ಸರ್ಕಾರಿ ಜಾಹೀರಾತಿನಲ್ಲಿ ದುರ್ಗಾದೇವಿಗೆ 11 ಕೈಗಳು! ಕ್ಷಮೆಯಾಚಿಸಿದ ಸುವೇಂದು ಅಧಿಕಾರಿ Online Desk
ದೇಶ

ಬಂಗಾಳ ಬಿಜೆಪಿ ಸರ್ಕಾರದಿಂದ ಭಾರೀ ಎಡವಟ್ಟು: ಸರ್ಕಾರಿ ಜಾಹೀರಾತಿನಲ್ಲಿ ದುರ್ಗಾದೇವಿಗೆ 11 ಕೈಗಳು! ಕ್ಷಮೆಯಾಚಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ ಪೊಲೀಸ್ ಮತ್ತು ಮಹಾನಗರ ಪಾಲಿಕೆ ಜಂಟಿಯಾಗಿ ಆಯೋಜಿಸಿದ್ದ ದುರ್ಗಾ ಪೂಜಾ ಸಭೆಯಲ್ಲಿ ದುರ್ಗಾದೇವಿಯ ಚಿತ್ರಕ್ಕೆ 10ರ ಬದಲು 11 ಕೈಗಳನ್ನು ತೋರಿಸಿದ ವಿವಾದವಾಗಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಂಗಾಳದ ಅತ್ಯಂತ ಪವಿತ್ರ ಹಬ್ಬವೆಂದರೆ, ಅದು ದುರ್ಗಾ ಪೂಜೆ. ಆದರೆ, ಈ ಭಾರಿ ಸಿದ್ಧತೆಗಳ ನಡುವೆಯೇ ಅನಿರೀಕ್ಷಿತ ವಿವಾದವೊಂದು ಭುಗಿಲೆದ್ದಿದೆ. ಹೌದು, ಸಾಂಪ್ರದಾಯಿಕವಾಗಿ ಹತ್ತು ಕೈಗಳಿರುವುದು ಸಾಮಾನ್ಯ. ಆದರೆ, ಸುವೇಂದು ಅಧಿಕಾರಿ ನೇತ್ರತ್ವದ ಬಿಜೆಪಿ ಸರ್ಕಾರ ನೀಡಿರುವ ಸರ್ಕಾರಿ ಜಾಹೀರಾತಿನಲ್ಲಿ ಹನ್ನೊಂದು ಕೈಗಳೊಂದಿಗೆ ತೋರಿಸಲಾಗಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಅದರಂತೆ, ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರಲಾಗಿದೆ ಎಂದು ಪ್ರತಿಪಕ್ಷಗಳು ಮುಗಿಬೀಳುತ್ತಿದ್ದಂತೆ, ಸ್ವತಃ ಮುಖ್ಯಮಂತ್ರಿಗಳೇ ವೇದಿಕೆಯಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಈ ಎಡವಟ್ಟು ನಡೆದಿದ್ದೇನು ಮತ್ತು ಇದರ ಸುತ್ತ ನಡೆಯುತ್ತಿರುವ ರಾಜಕೀಯ ಕೆಸರೆರಚಾಟದ ಪೂರ್ಣ ವಿವರ ಇಲ್ಲಿದೆ...

ಏನಿದು ವಿವಾದ?

ಪಶ್ಚಿಮ ಬಂಗಾಳ ಸರ್ಕಾರವು ಸೆಪ್ಟೆಂಬರ್ 7, 2026 ರಂದು ಹೊರಡಿಸಿದ ಅಧಿಕೃತ ಪತ್ರಿಕಾ ಜಾಹೀರಾತಿನಲ್ಲಿ ದುರ್ಗಾದೇವಿಯ ಚಿತ್ರಕ್ಕೆ ಸಾಂಪ್ರದಾಯಿಕ 10 ಕೈಗಳ ಬದಲಿಗೆ 11 ಕೈಗಳನ್ನು ಚಿತ್ರಿಸಲಾಗಿದೆ. ಕೋಲ್ಕತ್ತಾ ಪೊಲೀಸರು, ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ರಾಜ್ಯ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ದುರ್ಗಾ ಪೂಜಾ ಸಮನ್ವಯ ಸಭೆಯ ಈ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಂಗಾಳದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಫೋಟೋಗಳಿದ್ದವು. ಇದುವೇ, ಇಡೀ ರಾಜ್ಯದಲ್ಲಿ ಭಾರಿ ರಾಜಕೀಯ ಮತ್ತು ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ.

ಘಟನೆ ಸಂಬಂಧ ವಿರೋಧ ಪಕ್ಷವಾದ ಟಿಎಂಸಿ ಇದನ್ನು ಬಂಗಾಳದ ಸಂಸ್ಕೃತಿ ಮತ್ತು ಅಸ್ಮಿತೆಗೆ ಒದಗಿದ ಭಾರಿ ಅವಮಾನ ಎಂದು ಕರೆದಿದೆ. ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು, "ದುರ್ಗಾ ಪೂಜಾ ಸಮಿತಿಗಳಿಗೆ ಹತ್ತಾರು ನಿಯಮಗಳನ್ನು ಹೇರುವ ಸರ್ಕಾರಕ್ಕೆ, ತಾಯಿ ದುರ್ಗಾದೇವಿಯು ಸಾಂಪ್ರದಾಯಿಕವಾಗಿ ದಶಭುಜೆ ಎಂಬುದೇ ತಿಳಿದಿಲ್ಲವೇ? ದೇವಿಗೆ 11ನೇ ಕೈಯನ್ನು ಸೃಷ್ಟಿಸಿದ್ದು ಹೇಗೆ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಜೊತೆಗೆ, ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, "ಸನಾತನ ಧರ್ಮ ಮತ್ತು ಹಿಂದೂ ಸಂಪ್ರದಾಯದ ರಕ್ಷಕರು ಎಂದು ಹೇಳಿಕೊಳ್ಳುವ ಬಿಜೆಪಿಗೆ ದೇವಿಯ ಕೈಗಳನ್ನು ಸರಿಯಾಗಿ ಎಣಿಸಲು ಬರುವುದಿಲ್ಲವೇ?" ಎಂದು ಲೇವಡಿ ಮಾಡಿದ್ದಾರೆ.

ಒಂದು ಕೈ ಹೆಚ್ಚಿದ್ದರೆ ಆಕೆ ಮತ್ತಷ್ಟು ಶಕ್ತಿಶಾಲಿ

ಇನ್ನು ಚಿತ್ರವೂ ಭಾರೀ ವಿವಾದವಾಗುತ್ತಿದ್ದಂತೆ, ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಮೊದಲಿಗೆ ಕ್ಷಮೆಯಾಚಿಸುತ್ತೇನೆ. ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ದೋಷಪೂರಿತ ಜಾಹೀರಾತು ಪ್ರಕಟವಾಗಿದೆ. ಈ ತಪ್ಪು ಮಾಡಿದ ಜಾಹೀರಾತು ಸಂಸ್ಥೆಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಇಂತಹ ವಿಷಯಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಲಿದೆ," ಎಂದು ಹೇಳಿದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು, "ಇದು ಜಾಹೀರಾತು ಏಜೆನ್ಸಿ ಮಾಡಿರುವ ತಾಂತ್ರಿಕ ತಪ್ಪು, ಇದನ್ನು ರಾಜಕೀಯಗೊಳಿಸಬಾರದು" ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ದೇವಿಗೆ ಒಂದು ಕೈ ಹೆಚ್ಚಿದ್ದರೆ ಆಕೆ ಮತ್ತಷ್ಟು ಶಕ್ತಿಶಾಲಿಯಾಗುತ್ತಾಳೆ ಎಂದು ಹೇಳಿದ್ದಾರೆ.

ಮುಂದುವರೆದು, ಹಿಂದಿನ ಟಿಎಂಸಿ ಸರ್ಕಾರ ನಡೆಸುತ್ತಿದ್ದ ದುರ್ಗಾ ಪೂಜಾ ಕಾರ್ನಿವಲ್ ಅನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಇದರ ಬದಲಾಗಿ ಮಹಾಲಯದಂದು ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ 4 ಗಂಟೆಗಳ ಭವ್ಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಜೊತೆಗೆ, ಸಾಂಪ್ರದಾಯಿಕ ಮತ್ತು ಸನಾತನ ಧರ್ಮದ ಆಚರಣೆಗಳಿಗೆ ಧಕ್ಕೆ ಬಾರದಂತೆ ಥೀಮ್ ಆಧಾರಿತ ಪೂಜೆಗಳನ್ನು ಆಯೋಜಿಸಲು ಪೂಜಾ ಸಮಿತಿಗಳಿಗೆ ಸೂಚನೆ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

LPG ಗ್ರಾಹಕರಿಗೆ ಕೇಂದ್ರದ ಭರ್ಜರಿ ರಿಲೀಫ್: ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಕ್ಕೆ ಮತ್ತೊಂದು ಸಿಲಿಂಡರ್!

ಹಿಂದು ಧಾರ್ಮಿಕ ನಿಯೋಗ ಭೇಟಿ ವೇಳೆ ಮಹಿಳಾ ಸಿಬ್ಬಂದಿಗೆ ನಿರ್ಬಂಧ? ಪ್ಯಾರಿಸ್‌ನ Eiffel Tower ಬಂದ್, ಭಾರೀ ವಿವಾದ..!

ಮೆಜೆಸ್ಟಿಕ್‌ನಲ್ಲಿ ಜನಜಂಗುಳಿ, ಇಲ್ಲೆಲ್ಲಾ ಬಿಕೋ! ನಮ್ಮ ಮೆಟ್ರೋದ 20ಕ್ಕೂ ಹೆಚ್ಚು ಸ್ಟೇಷನ್‌ಗಳಲ್ಲಿ ಪ್ರಯಾಣಿಕರೇ ಇಲ್ಲ! ಅಸಲಿ ಕಾರಣವೇನು?

ಕೂಲ್.. ಕೂಲ್.. ಬೆಂಗಳೂರಿಗೆ ಏನಾಯ್ತು..? ಸೆಪ್ಟೆಂಬರ್‌ನಲ್ಲೇ ಏಪ್ರಿಲ್‌ ತಿಂಗಳ ಬಿಸಿಲು; 32 ಡಿಗ್ರಿ ದಾಟಿದ ತಾಪಮಾನ, ಸಿಲಿಕಾನ್‌ ಸಿಟಿ ಜನತೆ ಹೈರಾಣ..!

ಸೆ.20 ರಿಂದ 108 ಸೇವೆ ಬಂದ್: ಸರ್ಕಾರಕ್ಕೆ ಸಿಬ್ಬಂದಿ ಡೆಡ್‌ಲೈನ್; 3,500 ನೌಕರರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ!