ನಶಾ ಮುಕ್ತ ಭಾರತ (ಸಾಂದರ್ಭಿಕ ಚಿತ್ರ) 
ದೇಶ

‘ನಶಾ ಮುಕ್ತ ಭಾರತ’ ಅಭಿಯಾನ: ಕೇರಳ, ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ED ಭರ್ಜರಿ ದಾಳಿ, 30 ಕಡೆ ಶೋಧ

ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ಒಟ್ಟು 30 ಸ್ಥಳಗಳಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ‘ನಶಾ ಮುಕ್ತ ಭಾರತ’ (ಮಾದಕ ವಸ್ತು ಮುಕ್ತ ಭಾರತ) ಅಭಿಯಾನದಡಿ ಜಾರಿ ನಿರ್ದೇಶನಾಲಯ (ED) ಗುರುವಾರ ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದೆ.

ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳ ಒಟ್ಟು 30 ಸ್ಥಳಗಳಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳ ತನಿಖಾ ಸಂಸ್ಥೆಗಳು ಹಾಗೂ ಮಾದಕ ವಸ್ತು ನಿಯಂತ್ರಣ ಬ್ಯೂರೋ (NCB) ದಾಖಲಿಸಿರುವ ಹಲವು ಮಾದಕ ವಸ್ತು ಸಂಬಂಧಿತ ಪ್ರಕರಣಗಳ ಆರೋಪಿಗಳು ಹಾಗೂ ಶಂಕಿತರೊಂದಿಗೆ ಸಂಪರ್ಕ ಹೊಂದಿರುವ 30 ಸ್ಥಳಗಳಲ್ಲಿ ED ಏಕಕಾಲದಲ್ಲಿ ಶೋಧ ನಡೆಸಿದೆ.

ಈ ಪ್ರಕರಣಗಳನ್ನು 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ED ತನಿಖೆ ನಡೆಸುತ್ತಿದೆ. PMLA ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ಈ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ತಮಿಳುನಾಡಿನ ಚೆನ್ನೈನಲ್ಲಿ 7 ಸ್ಥಳಗಳು, ರಾಮನಾಥಪುರಂನಲ್ಲಿ 2, ನಾಗಪಟ್ಟಿಣಂ ಮತ್ತು ವೇಲಾಂಕಣ್ಣಿಯಲ್ಲಿ 6 ಹಾಗೂ ತಿರುನೆಲ್ವೇಲಿಯಲ್ಲಿ ಒಂದು ಸ್ಥಳದಲ್ಲಿ ಶೋಧ ನಡೆದಿದೆ.

ಕರ್ನಾಟಕದ ಕೋಲಾರ, ಮಾಲೂರು ಮತ್ತು ಹೊಸಕೋಟೆ ಪ್ರದೇಶಗಳಲ್ಲಿ 3 ಸ್ಥಳಗಳಲ್ಲೂ ಕಾರ್ಯಾಚರಣೆ ನಡೆದಿದೆ. ತೆಲಂಗಾಣದ ಕೆಲ ಪ್ರದೇಶಗಳಲ್ಲೂ ಶೋಧ ನಡೆಸಲಾಗಿದೆ. ಕೇರಳದ ಕೊಚ್ಚಿ, ಕೋಯಿಕ್ಕೋಡ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಆರೋಪಿಗಳಿಗೆ ಸಂಬಂಧಿಸಿದ ತಲಾ ನಾಲ್ಕು ಸ್ಥಳಗಳಲ್ಲೂ ED ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗುರುವಾರ ಮುಂಜಾನೆಯೇ ಭದ್ರತಾ ಸಿಬ್ಬಂದಿ ಹಾಗೂ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳ ಸಹಕಾರದೊಂದಿಗೆ ದಾಳಿ ಆರಂಭಿಸಲಾಯಿತು. PMLA ಅಡಿಯಲ್ಲಿ ED ತನಿಖೆ ನಡೆಸುತ್ತಿರುವ 8 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಶೋಧ ಕಾರ್ಯಾಚರಣೆ ನಡೆದಿದೆ. ಈ ಪೈಕಿ 4 ಪ್ರಕರಣಗಳು ತಮಿಳುನಾಡಿಗೆ, 2 ಕೇರಳಕ್ಕೆ ಹಾಗೂ ತಲಾ ಒಂದು ಪ್ರಕರಣ ಕರ್ನಾಟಕ ಮತ್ತು ತೆಲಂಗಾಣಕ್ಕೆ ಸಂಬಂಧಿಸಿವೆ.

“ನಶಾ ಮುಕ್ತ ಭಾರತ ಅಭಿಯಾನದಡಿ ದಕ್ಷಿಣ ಭಾರತದ ಎಲ್ಲ ವಲಯಗಳಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಒಟ್ಟು 30 ಸ್ಥಳಗಳಲ್ಲಿ ED ಏಕಕಾಲದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಕೇರಳ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಸ್ಥಳಗಳು ಹರಡಿಕೊಂಡಿವೆ. PMLA ಅಡಿಯಲ್ಲಿ ತನಿಖೆ ನಡೆಯುತ್ತಿರುವ 8 ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಶೋಧ ನಡೆಯುತ್ತಿದೆ. ತನಿಖೆ ಮುಂದುವರಿದಿದೆ” ಎಂದು ಕಾರ್ಯಾಚರಣೆಗೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಪ್ರಕರಣದಲ್ಲೇ ಕೆಜಿಗಟ್ಟಲೆ ಮೆಥಾಂಫೆಟಮೈನ್ ವಶಕ್ಕೆ

ತಮಿಳುನಾಡಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ 2024ರ ಜೂನ್ 11ರಂದು NCB, ಶ್ರೀಲಂಕಾ ಪ್ರಜೆಗಳಾದ ಎನ್. ಅಜಂತನ್ ಮತ್ತು ಕೆ. ಮಧುಶನ್ ಅವರನ್ನು ರಾಮನಾಥಪುರಂನ ಮಂಡಪಂ ನಿರಾಶ್ರಿತರ ಶಿಬಿರದಲ್ಲಿ ತಡೆದು ಪರಿಶೀಲಿಸಿತ್ತು. ಅವರ ಬಳಿಯಿಂದ 1.470 ಕೆಜಿ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿತ್ತು.

ಇದಾದ ಮೂರು ದಿನಗಳ ಬಳಿಕ, ಜೂನ್ 14ರಂದು ಚೆನ್ನೈನಲ್ಲಿನ ಒಂದು ಅಂಗಡಿಯಲ್ಲಿ ಮೊಹಮ್ಮದ್ ರಿಜಾಲುದ್ದೀನ್‌ನಿಂದ ಹಣ ಸ್ವೀಕರಿಸುತ್ತಿದ್ದ ಕೆ. ಕೃಷ್ಣ ಕುಮಾರಿ ಅವರನ್ನು NCB ತಡೆದು ಪರಿಶೀಲಿಸಿತ್ತು. ಈ ವೇಳೆ 1.29 ಲಕ್ಷ ರೂ ಭಾರತೀಯ ಕರೆನ್ಸಿ, 30,000 ಅಮೆರಿಕನ್ ಡಾಲರ್ ಹಾಗೂ 5,030 ಶ್ರೀಲಂಕನ್ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಅಂಗಡಿಯನ್ನು ದುಬೈನಲ್ಲಿ ವಾಸಿಸುತ್ತಿದ್ದ ಎಸ್. ನಿಸಾರ್ದೀನ್ ಪರವಾಗಿ ಮೊಹಮ್ಮದ್ ರಿಜಾಲುದ್ದೀನ್ ಎಂಬಾತ ನಡೆಸುತ್ತಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಕ್ರಮ ಹವಾಲಾ ವಹಿವಾಟುಗಳಿಗೆ ಈ ಸ್ಥಳವನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ. ವಶಪಡಿಸಿಕೊಂಡ ಹಣವು ಶ್ರೀಲಂಕಾಕ್ಕೆ ಸಾಗಿಸಲಾಗುತ್ತಿದ್ದ ಮೆಥಾಂಫೆಟಮೈನ್ ಮಾರಾಟದಿಂದ ಬಂದ ಹಣಕ್ಕೆ ಸಂಬಂಧಿಸಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಕೇವಲ ಮೆಥಾಂಫೆಟಮೈನ್ ಸಾಗಾಟವಷ್ಟೇ ಅಲ್ಲದೆ, ಅದರಿಂದ ಬಂದ ಹಣದ ಸೃಷ್ಟಿ, ಸ್ವೀಕೃತಿ ಹಾಗೂ ವರ್ಗಾವಣೆಯೂ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

PMLA ಅಡಿಯಲ್ಲಿ ನಡೆದ ತನಿಖೆಯಲ್ಲಿ ಮೆಥಾಂಫೆಟಮೈನ್ ಖರೀದಿ ಹಾಗೂ ಹಣಕಾಸು ವ್ಯವಸ್ಥೆ, ಅದರ ಸಾಗಣೆ, ಶ್ರೀಲಂಕಾಕ್ಕೆ ಮುಂದಿನ ಹಂತದಲ್ಲಿ ಕಳುಹಿಸುವ ವ್ಯವಸ್ಥೆ ಮತ್ತು ಹವಾಲಾ ಮೂಲಕ ಹಣದ ಪಾವತಿ ಸೇರಿದಂತೆ ವಿವಿಧ ವ್ಯಕ್ತಿಗಳು ಪ್ರತ್ಯೇಕ ಜವಾಬ್ದಾರಿಗಳನ್ನು ನಿರ್ವಹಿಸಿರುವುದು ಪತ್ತೆಯಾಗಿದೆ. ನಿಸಾರ್ದೀನ್, ರಿಜಾಲುದ್ದೀನ್ ನಡೆಸುತ್ತಿದ್ದ ಮಂಡಿ ಪ್ರದೇಶದ ಹವಾಲಾ ಕೇಂದ್ರದೊಂದಿಗೆ ಸಂಪರ್ಕ ಹೊಂದಿದ್ದ ಎಂದು ED ಹೇಳಿದೆ.

ಅಲ್ಲಿಂದ ದೊಡ್ಡ ಪ್ರಮಾಣದ ನಗದು ಮತ್ತು ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಈ ವ್ಯವಸ್ಥೆಯನ್ನು ದೂರದಿಂದಲೇ ನಿರ್ವಹಿಸಲಾಗುತ್ತಿತ್ತು ಎನ್ನಲಾಗಿದ್ದು, ‘SACHA’ ಎಂಬ ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಸೂಚನೆಗಳನ್ನು ನೀಡಲಾಗುತ್ತಿತ್ತು. ಕರೆನ್ಸಿ ನೋಟುಗಳ ಟೋಕನ್‌ಗಳ ಆಧಾರದ ಮೇಲೆ ಹಣ ಹಸ್ತಾಂತರಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ರಫಿಯಾ ಸಹಾನಾ ಎಂಬ ಮಹಿಳೆ, ತಮ್ಮ ಹೆಸರಿನಲ್ಲಿರುವ ಆಸ್ತಿಗಳನ್ನು ನಿಸಾರ್ದೀನ್ ಖರೀದಿಸಿ ನಿರ್ವಹಿಸುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ. ಅಪರಾಧದಿಂದ ಬಂದ ಹಣದ ಸೃಷ್ಟಿ, ಹೊಂದಿಕೆ, ಆಸ್ತಿ ಖರೀದಿ, ಮರೆಮಾಚುವಿಕೆ, ವರ್ಗಾವಣೆ ಮತ್ತು ಬಳಕೆಯಲ್ಲಿ ಪ್ರತಿಯೊಬ್ಬರ ಪಾತ್ರವನ್ನು ಪ್ರತ್ಯೇಕವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2ನೇ ಪ್ರಕರಣದಲ್ಲಿ 5.970 ಕೆಜಿ ಮೆಥಾಂಫೆಟಮೈನ್ ವಶ

ತಮಿಳುನಾಡಿನ ಎರಡನೇ ಪ್ರಕರಣವು 2024ರ ಜುಲೈ 24ರಂದು ಚೆನ್ನೈನ ಬಸ್ ನಿಲ್ದಾಣದ ಸಮೀಪ NCB ನಡೆಸಿದ ಕಾರ್ಯಾಚರಣೆಗೆ ಸಂಬಂಧಿಸಿದೆ. ಈ ವೇಳೆ ಬೈಸುಲ್ ರಹ್ಮಾನ್ ಎಂಬಾತನನ್ನು ತಡೆದು ಪರಿಶೀಲಿಸಿದಾಗ ಆತನ ಬಳಿಯಿಂದ 5.970 ಕೆಜಿ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿತ್ತು.

ಈ ಮಾದಕ ವಸ್ತುವನ್ನು ಶ್ರೀಲಂಕಾಕ್ಕೆ ಸಾಗಿಸಲು ಉದ್ದೇಶಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿ ಸಯ್ಯದ್ ಇಬ್ರಾಹಿಂ ಜುಲೈ 24ಕ್ಕೂ ಮುನ್ನ ಚೆನ್ನೈಗೆ ಬಂದಿದ್ದ. ಆತ ಬೈಸುಲ್ ಮತ್ತು ಮನ್ಸೂರ್ ಜೊತೆ ಸಂಪರ್ಕ ಹೊಂದಿದ್ದು, ಈ ಮಾದಕ ವಸ್ತು ವಹಿವಾಟಿನ ವ್ಯವಸ್ಥೆ ಅಥವಾ ಹಣಕಾಸು ನೆರವಿನಲ್ಲಿ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಹಿಂದಿನ ಅಥವಾ ಪ್ರಸ್ತಾವಿತ ಮಾದಕ ವಸ್ತು ಸಾಗಾಟಕ್ಕೆ ಸಂಬಂಧಿಸಿದ ಹಣವನ್ನು ಹವಾಲಾ ಮೂಲಕ ಪಾವತಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ಹೇಳಲಾಗಿದೆ. ಈ ಹವಾಲಾ ಜಾಲದೊಂದಿಗೆ ಮೊಹಮ್ಮದ್ ಇರ್ಫಾನ್ ಎ ಕೂಡ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ NCB 39.38 ಲಕ್ಷ ರೂ ನಗದು, 586 ಗ್ರಾಂ ಚಿನ್ನ ಹಾಗೂ 1 ಕೆಜಿ ಬೆಳ್ಳಿ ವಶಪಡಿಸಿಕೊಂಡಿತ್ತು. PMLA ಅಡಿಯಲ್ಲಿ ED ನಡೆಸಿದ ತನಿಖೆಯಲ್ಲಿ ವಿವಿಧ ಸ್ಥಳಗಳಲ್ಲಿದ್ದ ವ್ಯಕ್ತಿಗಳ ನಡುವೆ ಸಂವಹನ, ನಿಯಂತ್ರಿತ ಮಾದಕ ವಸ್ತುಗಳ ಸಾಗಣೆ, ನಗದು ಅಥವಾ ಹವಾಲಾ ಮೂಲಕ ಹಣದ ಪಾವತಿ ಹಾಗೂ ಮೊಬೈಲ್ ಸಂವಹನ ವ್ಯವಸ್ಥೆಯನ್ನು ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಹೋಟೆಲ್ ಕೊಠಡಿಯಲ್ಲಿತ್ತು 2 ಕೆಜಿ ಮೆಥಾಂಫೆಟಮೈನ್!

ಮೂರನೇ ಪ್ರಕರಣವು 2023ರ ಡಿಸೆಂಬರ್ 10ರಂದು NCB ಚೆನ್ನೈನ ಮಂಡಿಯಲ್ಲಿರುವ ಹೋಟೆಲ್ ವೈಟ್ ಪ್ಯಾಲೇಸ್‌ನ ಕೊಠಡಿ ಸಂಖ್ಯೆ 109ರಲ್ಲಿ ನಡೆಸಿದ ಶೋಧಕ್ಕೆ ಸಂಬಂಧಿಸಿದೆ. ಈ ಕೊಠಡಿಯಲ್ಲಿ ಶ್ರೀಲಂಕಾ ಪ್ರಜೆ ಎಸ್. ಉದಯ ಕುಮಾರ್ ವಾಸಿಸುತ್ತಿದ್ದ. ಶೋಧದ ವೇಳೆ ಆತನ ಬಳಿಯಿಂದ 2 ಕೆಜಿ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿತ್ತು. ಶ್ರೀಲಂಕಾದ ರಾಜನ್ ಎಂಬಾತನ ಸೂಚನೆಯ ಮೇರೆಗೆ ವಾಣಿಜ್ಯ ಪ್ರಮಾಣದ ಮೆಥಾಂಫೆಟಮೈನ್ ಪಡೆಯಲು ಉದಯ ಕುಮಾರ್ ಕೊಲಂಬೊದಿಂದ ಚೆನ್ನೈಗೆ ಬಂದಿದ್ದ ಎಂದು NCB ತನಿಖೆಯಲ್ಲಿ ತಿಳಿದುಬಂದಿದೆ.

ರಾಜನ್‌ನ ಸೂಚನೆಯಂತೆ ಉದಯ ಕುಮಾರ್, ಚೆನ್ನೈನ ಮಂಡಿಯಲ್ಲಿ ಅಕ್ಬರ್ ಅಲಿ ಎಂಬಾತನಿಂದ 2 ಕೆಜಿ ಮೆಥಾಂಫೆಟಮೈನ್ ಪಡೆದಿದ್ದ. ನಂತರ ಅದನ್ನು ಶ್ರೀಲಂಕಾಕ್ಕೆ ಸಾಗಿಸಲು ಮುಂದಿನ ಸೂಚನೆಗಾಗಿ ಕಾಯುತ್ತಿದ್ದ ಎನ್ನಲಾಗಿದೆ. ರಾಜನ್ ಮತ್ತು ಸ್ಥಳೀಯ ಪೂರೈಕೆದಾರ ರಘುರಾಜ್ ಕೆ. ನಡುವೆ ಅಕ್ಬರ್ ಮಧ್ಯವರ್ತಿ ಹಾಗೂ ಸಂಯೋಜಕನಾಗಿ ಕಾರ್ಯನಿರ್ವಹಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅಕ್ಬರ್ ಅಲಿ ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಪದೇಪದೇ ತೊಡಗಿಸಿಕೊಂಡಿದ್ದ ಆರೋಪ ಎದುರಿಸಿದ್ದಾನೆ. 2000ರಲ್ಲಿ ಚೆನ್ನೈನ NDPS ನ್ಯಾಯಾಲಯವು 2 ಕೆಜಿ ಹೆರಾಯಿನ್ ಕಳ್ಳಸಾಗಣೆ ಪ್ರಕರಣದಲ್ಲಿ ಆತನಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. 2010ರಲ್ಲಿ ಆತ ಜೈಲಿನಿಂದ ಬಿಡುಗಡೆಯಾಗಿದ್ದ. ಆಂಧ್ರಪ್ರದೇಶದಲ್ಲೂ ಆತನ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು.

ED ತನಿಖೆಯ ಪ್ರಕಾರ, ಚೆನ್ನೈನ ಬರ್ಮಾ ಬಜಾರ್‌ನಲ್ಲಿರುವ ಅಕ್ಬರ್ ಎನ್. ಎಂಬಾತನ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಯ್ಯದ್ ಇಬ್ರಾಹಿಂ, ಈ ಅಕ್ರಮ ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳಲ್ಲಿ ಸಕ್ರಿಯವಾಗಿ ನೆರವಾಗಿದ್ದಾನೆ ಎನ್ನಲಾಗಿದೆ. ರಾಜನ್‌ನ ಸೂಚನೆಯಂತೆ 2 ಕೆಜಿ ಮೆಥಾಂಫೆಟಮೈನ್ ಖರೀದಿಗಾಗಿ 8 ಲಕ್ಷ ರೂ ಮುಂಗಡ ಹಣವನ್ನು ಹವಾಲಾ ಮಾರ್ಗದ ಮೂಲಕ ಕಳುಹಿಸಲಾಗಿತ್ತು. ಈ ಹಣವನ್ನು ಸಯ್ಯದ್ ಇಬ್ರಾಹಿಂ ಅಕ್ಬರ್‌ಗೆ ತಲುಪಿಸಿದ್ದಾನೆ ಎಂದು ED ತನಿಖೆಯಲ್ಲಿ ತಿಳಿದುಬಂದಿದೆ.

ಇದಲ್ಲದೆ, ಇತರ ಪ್ರಕರಣಗಳಲ್ಲೂ ಭಾರತ ಹಾಗೂ ವಿದೇಶಗಳ ಕೆಲವು ಆರೋಪಿಗಳನ್ನು ಬಂಧಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಇವರಲ್ಲಿ ಮಸ್ಕತ್ ಸೇರಿದಂತೆ ವಿದೇಶಿ ಮೂಲದ ವ್ಯಕ್ತಿಗಳೂ ಇದ್ದಾರೆ. ಮಾದಕ ವಸ್ತು ಕಳ್ಳಸಾಗಣೆ ಹಾಗೂ ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಜಾಲಗಳೊಂದಿಗೆ ಇವರಿಗೆ ಸಂಪರ್ಕವಿದೆ ಎಂಬ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಹಗರಣ: ಕುಮಾರಸ್ವಾಮಿ ವಿರುದ್ದವೇ ಪ್ರಾಸಿಕ್ಯೂಷನ್ ಅಸ್ತ್ರ? ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

Asian Games 2026: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕ

ಜೈಲು ಕೈದಿ ಜೊತೆಗೆ ಸರಸ ಸಲ್ಲಾಪ: PSI ಜಯಶ್ರೀ ಸಸ್ಪೆಂಡ್!

ಹಾಸನ: KSRTC ಬಸ್, ATM ವಾಹನದ ನಡುವೆ ಭೀಕರ ಅಪಘಾತ; ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ

3 ತಿಂಗಳ ಕಂದಮ್ಮನ ಮೇಲೆ ನೆರೆಮನೆಯ ಕಾಮುಕನಿಂದ ಅತ್ಯಾಚಾರ: ಖಾಸಗಿ ಭಾಗದಲ್ಲಿ ರಕ್ತಸ್ರಾವ, ಮಗುವಿನ ಸ್ಥಿತಿ ಗಂಭೀರ!