದಿಲ್ಲ' ಎಂದು ಹೇಳಿದಾಗ, ಅದಕ್ಕೆ ಪ್ರತಿಕ್ರಿಯೆಯಾಗಿ ಖರ್ಗೆ ಅವರು 'ಮೋದಿ ಕಾ ಬಾಪ್ ಭೀ ಜಾಯೇಗಾ' (ಮೋದಿಯವರ ಅಪ್ಪ ಕೂಡ ಹೋಗಬೇಕಾಗುತ್ತದೆ) ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿರುವ ಖರ್ಗೆ ಅವರ ಹೇಳಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶಶಿ ತರೂರ್, 'ನಮ್ಮ ದೇಶದ ಜನರಿಗೆ ಇಡೀ ವಿಷಯವನ್ನು ಅಥವಾ ಈ ಸನ್ನಿವೇಶವನ್ನು ಅತಿಯಾಗಿ ದೊಡ್ಡದು ಮಾಡಿ ತೋರಿಸುವ ಅಭ್ಯಾಸವಿದೆ ಎಂದು ನನಗನ್ನಿಸುತ್ತದೆ' ಎಂದರು.
'ಖರ್ಗೆ ಸಾಹೇಬರು ಏನನ್ನೋ ಹೇಳಿದ್ದಾರೆ; ಅವರು ಏನು ಹೇಳಲು ಉದ್ದೇಶಿಸಿದ್ದರೋ ಅದರ ಅರ್ಥ ಬಹಳ ಸ್ಪಷ್ಟವಾಗಿದೆ. ಹೀಗಾಗಿ, ಈ ವಿಷಯವನ್ನು ಇಷ್ಟೊಂದು ದೊಡ್ಡದಾಗಿ ಬಿಂಬಿಸುವ ಅಥವಾ ಅನಗತ್ಯ ಗದ್ದಲ ಎಬ್ಬಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಸಹಜವಾಗಿಯೇ ಒಂದು ಸಾಮಾನ್ಯ ನುಡಿಗಟ್ಟನ್ನು ಬಳಸಿದ್ದರು ಅಷ್ಟೇ. ಅವರು ಯಾರ ತಂದೆಯನ್ನೂ ಅವಮಾನಿಸುತ್ತಿರಲಿಲ್ಲ' ಎಂದು ಇಲ್ಲಿ ನಡೆದ 12ನೇ ಬ್ರಿಕ್ಸ್ (BRICS) ಸಂಸದೀಯ ವೇದಿಕೆಯ ಸಂದರ್ಭದಲ್ಲಿ ಶಶಿ ತರೂರ್ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಖರ್ಗೆ ಮಾಡಿದ್ದ ಟೀಕೆಗಳನ್ನು 'ಅತ್ಯಂತ ದುರದೃಷ್ಟಕರ' ಎಂದು ಬಣ್ಣಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇದು ಪ್ರಮುಖ ವಿರೋಧ ಪಕ್ಷವು ಕೇವಲ ರಾಜಕೀಯವಾಗಿ ಮಾತ್ರವಲ್ಲದೆ, ಸೈದ್ಧಾಂತಿಕವಾಗಿಯೂ ಕುಸಿದಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀಕೃಷ್ಣ ಸಿಂಗ್ ಅವರ 139ನೇ ಜನ್ಮದಿನದ ಅಂಗವಾಗಿ ಪಾಟ್ನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಮಾತನಾಡಿದ್ದರು.
ಖರ್ಗೆ ಹೇಳಿಕೆಗಳ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಂಗ್, ಇದು 'ಅತ್ಯಂತ ದುರದೃಷ್ಟಕರ'. ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗಳು ದೇಶದ ಕೋಟ್ಯಂತರ ಜನರ ಭಾವನೆಗಳಿಗೆ ನೋವುಂಟುಮಾಡಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.