ರಾಹುಲ್ ಗಾಂಧಿ 
ದೇಶ

TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ': ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

ಮೊದಲು ಶಿವಸೇನೆ, ನಂತರ ಎನ್‌ಸಿಪಿ, ಈಗ ತೃಣಮೂಲ ಕಾಂಗ್ರೆಸ್. ಪ್ರತಿಬಾರಿಯೂ ಒಂದೇ ಮಾದರಿ, ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ಪಕ್ಷವನ್ನು ವಿಭಜಿಸುತ್ತವೆ. ಬಳಿಕ ಅದರ ಚುನಾವಣಾ ಚಿಹ್ನೆಯನ್ನು ಕಸಿದುಕೊಳ್ಳಲಾಗುತ್ತದೆ.

ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹೆಸರು ಮತ್ತು ಅದರ ಅಧಿಕೃತ ಚಿಹ್ನೆಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು (freeze) ಹಾಕಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗವು ಜನರ ಜನಾದೇಶವನ್ನು ರಕ್ಷಿಸುವ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ತಮ್ಮ ಪ್ರಕಾರ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿರುವ ಶಕ್ತಿಗಳಿಗೆ ನೆರವಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ಮೊದಲು ಶಿವಸೇನೆ, ನಂತರ ಎನ್‌ಸಿಪಿ, ಈಗ ತೃಣಮೂಲ ಕಾಂಗ್ರೆಸ್. ಪ್ರತಿಬಾರಿಯೂ ಒಂದೇ ಮಾದರಿ — ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ಪಕ್ಷವನ್ನು ವಿಭಜಿಸುತ್ತವೆ. ಬಳಿಕ ಅದರ ಚುನಾವಣಾ ಚಿಹ್ನೆಯನ್ನು ಕಸಿದುಕೊಳ್ಳಲಾಗುತ್ತದೆ.

ಒಂದು ಸಂಪೂರ್ಣ ರಾಜಕೀಯ ಪಕ್ಷವನ್ನೇ ‘ಕದ್ದುಕೊಳ್ಳಲು’ ಸಾಧ್ಯವಾದರೆ, ಕೋಟ್ಯಂತರ ಭಾರತೀಯರ ಮತಗಳನ್ನೂ ‘ಕದಿಯಬಹುದು’ ಎಂಬುದರಲ್ಲಿ ಅಚ್ಚರಿಯೇನಿಲ್ಲ. ಮತ ಕಳ್ಳತನ. ಸರ್ಕಾರ ಕಳ್ಳತನ. ಈಗ ಪಕ್ಷ ಕಳ್ಳತನ — ಇವು ನಮ್ಮ ಪ್ರಜಾಪ್ರಭುತ್ವದ ಅವನತಿಯ ಸಂಕೇತಗಳಾಗಿವೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗದ ಸಾಂವಿಧಾನಿಕ ಹೊಣೆಗಾರಿಕೆ ಜನಾದೇಶವನ್ನು ರಕ್ಷಿಸುವುದಾಗಿದೆ. ಆದರೆ, ಜನರ ತೀರ್ಪನ್ನು ಬುಡಮೇಲು ಮಾಡುವ ಅದೇ ಶಕ್ತಿಗಳಿಗೆ ಅದು ನೆರವಾಗುತ್ತಿದೆ. ಈ ಹೋರಾಟ ಕೇವಲ ಮಮತಾ ಬ್ಯಾನರ್ಜಿ ಅವರದ್ದಲ್ಲ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಂದು ರಾಜಕೀಯ ಪಕ್ಷ ಹಾಗೂ ಪ್ರತಿಯೊಬ್ಬ ಮತದಾರನ ಹೋರಾಟವೂ ಇದಾಗಿದೆ ಎಂದು ತಿಳಿಸಿದ್ದಾರೆ.

ಗುರುವಾರ ಚುನಾವಣಾ ಆಯೋಗದ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿತ್ತು. ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸಿರುವುದು ಚುನಾವಣಾ ಆಯೋಗ ತನ್ನ ಸಾಂವಿಧಾನಿಕ ಹೊಣೆಗಾರಿಕೆಯಿಂದ ಹಿಂದೆ ಸರಿದಿರುವುದಕ್ಕೆ ಸಮಾನ ಎಂದು ಪಕ್ಷ ಆರೋಪಿಸಿತ್ತು. ಅಲ್ಲದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ‘ತಡರಾತ್ರಿ ಹುಟ್ಟುಹಬ್ಬದ ಉಡುಗೊರೆ ಎಂದು ವ್ಯಂಗ್ಯವಾಡಿತ್ತು.

ಮಮತಾ ಬ್ಯಾನರ್ಜಿ ಮತ್ತು ಅರೂಪ್ ರಾಯ್ ನೇತೃತ್ವದ ಎರಡು ಟಿಎಂಸಿ ಬಣಗಳ ಪ್ರತಿನಿಧಿಗಳ ವಾದ ಆಲಿಸಿದ ಬಳಿಕ ಚುನಾವಣಾ ಆಯೋಗ ಗುರುವಾರ ರಾತ್ರಿ ಮಧ್ಯಂತರ ಆದೇಶ ಹೊರಡಿಸಿತ್ತು.

ಎರಡೂ ಬಣಗಳು ತಾವೇ ಪಕ್ಷವನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಂಡಿದ್ದು, ಈ ವಿವಾದಕ್ಕೆ ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968ರ ಪ್ಯಾರಾಗ್ರಾಫ್ 15ರ ಅಡಿಯಲ್ಲಿ ಸಮಗ್ರವಾಗಿ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಆಯೋಗ ತಿಳಿಸಿತ್ತು.

ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಪ್ರಸ್ತುತ ಉಪಚುನಾವಣೆಗಳಿಗೆ ಮಾತ್ರ ಅನ್ವಯವಾಗುವಂತೆ ಎರಡೂ ಬಣಗಳನ್ನು ಸಮಾನ ನೆಲೆಯಲ್ಲಿ ಇರಿಸುವುದು ಹಾಗೂ ಅವುಗಳ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವುದು ಮಧ್ಯಂತರ ವ್ಯವಸ್ಥೆಯ ಉದ್ದೇಶವಾಗಿದೆ ಎಂದು ಆಯೋಗ ಹೇಳಿದೆ.

ಅರ್ಜಿದಾರ ಅರೂಪ್ ರಾಯ್ ಹಾಗೂ ಪ್ರತಿವಾದಿ ಮಮತಾ ಬ್ಯಾನರ್ಜಿ ನೇತೃತ್ವದ ಯಾವುದೇ ಬಣಕ್ಕೂ ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಎಂಬ ಪಕ್ಷದ ಹೆಸರನ್ನು ಬಳಸಲು ಅನುಮತಿ ನೀಡಲಾಗುವುದಿಲ್ಲ” ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಉಪಚುನಾವಣೆಗಳಿಗೆ ತಮ್ಮ ಆಯ್ಕೆಯ ಪಕ್ಷದ ಹೆಸರುಗಳು ಮತ್ತು ಚುನಾವಣಾ ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಎರಡೂ ಬಣಗಳಿಗೆ ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ಭೀಕರ ದಾಳಿ: ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು, Hormuz ಜಲಸಂಧಿಯಲ್ಲಿ ಹೆಚ್ಚಿದ ಉದ್ವಿಗ್ನತೆ..!

TMC ಪಕ್ಷದ ಹೆಸರು, ಚಿಹ್ನೆ ಫ್ರೀಜ್ ಮಾಡಿದ ಚುನಾವಣಾ ಆಯೋಗ: ಉಪಚುನಾವಣೆ ಹೊತ್ತಲ್ಲೇ ದೀದಿಗೆ ಶಾಕ್‌, ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ..!

ಸ್ಥಳೀಯ ಚುನಾವಣೆಗಳಿಗೆ ಕಾಂಗ್ರೆಸ್‌ ರಣತಂತ್ರ: ಜಿಲ್ಲಾಧ್ಯಕ್ಷರ ಕಾರ್ಯಕ್ಷಮತೆ ಮೇಲೆ ಹೈಕಮಾಂಡ್‌ ಕಣ್ಣು, ಬೂತ್‌ನಿಂದ ಜಿಲ್ಲಾ ಮಟ್ಟದವರೆಗೆ ಸಂಘಟನೆಗೆ ಸೂಚನೆ..!

ED ದಾಳಿ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿ ಬೆನ್ನಿಗೆ ನಿಂತ ಎಸ್‌ಟಿ ಸಮುದಾಯ: ಬೃಹತ್‌ ಸಮಾವೇಶಕ್ಕೆ ಮುಂದು, ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು..!

ಕಾಂಗ್ರೆಸ್‌ ದೇಶವಿರೋಧಿಗಳ ಪರ, ಉಮರ್ ಖಾಲಿದ್‌ ಪರ ಹರಿಪ್ರಸಾದ್ ಹೇಳಿಕೆಗೆ ಸಂಸದ ಬೊಮ್ಮಾಯಿ ತೀವ್ರ ಕಿಡಿ