ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಧೈರ್ಯವಿದ್ದರೆ ಸಂಸತ್ತನ್ನು ವಿಸರ್ಜಿಸಿ, ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲಿ’ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.
ಪ್ರಸ್ತುತ ಆಡಳಿತದ ಬಗ್ಗೆ ಜನರು ಅಸಮಾಧಾನಗೊಂಡಿದ್ದು, ನ್ಯಾಯಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದು ಹೇಳಿದರು. ಕ್ಷುಲ್ಲಕ ಟೀಕೆಗಳಲ್ಲಿ ತೊಡಗುವ ಬದಲು ಬೆಲೆ ಏರಿಕೆ, ನಿರುದ್ಯೋಗ ಹಾಗೂ ಯುವಜನರ ಸಮಸ್ಯೆಗಳಂತಹ ಪ್ರಮುಖ ವಿಷಯಗಳ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಅಣಕು ಸಂಸತ್ತಿನಲ್ಲಿ ಮಂಡಿಸಲಾಗುತ್ತಿರುವ ಮಹಾಭಿಯೋಗ ನಿರ್ಣಯದ ಬಗ್ಗೆಯೂ ಖರ್ಗೆ ಪ್ರಸ್ತಾಪಿಸಿದರು.
ಒಂದು ಕಾಲದಲ್ಲಿ ಸಂಸತ್ತಿನಲ್ಲಿ ಕೇವಲ ಎರಡು ಸ್ಥಾನಗಳನ್ನು ಹೊಂದಿದ್ದ ಆಡಳಿತಾರೂಢ ಬಿಜೆಪಿಯ ಹಿಂದಿನ ಸ್ಥಿತಿಯನ್ನು ನೆನಪಿಸಿದ ಖರ್ಗೆ, ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.