ಹರ್ಯಾಣ: ಆರು ತಿಂಗಳ ಮಗುವಿನ ಮೇಲೆ ಪಿಟ್ಬುಲ್ ನಾಯಿ ದಾಳಿ ಮಾಡಿರುವ ಘಟನೆ ಹರಿಯಾಣದ ಸೋನಿಪತ್ನ ಸಿಕ್ಕಾ ಕಾಲೋನಿಯಲ್ಲಿ ನಡೆದಿದೆ.
ಮಹಿಳೆಯ ತೋಳಿನಲ್ಲಿದ್ದ ಮಗುವಿನ ಮೇಲೆ ಏಕಾಏಕಿ ನಾಯಿ ದಾಳಿ ನಡೆಸಿ, ಮಗುವನ್ನು ಕೆಳಕ್ಕೆ ಕೆಡವಿ ಕಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಏಕಾಏಕಿ ನುಗ್ಗಿ ಬಂದ ಪಿಟ್ ಬುಲ್, ಇಬ್ಬರನ್ನೂ ಕೆಡವಿ ಮಗುವನ್ನು ಕಚ್ಚಿ ರಸ್ತೆಯುದ್ದಕ್ಕೂ ಎಳೆದೊಯ್ದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ಭೀಕರ ದೃಶ್ಯ ಸೆರೆಯಾಗಿದ್ದು, ರಕ್ತಸಿಕ್ತವಾಗಿ ಗಂಭೀರ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ.
ಸ್ಥಳೀಯರು ಓಡಿಬಂದು ನಾಯಿಯನ್ನು ಹೊಡೆದು ಮಗುವನ್ನು ರಕ್ಷಿಸಲು ಯತ್ನಿಸಿದರೂ, ನಾಯಿ ಮಗುವನ್ನು ಬಿಡಲು ನಿರಾಕರಿಸಿ ಕಚ್ಚಿ ಹಿಡಿದಿತ್ತು. ಕೊನೆಗೆ ಪ್ರಯಾಸಪಟ್ಟು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಯಿತು. ದಾಳಿಯಿಂದ ಮಗುವಿನ ತಲೆ, ಮುಖ ಹಾಗೂ ದೇಹದ ಭಾಗಗಳಿಗೆ ತೀವ್ರ ಗಾಯಗಳಾಗಿವೆ.