ರಾಂಚಿ: ಜಾರ್ಖಂಡ್‌ನ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಸುದಿವ್ಯ ಕುಮಾರ್ ಸೋನು ಭಾನುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗಿರಿಧಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸತತ ಎರಡನೇ ಅವಧಿಗೆ ಸೇವೆ ಸಲ್ಲಿಸುತ್ತಿದ್ದ 56 ವರ್ಷದ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನಾಯಕ ಸೋನು ಅವರಿಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಗಿರಿಧಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾರ್ಖಂಡ್ ಸಾರಿಗೆ ಸಚಿವ ಮತ್ತು ಜೆಎಂಎಂ ನಾಯಕ ದೀಪಕ್ ಬಿರುವಾ ಸೋನು ಅವರ ನಿಧನಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ. ಜಾರ್ಖಂಡ್ ಸರ್ಕಾರದಲ್ಲಿ ನನ್ನ ಸಹೋದ್ಯೋಗಿ ಮತ್ತು ಸಹ-ಸಚಿವರಾಗಿದ್ದ ಸುದಿವ್ಯ ಸೋನು ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ.
ನಿನ್ನೆ ರಾತ್ರಿ ಅವರ ಆರೋಗ್ಯ ಹಠಾತ್ತನೆ ಹದಗೆಟ್ಟಿತು.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ನಿಧನರಾಗಿದ್ದಾರೆ. ಇದು ಜೆಎಂಎಂ ಕುಟುಂಬಕ್ಕೆ ತುಂಬಲಾರದ ನಷ್ಟ. ಕಣ್ಣೀರಿನ ವಿದಾಯದ 'ಜೋಹಾರ್', ಸಹೋದರ' ಎಂದು ಬಿರುವಾ ಹೇಳಿದ್ದಾರೆ.