ಅಮಿತ್ ಶಾ  
ದೇಶ

2027ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ' ಜಾರಿಗೆ- ಅಮಿತ್ ಶಾ ಭರವಸೆ

ಲಖನೌದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಈಗಾಗಲೇ ಹಲವು ರಾಜ್ಯಗಳಲ್ಲಿ ಯುಸಿಸಿ ಜಾರಿಯಲ್ಲಿದೆ. ಮತದಾರರು ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಿದರೆ, ಉತ್ತರ ಪ್ರದೇಶದಲ್ಲೂ ಇದನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಲಖನೌ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿ ಇರುವಂತೆಯೇ ರಾಜ್ಯದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ 'ಏಕರೂಪ ನಾಗರಿಕ ಸಂಹಿತೆ'ಯನ್ನು (Uniform Civil Code - UCC) ಜಾರಿಗೊಳಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷಿಸಿದ್ದಾರೆ.

ಲಖನೌದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಈಗಾಗಲೇ ಹಲವು ರಾಜ್ಯಗಳಲ್ಲಿ ಯುಸಿಸಿ ಜಾರಿಯಲ್ಲಿದೆ. ಮತದಾರರು ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡಿದರೆ, ಉತ್ತರ ಪ್ರದೇಶದಲ್ಲೂ ಇದನ್ನು ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

"ಈ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಉತ್ತರ ಪ್ರದೇಶದಲ್ಲಿ ಯುಸಿಸಿ ಜಾರಿಯಾಗಲಿದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ನೀವು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ತಂದರೆ, ನಾವು ಇಲ್ಲಿ ಯುಸಿಸಿ ಜಾರಿಗೊಳಿಸುತ್ತೇವೆ ಎಂದು ಶಾ ಪಕ್ಷದ ಸಹೋದ್ಯೋಗಿಗಳಿಗೆ ಹೇಳಿದರು.

ಮತ ಗಳ್ಳತನ ಆರೋಪಗಳು ಮತ್ತು ಪ್ರತಿಭಟನೆಗಳ ನಡುವೆ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ ಅಮಿತ್ ಶಾ, ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಬಿಜೆಪಿ ಸಿದ್ಧವಿದೆ ಎಂದು ಹೇಳಿದರು. ಈ ವಿಷಯದ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ವಿಪಕ್ಷಗಳಿಗೆ ಸವಾಲು ಹಾಕಿದರು. ಸಭೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಿಂದಿನ ಚುನಾವಣಾ ಸಾಧನೆಗಳನ್ನು ಉಲ್ಲೇಖಿಸಿದ ಶಾ, ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಸಿದ್ಧರಾಗುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಪಕ್ಷದ ಚುನಾವಣಾ ಪ್ರಯಾಣವನ್ನು ನೆನಪಿಸಿಕೊಂಡ ಶಾ, 2014ರಲ್ಲಿ ಬಿಜೆಪಿಗೆ ಕೇವಲ 44 ಶಾಸಕರು (MLA) ಮಾತ್ರ ಇದ್ದರು. ಪಕ್ಷವನ್ನು ಬಲಪಡಿಸಲು ತಾವು ತಹಸಿಲ್ ಮಟ್ಟದವರೆಗೂ ಸಂಚರಿಸಿದ್ದಾಗಿ ಅವರು ವಿವರಿಸಿದರು. "ಸಂಘಟನೆಯನ್ನು ಸರಿಯಾದ ಹಾದಿಗೆ ತಂದ ನಂತರ, 2014ರಲ್ಲಿ ನಾವು ಉತ್ತರ ಪ್ರದೇಶದಲ್ಲಿ ಶೇಕಡಾ 41ರಷ್ಟು ಮತಗಳೊಂದಿಗೆ 73 ಸ್ಥಾನಗಳನ್ನು ಗೆದ್ದುಕೊಂಡೆವು ಎಂದು ಅವರು ಹೇಳಿದರು.

2017ರ ವಿಧಾನಸಭಾ ಚುನಾವಣೆಗಳನ್ನು ಉಲ್ಲೇಖಿಸಿದ ಶಾ, ಚುನಾವಣೆಗೂ ಮುನ್ನ ನೋಟು ಅಮಾನ್ಯೀಕರಣ ನಡೆದಿತ್ತು ಮತ್ತು ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ರಾತ್ರಿಯಿಡೀ ನಿದ್ರೆ ಬಂದಿರಲಿಲ್ಲ. ನಾವು ಶೇಕಡಾ 40ರಷ್ಟು ಮತಗಳೊಂದಿಗೆ 312 ಸ್ಥಾನಗಳನ್ನು ಗೆದ್ದೆವು ಎಂದು ಅವರು ತಿಳಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ನಡೆದ ಬಿಜೆಪಿ ಉತ್ತರ ಪ್ರದೇಶ ರಾಜ್ಯ ಕಾರ್ಯಕಾರಿಣಿ ಸಭೆಗೆ ಅಮಿತ್ ಶಾ ಚಾಲನೆ ನೀಡಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಮ್ ಮನೋಹರ್ ಲೋಹಿಯಾ ನ್ಯಾಷನಲ್ ಲಾ ಯೂನಿವರ್ಸಿಟಿಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಹಾಗೂ ಪಕ್ಷದ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಸಾರ್ವಜನಿಕ ದೋಷಾರೋಪಣೆ ದಿಢೀರ್ ಮುಂದೂಡಿದ INDIA!

ಬೆಂಗಳೂರು: ಡೇಟಿಂಗ್​ಗಾಗಿ ಯುವತಿ ಬುಕ್ ಮಾಡಿದ ಯುವಕ; ಮನೆಗೆ ಬಂದಿದ್ದು ಟ್ರಾನ್ಸಜೆಂಡರ್! ಮುಂದೆ ಆಗಿದ್ದೇನು?

ನ್ಯಾಯಾಂಗ ನಿಂದನೆ ಆರೋಪ: CJP ನಾಯಕ ಸೌರವ್ ದಾಸ್ ಹಿನ್ನೆಲೆ ಕುರಿತು ತನಿಖೆ, passport-Aadhaar card ರದ್ದು ಕೋರಿ PIL; ಕೇಂದ್ರ ಸರ್ಕಾರಕ್ಕೆ Madras ಹೈಕೋರ್ಟ್ ನೋಟಿಸ್..!

ಬದರಿನಾಥದಿಂದ ಡೆಹ್ರಾಡೂನ್ ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನ! ಆರು ಮಂದಿ ಸಾವನ್ನಪ್ಪಿರುವ ಸಾಧ್ಯತೆ

ಕಾಶ್ಮೀರಿಗಳ ಪರವಾಗಿ ಮಾತನಾಡಿದ UK ಕೌನ್ಸಿಲರ್‌ನನ್ನು ವಶಕ್ಕೆ ಪಡೆದ ಪಾಕಿಸ್ತಾನ; ವಾಪಸ್ ತೆರಳದಂತೆ ನಿರ್ಬಂಧ