ಪ್ರಕಾಶ್ ರಾಜ್ - ವಿಜಯ್ 
ದೇಶ

'ಒಂದು ವರ್ಷದ ನಂತರ ವಿಜಯ್‌ರನ್ನು ಪ್ರಶ್ನಿಸುತ್ತೇನೆ': TVK ಕಾರ್ಯವೈಖರಿ ಕುರಿತು ಈಗಲೇ ಮಾತು ಬೇಡ; ಪ್ರಕಾಶ್ ರಾಜ್

'SIR ಪ್ರಕ್ರಿಯೆಯು 16 ಕೋಟಿ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸಿದೆ. ಕೇಂದ್ರ ಸರ್ಕಾರ ನಿರ್ಗಮಿಸುವ ಸಮಯ ಬಂದಿದೆ, ಹಾಗಾಗಿಯೇ ಅವರು ಮೌನವಾಗಿದ್ದಾರೆ' ಎಂದು ಹೇಳಿದರು.

ತಿರುಚಿರಾಪಳ್ಳಿ (ತಮಿಳುನಾಡು): ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರವು ಅಧಿಕಾರ ವಹಿಸಿಕೊಂಡು ಕೇವಲ 120 ದಿನಗಳಾಗಿರುವುದರಿಂದ ಅದರ ಕಾರ್ಯಕ್ಷಮತೆಯನ್ನು ಈಗಲೇ ಮೌಲ್ಯಮಾಪನ ಮಾಡುವುದು ಸರಿಯಲ್ಲ. ಸರ್ಕಾರಕ್ಕೆ ಒಂದು ವರ್ಷದ ಕಾಲಾವಕಾಶ ನೀಡಬೇಕು ಮತ್ತು ಒಂದು ವರ್ಷದ ನಂತರವೂ ಸರ್ಕಾರ ನಿರೀಕ್ಷಿತ ಕೆಲಸಗಳನ್ನು ಮಾಡದಿದ್ದರೆ ತಾವು ಅದನ್ನು ಪ್ರಶ್ನಿಸುವುದಾಗಿ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ತಿರುಚಿರಾಪಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್ ರಾಜ್, ಜನರು ಅವರಿಗೆ ಮತ ಹಾಕಿದ್ದಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ವಿಜಯ್ ಅವರಿಗೆ ಕೆಲಸ ಮಾಡಲು ಸಾಕಷ್ಟು ಸಮಯ ನೀಡಬೇಕು ಎಂದು ಹೇಳಿದರು.

'ತಮಗೆ ಮತ ಹಾಕಿದವರಿಗೆ ಮಾತ್ರವಲ್ಲದೆ, ಮತ ಹಾಕದವರಿಗೂ ವಿಜಯ್ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ಹೆಚ್ಚಿನ ಸಮಯ ನೀಡಬೇಕು. ಅವರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಪ್ರತಿಕ್ರಿಯಿಸುವ ಮುನ್ನ ಕನಿಷ್ಠ ಒಂದು ವರ್ಷದ ಕಾಲಾವಕಾಶವನ್ನಾದರೂ ನೀಡಬೇಕು' ಎಂದು ಅವರು ಹೇಳಿದರು.

ಸದ್ಯ ನಡೆಯುತ್ತಿರುವ ಪ್ರತಿಭಟನೆಗಳನ್ನು, ಪ್ರತಿಯೊಂದು ಸರ್ಕಾರದ ಅಡಿಯಲ್ಲಿಯೂ ಜನರು ತಮ್ಮ ಬೇಡಿಕೆಗಳನ್ನು ಮಂಡಿಸುತ್ತಲೇ ಬಂದಿರುವ ಹಿನ್ನೆಲೆಯಲ್ಲಿಯೇ ನೋಡಬೇಕು ಎಂದು ಪ್ರಕಾಶ್ ರಾಜ್ ಹೇಳಿದರು.

'ವಿಜಯ್ ಬಗ್ಗೆ ನನಗೆ ಹಲವು ಅನುಮಾನಗಳಿವೆ. ಚುನಾವಣೆಗೂ ಮುನ್ನವೇ ನಾನು ಅವುಗಳ ಬಗ್ಗೆ ಮಾತನಾಡಿದ್ದೆ. ಆದರೆ ಅವರು ಗೆದ್ದು ಸರ್ಕಾರ ರಚಿಸಿದ್ದಾರೆ. ಕೇವಲ 120 ದಿನಗಳಷ್ಟೇ ಆಗಿರುವುದರಿಂದ, ಈಗಲೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ನಾವು ಅವರಿಗೆ ಸಮಯ ನೀಡಬೇಕು. ಒಂದು ವರ್ಷದ ನಂತರವೂ ಅವರು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ನಾನು ಅವರನ್ನು ಪ್ರಶ್ನಿಸುತ್ತೇನೆ' ಎಂದು ಅವರು ಹೇಳಿದರು.

'ನಾನು ಮೊದಲ ಬಜೆಟ್ ಮಂಡನೆಯಾಗುವವರೆಗೆ ಕಾಯುತ್ತಿದ್ದೇನೆ. ಅವರನ್ನು ತಕ್ಷಣವೇ ಟೀಕಿಸುವ ಅಗತ್ಯವಿಲ್ಲ. ಅಧಿಕಾರದಲ್ಲಿರುವವರು ನಮಗೆ ಇಷ್ಟವಿಲ್ಲದ ಕಾರಣಕ್ಕಾಗಿಯೇ ನಾವು ಅವರನ್ನು ಟೀಕಿಸಲು ಧಾವಿಸಬಾರದು. ನಾವು ಪ್ರಜಾಪ್ರಭುತ್ವ ಮತ್ತು ಜನರನ್ನು ಗೌರವಿಸಬೇಕು' ಎಂದು ಅವರು ಹೇಳಿದರು.

ವಿಜಯ್ ಅವರ ವಿದೇಶ ಪ್ರವಾಸ ಮತ್ತು ನಟ ಅಜಿತ್ ಅವರೊಂದಿಗಿನ ಭೇಟಿಯ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, 'ಅವರು ವಿದೇಶಕ್ಕೆ ತೆರಳಿ ತಮ್ಮ ಸ್ನೇಹಿತ ಅಜಿತ್ ಅವರನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಯಾವ ಉದ್ದೇಶಕ್ಕಾಗಿ ಅಲ್ಲಿಗೆ ಹೋಗಿದ್ದರೋ, ಆ ಉದ್ದೇಶವನ್ನು ಈಡೇರಿಸಿಕೊಂಡರೇ ಎಂಬುದು ಮುಖ್ಯ. ತಾವು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯನ್ನು ತಂದಿರುವುದಾಗಿ ಅವರು ಹೇಳಿದ್ದಾರೆ' ಎಂದು ತಿಳಿಸಿದರು.

ಕೋಲತ್ತೂರ್‌ನಲ್ಲಿ ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚುನಾವಣೆಯಲ್ಲಿ ಸೋತಿರುವ ಕುರಿತು ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯು ಇದರಲ್ಲಿ ಏನಾದರೂ ಪಾತ್ರ ವಹಿಸಿದೆಯೇ ಎಂಬುದೂ ಸೇರಿದಂತೆ, ಸೋಲಿಗೆ ಕಾರಣಗಳನ್ನು ಪರಿಶೀಲಿಸಬೇಕಾಗಿದೆ. ಸ್ಟಾಲಿನ್ ಅವರಂತಹ ನಾಯಕರೊಬ್ಬರು ಸೋಲನ್ನು ಅನುಭವಿಸಿರುವುದು ದೊಡ್ಡ ಆಘಾತಕಾರಿ ವಿಷಯವಾಗಿದೆ. ಇದರಲ್ಲಿ SIR ಪ್ರಕ್ರಿಯೆಯ ಪಾತ್ರವೇನಾದರೂ ಇದೆಯೇ ಎಂದು ನಾವು ವಿಶ್ಲೇಷಿಸಬೇಕಾಗಿದೆ' ಎಂದು ಹೇಳಿದರು.

'SIR ಪ್ರಕ್ರಿಯೆಯು 16 ಕೋಟಿ ಜನರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸಿದೆ. ಕೇಂದ್ರ ಸರ್ಕಾರ ನಿರ್ಗಮಿಸುವ ಸಮಯ ಬಂದಿದೆ, ಹಾಗಾಗಿಯೇ ಅವರು ಮೌನವಾಗಿದ್ದಾರೆ' ಎಂದು ಹೇಳಿದರು.

ಕ್ಷೇತ್ರ ಮರುವಿಂಗಡಣೆ ವಿಷಯದಲ್ಲಿ ಮಾತನಾಡಿದ ಅವರು, ಇದನ್ನು ಜಾರಿಗೆ ತರಬಾರದು. ಈ ಪ್ರಸ್ತಾವನೆಯನ್ನು ಯಾರು ಬೆಂಬಲಿಸಿದರೂ ಅದರ ವಿರುದ್ಧ ಧ್ವನಿ ಎತ್ತುವಂತೆ ಜನರಿಗೆ ಕರೆ ನೀಡಿದರು.

ತಮಿಳುನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತು ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ಉಭಯ ಪಕ್ಷಗಳ ನಡುವೆ ಮಾತುಕತೆ ನಡೆಯಬೇಕು. ಕರ್ನಾಟಕದ ವಿಷಯ ಅವರ ಸಮಸ್ಯೆ ಮತ್ತು ತಮಿಳುನಾಡಿನ ವಿಷಯ ನಮ್ಮ ಸಮಸ್ಯೆ. ಕಾವೇರಿ ವಿಷಯದ ಕುರಿತು ಎರಡೂ ಕಡೆಯವರು ಚರ್ಚಿಸಿ, ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

ಡಿಎಂಕೆ ಹಿಂದೆ ಎದುರಿಸಿದ ಚುನಾವಣಾ ಸೋಲು ಕೃತಕ ಪ್ರಕ್ರಿಯೆಯ ಫಲಿತಾಂಶವಾಗಿರಬಹುದು ಮತ್ತು ಮತದಾರರು ಬದಲಾವಣೆಯನ್ನು ಬಯಸಿದ್ದರು. ಪ್ರಜಾಪ್ರಭುತ್ವದಲ್ಲಿ, ಜನರು ಬದಲಾವಣೆ ಬಯಸಿದಾಗ ಆಡಳಿತಾರೂಢ ಪಕ್ಷವೇ ಸೋಲನ್ನು ಎದುರಿಸಬೇಕಾಗುತ್ತದೆ. ನಾವು ಜನರಿಗೆ ಎಲ್ಲವನ್ನೂ ಒಂದೊಂದಾಗಿ ಕಲಿಸುವ ಅಗತ್ಯವಿಲ್ಲ. ಅವರಿಗೆ ಒಂದು ವರ್ಷದ ಕಾಲಾವಕಾಶ ನೀಡಿ, ಕೆಲಸ ಮಾಡಲು ಬಿಡಬೇಕು ಎಂಬುದನ್ನು ಪುನರುಚ್ಚರಿಸಿದರು.

ನಟ-ರಾಜಕಾರಣಿ ಸಿ ಜೋಸೆಫ್ ವಿಜಯ್ ಮತ್ತು ಅವರ ಹೊಸದಾಗಿ ಸ್ಥಾಪಿತವಾದ ಪಕ್ಷವಾದ 'ತಮಿಳಿಗ ವೆಟ್ರಿ ಕಳಗಂ' (ಟಿವಿಕೆ), 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಧಾನಿ ಮೋದಿ ಕುರಿತು ಮಿಮಿಕ್ರಿ, ದಿವಂಗತ ತಾಯಿಗೆ ಅಪಮಾನ: ‘ಅಸಭ್ಯ ಸಂಸ್ಕೃತಿಗೆ ರಾಹುಲ್ ಬೆಂಬಲ’; ಕಾಂಗ್ರೆಸ್ ವಿರುದ್ಧ BJP ವಾಗ್ದಾಳಿ

ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು, 3 ವಿದ್ಯಾರ್ಥಿಗಳ ಸಾವು! Video

ಯಾರನ್ನೂ ಬಿಟ್ಟಿಲ್ಲ ವೈಫಲ್ಯ: "ಆ ದಿನ ನನ್ನ ವೃತ್ತಿ ಜೀವನ ಮುಗಿದೇ ಹೋಗಿತ್ತು ಎಂದುಕೊಂಡಿದ್ದೆ...": ಅಜಿತ್ ದೋವಲ್

ಕೋರಮಂಗಲ ಪೊಲೀಸ್ ಠಾಣೆ ಸಮೀಪದಲ್ಲೇ ಐಷಾರಾಮಿ ಕಾರಿನಲ್ಲಿ ವ್ಯಕ್ತಿ ಶವಪತ್ತೆ!

ಮುಂಗಾರು ಹಿಂತೆಗೆತ ಆರಂಭ; ‘Arnab’ ಚಂಡಮಾರುತ ಭೀತಿ, ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!