ಹೈದರಾಬಾದ್: ಮಲೇರಿಯಾ ನಿಯಂತ್ರಣಕ್ಕೆ ನೀಡಿದ್ದ ಮಾತ್ರೆಗಳ ಅಡ್ಡ ಪರಿಣಾಮದಿಂದ ಬಾಲಕಿಯೋರ್ವಳು ಸಾವನ್ನಪ್ಪಿದ್ದು, ಇತರೆ 53 ಜನರು ಅಸ್ವಸ್ಥರಾಗಿರುವ ಘಟನೆ ಆಂಧ್ರಪ್ರದೇಶದ ಪೋಲಾವರಂ ಜಿಲ್ಲೆಯಲ್ಲಿ ನಡೆದಿದೆ.
ಮಂಗಳವಾರ ಎಟಪಕ ತಾಲೂಕಿನ ಗೊಲ್ಲಗುಪ್ಪ ಗ್ರಾಮಕ್ಕೆ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿ, ಮಲೇರಿಯಾ ನಿಯಂತ್ರಣಕ್ಕಾಗಿ 71 ಜನರಿಗೆ ಕ್ಲೋರೋಕ್ವಿನ್ ಮಾತ್ರೆಗಳನ್ನು ವಿತರಿಸಿದ್ದರು. ಶಾಲೆಗಳಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಈ ಮಾತ್ರೆಗಳನ್ನು ನೀಡಲಾಗಿತ್ತು.
ಆದ್ರೆ ಗ್ರಾಮದ ಮದಿವಿ ಜಮುನಾ (7) ಎಂಬ ವಿದ್ಯಾರ್ಥಿನಿ ಸಂಜೆ ಮನೆಗೆ ಮರಳಿದ ಬಳಿಕ ವಾಂತಿ ಮಾಡಿಕೊಂಡಿದ್ದಳು. ನಂತರ ಆಕೆಯನ್ನು ಕುಟುಂಬದವರು ಲಕ್ಷ್ಮಿಪುರಂ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ ಅಷ್ಟರಲ್ಲೇ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು.
ಬಾಲಕಿಯು ಮೂರು ಮಾತ್ರೆಗಳನ್ನು ಸೇವಿಸಿದ್ದಾಳೆ ಎಂದು ವರದಿಯಾಗಿದೆ. ನಂತರ, ಶಾಲಾ ಮಕ್ಕಳು ಮತ್ತು ಗ್ರಾಮದ ಅಂಗನವಾಡಿ ಕೇಂದ್ರಗಳ ಮಕ್ಕಳು ಸೇರಿದಂತೆ ಇತರೆ 53 ಜನರು ಅಸ್ವಸ್ಥರಾಗಿದ್ದಾರೆ. ಅವರೆಲ್ಲರನ್ನೂ ತೆಲಂಗಾಣದ ಭದ್ರಾಚಲಂನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಸ್ವಸ್ಥರಲ್ಲಿ 46 ಮಕ್ಕಳು ಮತ್ತು ಏಳು ಮಂದಿ ವಯಸ್ಕರು ಇದ್ದು ಮತ್ತು ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ.
ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ: ಕ್ಲೋರೋಕ್ವಿನ್ ಮಾತ್ರೆಗಳ ಅಡ್ಡ ಪರಿಣಾಮದಿಂದ ಬಾಲಕಿಯೊಬ್ಬಳು ಸಾವನ್ನಪ್ಪಿದ ವರದಿಗಳ ನಂತರ ಮುಖ್ಯಮಂತ್ರಿ ಚಂದ್ರಬಾಬು ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಅಸ್ವಸ್ಥರಿಗೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯನ್ನು ನೀಡುವಂತೆ ಆದೇಶಿಸಿದರು ಮತ್ತು ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.