ಕೋಲ್ಕತ್ತಾ: 19 ವರ್ಷಗಳ ಹಿಂದೆ ಖೇಜುರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ನಂದಿಗ್ರಾಮ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನ್ಯಾಯಾಲಯವೊಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಾಂತೈ ನ್ಯಾಯಾಲಯವು ಪ್ರಧಾನ್ ಅವರನ್ನು ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ ಎಂದು ಅವರ ಪರ ವಕೀಲ ಅಯಾನ್ ಭಟ್ಟಾಚಾರ್ಯ ತಿಳಿಸಿದ್ದಾರೆ. ಅಲ್ಲದೆ, ಈ ಆದೇಶವನ್ನು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿಯೂ ಅವರು ಹೇಳಿದ್ದಾರೆ.
2007ರ ನಂದಿಗ್ರಾಮ ಭೂ ಹೋರಾಟದ ಸಂದರ್ಭದ ಕೊಲೆ ಸೇರಿದಂತೆ ಹಲವು ಆರೋಪಗಳ ಮೇಲೆ ಬಂಧನಕ್ಕೊಳಗಾದ ಮರುದಿನವೇ, ಅಂದರೆ ಸೆಪ್ಟೆಂಬರ್ 19ರಂದು, ಹಲ್ದಿಯಾ ನ್ಯಾಯಾಲಯವು ಪ್ರಧಾನ್ ಅವರನ್ನು ಅಕ್ಟೋಬರ್ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಈ ಆದೇಶದಿಂದಾಗಿ ಪ್ರಧಾನ್, ಚುನಾವಣಾ ಪ್ರಚಾರ ನಡೆಸುವ ಅವಕಾಶವನ್ನು ಕಳೆದುಕೊಂಡಂತಾಗಿದೆ. ಏಕೆಂದರೆ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ತೆರವುಗೊಳಿಸಿದ ಈ ವಿಧಾನಸಭಾ ಕ್ಷೇತ್ರಕ್ಕೆ ಅಕ್ಟೋಬರ್ 6ರಂದು ನಡೆಯಲಿರುವ ಉಪಚುನಾವಣೆಯ ಪ್ರಚಾರವು ಅಕ್ಟೋಬರ್ 4ರಂದು ಕೊನೆಗೊಳ್ಳಲಿದೆ.
ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ ನಂತರ, ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ ಅಧಿಕಾರಿ, ಮೇ ತಿಂಗಳಲ್ಲಿ ನಂದಿಗ್ರಾಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.