ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರಗತಿಯ ಪರಿಷ್ಕರಣಾ ಪ್ರಕ್ರಿಯೆಯು ಅರ್ಹ ಮತದಾರರನ್ನು ಕಿತ್ತು ಹಾಕುವ ಮತ್ತು ಅನರ್ಹರನ್ನು ಸೇರ್ಪಡೆಗೊಳಿಸಲು ಕ್ರಮವಾಗಿದೆ ಎಂದು ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಭಾನುವಾರ ಚುನಾವಣಾ ಆಯೋಗವನ್ನು ಟೀಕಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವಂತೆ ಮಾಡುವುದೇ ಚುನಾವಣಾ ಆಯೋಗದ ಉದ್ದೇಶವಾಗಿದ್ದರೆ, ದೇಶದಲ್ಲಿ ಇನ್ನು ಚುನಾವಣೆ ನಡೆಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಮತದಾರರ ಪಟ್ಟಿಯ 'ವಿಶೇಷ ತೀವ್ರಗತಿಯ ಪರಿಷ್ಕರಣೆ' (SIR) ಪ್ರಕ್ರಿಯೆಯಡಿ, "ಹಿಂದಿನ ಎಸ್‌ಐಆರ್‌ನೊಂದಿಗೆ ಹೊಂದಾಣಿಕೆಯಾಗದ" (unmapped with last SIR) ವರ್ಗದಡಿ ತಮಗೆ ಮತ್ತು ತಮ್ಮ ಪತ್ನಿಗೆ ನೋಟಿಸ್ ಜಾರಿಯಾದ ನಂತರ ಸಿಬಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನಂತವರಿಗೆ ಹೀಗಾದಾಗ ಸಾಮಾನ್ಯ ಮತದಾರರು ಎಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಮತ್ತು ಅವರು ಈ ಪ್ರಕ್ರಿಯೆಯನ್ನು ಹೇಗೆ ನಿಭಾಯಿಸಬಲ್ಲರು ಎಂಬುದನ್ನು ಊಹಿಸಿಕೊಳ್ಳಬಹುದು ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಬಲ್, "ಮುಖ್ಯ ಚುನಾವಣಾ ಆಯುಕ್ತ ಜ್ವಾನೇಶ್ ಕುಮಾರ್ ಅವರು ಆ ಹುದ್ದೆಯಲ್ಲಿ ಏಕೆ ಕುಳಿತಿದ್ದಾರೆ? ಅವರು ಯಾವ ಆಧಾರದ ಮೇಲೆ ಇದನ್ನು ಮಾಡುತ್ತಿದ್ದಾರೆ ಮತ್ತು ಅವರಿಗೆ ಇದನ್ನು ಮಾಡಲು ಯಾಕೆ ಅವಕಾಶ ನೀಡಲಾಗುತ್ತಿದೆ?" ಎಂದು ಪ್ರಶ್ನಿಸಿದರು. ಕರಡು ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಇದ್ದರೂ ನೋಟಿಸ್ ಕಳುಹಿಸಲಾಗಿದೆ ಎಂಬುದನ್ನು ತಿಳಿದು ಆಘಾತವಾಯಿತು ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ಮತದಾರರ ಪಟ್ಟಿಯಲ್ಲಿರುವ ನನ್ನ ತಂದೆಯ ಅಥವಾ ನನ್ನ ಸ್ವಂತ ಹೆಸರಿನ ವಿವರಗಳು, ಹಿಂದಿನ ಎಸ್‌ಐಆರ್ ಸಮಯದಲ್ಲಿ ಸಿದ್ಧಪಡಿಸಲಾದ ಮತದಾರರ ಪಟ್ಟಿಯಲ್ಲಿರುವ ವಿವರಗಳೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಯಾರಿಗೆ ನೋಟಿಸ್ ಕಳುಹಿಸಬೇಕು ಮತ್ತು ಯಾರಿಗೆ ಕಳುಹಿಸಬಾರದು ಎಂಬುದರ ಬಗ್ಗೆ ಸೂಕ್ತವಾಗಿ ಯೋಚಿಸದೆ ಅಥವಾ ವಿವೇಚನೆ ಬಳಸದೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿರುವ ರೀತಿ ಇದು. ಸಾರ್ವಜನಿಕ ವ್ಯಕ್ತಿಗಳೆಂದು ಪರಿಗಣಿಸಲ್ಪಡುವ ನಮ್ಮಂಥವರಿಗೇ ಹೀಗಾದರೆ, ಇನ್ನು ಸಾಮಾನ್ಯ ಮನುಷ್ಯನ ಗತಿಯೇನು? ಆತ ಹೇಗೆ ನಿಭಾಯಿಸಲು ಸಾಧ್ಯ? ಎಂದರು.
"ನನಗೆ ಕಳುಹಿಸಲಾದ ನೋಟಿಸ್‌ನ ಭೌತಿಕ ಪ್ರತಿ ಇದುವರೆಗೂ ನನ್ನ ಕೈಸೇರಿಲ್ಲ. ನನ್ನ ಬಳಿ ಅದರ ಪ್ರತಿಯಿಲ್ಲ. ಅದನ್ನು ಇಲ್ಲಿ ತಲುಪಿಸಲಾಗಿಲ್ಲ ಅಥವಾ ನನ್ನ ಕಚೇರಿಯಲ್ಲಿಯೂ ಇಲ್ಲ. ಒಂದು ವೇಳೆ ನನಗೆ ಇದರ ಬಗ್ಗೆ ತಿಳಿದಿರದಿದ್ದಿದ್ದರೆ, ಅವರು ಇದೇ ರೀತಿಯ ನೋಟಿಸ್‌ಗಳನ್ನು ಕಳುಹಿಸಿ ನನ್ನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುತ್ತಿದ್ದರು. ಆಗ ನಾನು ಸುಪ್ರೀಂ ಕೋರ್ಟ್‌ಗೆ ಹೋಗಿ 'ದಯವಿಟ್ಟು ನನ್ನ ಹೆಸರನ್ನು ತೆಗೆದುಹಾಕಬೇಡಿ' ಎಂದು ಮನವಿ ಸಲ್ಲಿಸಬೇಕಾದ ಪರಿಸ್ಥಿತಿ ಬರುತ್ತಿತ್ತು. ಈ ದೇಶದಲ್ಲಿ ಏನಾಗುತ್ತಿದೆ?" ಎಂದು ಸಿಬಲ್ ಪ್ರಶ್ನಿಸಿದರು.
"ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಇದು ವಿಶೇಷ ತೀವ್ರ ಅಳಿಸುವಿಕೆ ಮತ್ತು ವಿಶೇಷ ತೀವ್ರ ಸೇರ್ಪಡೆಯಾಗಿದೆ. ಅಂದರೆ ಅರ್ಹ ಮತಗಳನ್ನು ಅಳಿಸುವುದು ಮತ್ತು ಅನರ್ಹ ಮತಗಳನ್ನು ಸೇರಿಸುವುದು. ಇದೇ ಇದರ ಮೂಲ ಉದ್ದೇಶವಾಗಿದೆ. 2029ರ ಚುನಾವಣೆಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ದುರುದ್ದೇಶಪೂರಿತ ಹಾಗೂ ಅಪ್ರಾಮಾಣಿಕ" ಪ್ರಕ್ರಿಯೆಯೊಂದು ನಡೆಯುತ್ತಿದೆ ಎಂದು ಸಿಬಲ್ ಆರೋಪಿಸಿದರು.